ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಜೂ.21ರಂದು ನಡೆಯಲಿರುವ ರಾಜ್ಯಮಟ್ಟದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಯಶಸ್ವಿಗೆ ನಮ್ಮ ಸಂಘದ ಜಿಲ್ಲೆಯ ಪ್ರತಿಯೊಬ್ಬ ಸದಸ್ಯರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಅಂತಿಮ ಪರಿಶೀಲನೆ ನಡೆಸಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು. ನಂತರ ಹನೂರು ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಕ್ಕಳಿಗೆ ಪ್ರತಿ ವರ್ಷವೂ ಒಂದೊಂದು ಜಿಲ್ಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಈ ಬಾರಿ ಚಾಮರಾಜನಗರ ಜಿಲ್ಲೆಯ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಆಯೋಜನೆ ಮಾಡಲಾಗಿದೆ. ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಜಿಲ್ಲೆಯ ಐದು ತಾಲೂಕು ಘಟಕಗಳಿಗೂ ಪ್ರಚಾರ, ವಸತಿ, ದರ್ಶನ, ಸ್ವಾಗತ ಸಮಿತಿಗಳನ್ನು ರಚನೆ ಮಾಡಿ ಜವಾಬ್ದಾರಿ ನೀಡಲಾಗಿದೆ.
ಕಳೆದ ತಿಂಗಳು ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆ ಯಶಸ್ವಿಯಾಗಿದ್ದು ಇದು ಇತಿಹಾಸ ಪುಟದಲ್ಲಿ ಸೇರ್ಪಡೆಯಾಗಿದೆ. ಅದೇ ರೀತಿ ಶ್ರೀ ಕ್ಷೇತ್ರದಲ್ಲಿ ನಡೆಯುವ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಸಲು ಪ್ರತಿಯೊಬ್ಬರು ಯಾವುದೇ ಲೋಪ ದೋಷಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಅತಿಥಿ ಗಣ್ಯರನ್ನು ಆತ್ಮೀಯವಾಗಿ ಬರಮಾಡಿಕೊಂಡು ವಿಶೇಷ ಆತಿಥ್ಯ ನೀಡಬೇಕು. ಯಾರೂಬ್ಬರ ಮನಸ್ಸಿಗೆ ನೋವು ಉಂಟಾಗದಂತೆ ಸಹಕರಿಸಬೇಕು ಎಂದರು.ಪರಿಶೀಲನೆ: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಾಗಮಲೆ ಭವನ ಅತಿಥಿಗೃಹದ ಹೊರಾಂಗಣದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು ಅಂತಿಮವಾಗಿ ಸ್ಥಳ ಪರಿಶೀಲನೆ ಮಾಡಿ ಕಾರ್ಯಕ್ರಮ ಆಯೋಜನೆ ಮಾಡಲು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದರು.
ಅಹ್ವಾನ ಪತ್ರಿಕೆ ಬಿಡುಗಡೆ:ಮಲೆಮಹದೇಶ್ವರ ಬೆಟ್ಟದದಲ್ಲಿ ನಡೆಯಲಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಂಬಂಧ ಸಿದ್ಧಪಡಿಸಿರುವ ಆಹ್ವಾನ ಪತ್ರಿಕೆಯನ್ನು ಶ್ರೀ ಮಲೆಮಾದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಸಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಬರುವ ಅತಿಥಿ ಗಣ್ಯರನ್ನು ಗೊರುಕನ ನೃತ್ಯ, ಟಿಬೇಟಿಯನ್, ಸಾಂಸ್ಕೃತಿಕ ನೃತ್ಯವಾದ್ಯ ಮೇಳಗಳ ಮೂಲಕ ಮೆರವಣಿಗೆಯಲ್ಲಿ ಕರೆತರಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ರಾಜ್ಯ ಖಜಾಂಚಿ ವಾಸುದೇವ ಹೊಳ್ಳ, ಜಿಲ್ಲಾಧ್ಯಕ್ಷ ದೇವರಾಜು ಕಪ್ಪಸೋಗೆ, ರಾಜ್ಯ ಸಮಿತಿ ಸದಸ್ಯ ಗೂಳಿಪುರ ನಂದೀಶ್, ತಾಲೂಕು ಅಧ್ಯಕ್ಷ ಮಹಾದೇಶ್, ಗೌರವಾಧ್ಯಕ್ಷ ದೇವರಾಜ ನಾಯ್ಡು , ಪ್ರಧಾನ ಕಾರ್ಯದರ್ಶಿ ಬಸವರಾಜು, ಉಪಾಧ್ಯಕ್ಷ ಮಹಾದೇವಪ್ರಸಾದ್, ಸಹ ಕಾರ್ಯದರ್ಶಿ ಗೋವಿಂದ ಕೆ, ಖಜಾಂಚಿ ಮಹದೇವಸ್ವಾಮಿ, ಜಿಲ್ಲಾ ನಿರ್ದೇಶಕರಾದ ಪ್ರಭುಸ್ವಾಮಿ ಸುರೇಶ್ ನಿರ್ದೇಶಕರುಗಳಾದ ಸೋಮಶೇಖರ್, ಮಧು, ರಮೇಶ್ , ಸದಸ್ಯರಾದ ಮಹಾದೇವಸ್ವಾಮಿ, ಅಭಿಲಾಶ್ ,ರಾಜೇಶ್, ಶಿವಕುಮಾರ್ ,ಲಿಂಗರಾಜು, ವಿಜಯ್, ಭರತ್, ನಾಗೇಂದ್ರ ಪ್ರಸಾದ್, ನಿರಂಜನ್ ,ರವಿ, ಸೇರಿದಂತೆ ಇನ್ನಿತರರು ಹಾಜರಿದ್ದರು.