ಗದಗ: 2025- 26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವೀರಶೈವ ಲಿಂಗಾಯತ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆ. 19ರಂದು ಗದಗ ಎಪಿಎಂಸಿಯ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ತಿಳಿಸಿದರು.
ನಗರದ ವೀರಶೈವ ಜನರಲ್ ಲೈಬ್ರರಿಯ ಆವರಣದಲ್ಲಿರುವ ಮಹಾಸಭೆಯ ಕಾರ್ಯಾಲಯದಲ್ಲಿ ನಡೆದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಂತ್ರಿಕ ಸಮಸ್ಯೆಯಿಂದಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅರ್ಹ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಜು. 30ರೊಳಗೆ ಮಹಾಸಭೆಯ ಕಾರ್ಯಾಲಯವನ್ನು ಸಂಪರ್ಕಿಸಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು ಎಂದರು.ಕಳಸಾಪುರ ರಸ್ತೆಯಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿರುವ ಬಸವ ಭವನ ಸಮುದಾಯ ಭವನದ ಕಾಮಗಾರಿಯನ್ನು ದಾನಿಗಳ ಸಹಕಾರದೊಂದಿಗೆ ವೇಗಗೊಳಿಸಲು ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಸದಾಶಿವಯ್ಯ ಮದರಿಮಠ ಅವರು ವೈಯಕ್ತಿಕವಾಗಿ ₹5 ಲಕ್ಷ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ರೇವಡಿ ₹2 ಲಕ್ಷ ದೇಣಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಆಜೀವ ಸದಸ್ಯತ್ವ ಅಭಿಯಾನದಿಂದ ₹13 ಲಕ್ಷ ಸಂಗ್ರಹವಾಗಿದೆ. ಆದರೆ, ಮಾದರಿ ಹಾಗೂ ಸುಸಜ್ಜಿತ ಹವಾನಿಯಂತ್ರಿತ ಸಮುದಾಯ ಭವನ ನಿರ್ಮಾಣಕ್ಕೆ ಇನ್ನೂ ಹೆಚ್ಚಿನ ಆರ್ಥಿಕ ನೆರವು ಅಗತ್ಯವಿದ್ದು, ಸಮಾಜದ ದಾನಿಗಳು ಹಾಗೂ ಸಮಾಜದವರು ಈ ಮಹತ್ವದ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ವಿನಂತಿಸಿದರು.
ಆ. 19ರಂದು ನಡೆಯಲಿರುವ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರೂ ಆದ ಸಚಿವ ಈಶ್ವರ ಖಂಡ್ರೆ ಅವರು ಆಗಮಿಸಲಿದ್ದು, ಅವರ ಭೇಟಿಯು ಬಸವ ಭವನ ನಿರ್ಮಾಣ ಕಾರ್ಯಕ್ಕೆ ಹೆಚ್ಚಿನ ವೇಗ ಮತ್ತು ಉತ್ತೇಜನ ದೊರೆಯಲಿದೆ ಎಂದರು.ಸಭೆಯಲ್ಲಿ ಕಾರ್ಯದರ್ಶಿ ಮುರುಘರಾಜೇಂದ್ರ ಬಡ್ನಿ, ಖಜಾಂಚಿ ಚನ್ನವೀರಪ್ಪ ಹುಣಶೀಕಟ್ಟಿ, ಪ್ರಮುಖರಾದ ಎಂ.ಎಸ್. ಮಲ್ಲಾಪೂರ, ಸಿದ್ದು ಜೀವನಗೌಡ್ರ, ಮಹೇಶ ಕೋಟಿ, ಶಂಭು ಕಾರಕಟ್ಟಿ, ಉಮೇಶ ಹೂಗಾರ, ಉಮಾ ಕಾತರಕಿ, ಸುಪರ್ಣಾ ಬ್ಯಾಹಟ್ಟಿ, ಜಯಶ್ರೀ ಉಗಲಾಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.