ಸಾರಾಂಶ
ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಾಗ ಅದೊಂದು ಸಾಗರವಿದ್ದಂತೆ, ಅದರಲ್ಲಿ ಧೃತಿಗೆಡದೆ ಈಜಿ ದಡಸೇರಬೇಕು. ಉನ್ನತ ಶಿಕ್ಷಣ ಪಡೆಯುವಾಗ ಕನ್ನಡ ಮಾಧ್ಯಮದಲ್ಲಿ ಕಲಿತಿದ್ದೇವೆ ಎಂಬ ಕೀಳರಿಮೆ ಇರಬಾರದು.
ಧಾರವಾಡ:
ಪ್ರತಿಭೆಗೆ ಬಡವ, ಗ್ರಾಮೀಣ ಪ್ರದೇಶವೆಂಬ ಭೇದವಿಲ್ಲ. ಉನ್ನತ ಹುದ್ದೆಯಲ್ಲಿರುವ ಪ್ರತಿಯೊಬ್ಬರು ಪ್ರತಿಭೆಯಿಂದಲೇ ಜೀವನದಲ್ಲಿ ಮೇಲೆ ಬಂದವರು. ಪ್ರತಿಭೆ ಯಾವತ್ತೂ ಶ್ರೀಮಂತರ ಸ್ವತ್ತಲ್ಲ ಎಂದು ಸರ್ಕಾರದ ನಿವೃತ್ತ ಕಾರ್ಯದರ್ಶಿ ಜಿ.ಸಿ. ತಲ್ಲೂರ ಹೇಳಿದರು.ನಗರದಲ್ಲಿ ವಿವೇಕ ಸ್ಕಾಲರ್ ಪ್ರೋಗ್ರಾಂ ಯೋಜನೆ ಅಡಿಯಲ್ಲಿ ಪಿಯುಸಿ ಕಲಿತು ಉನ್ನತ ಶಿಕ್ಷಣಕ್ಕೆ ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆದ ಮಕ್ಕಳ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಾಗ ಅದೊಂದು ಸಾಗರವಿದ್ದಂತೆ, ಅದರಲ್ಲಿ ಧೃತಿಗೆಡದೆ ಈಜಿ ದಡಸೇರಬೇಕು. ಉನ್ನತ ಶಿಕ್ಷಣ ಪಡೆಯುವಾಗ ಕನ್ನಡ ಮಾಧ್ಯಮದಲ್ಲಿ ಕಲಿತಿದ್ದೇವೆ ಎಂಬ ಕೀಳರಿಮೆ ಇರಬಾರದು, ಇಂಗ್ಲಿಷ್ ಮಾಧ್ಯಮಕ್ಕೆ ನಮ್ಮನ್ನು ನಾವು ಅಣಿಗೊಳಿಸಿಕೊಂಡು ಶಿಕ್ಷಣ ಮುಂದುವರಿಸಬೇಕು ಎಂದರು. ಹ್ಯೂಮನ್ ಮೈಂಡ್ ಸೆಟ್‌ನ ಮಹೇಶ ಮಾಶಾಳ ಮಾತನಾಡಿ, ಜೀವನದಲ್ಲಿ ಏಳು ಬೀಳು, ಸೋಲು ಗೆಲುವು ಸಹಜ. ಬಂದ ಅವಕಾಶಗಳನ್ನು ಹೇಗಿದೆಯೋ ಹಾಗೆ ಒಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಶೈಕಣಿಕ ಹಾಗೂ ಆರ್ಥಿಕ ಬೆಂಬಲ ದೊರೆತಾಗ ಉಳಿದೆಲ್ಲವನ್ನು ಗಳಿಸಿಕೊಂಡು ಸಾಧನೆ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಂತೇಶ ಎಜುಕೇಷನ್ ಸೊಸೈಟಿ ಅಧ್ಯಕ್ಷ ಪಿ.ಆರ್. ಹಂಚಿನಮನಿ ಮಾತನಾಡಿದರು. ವಿವೇಕ ಸ್ಕಾಲರ್ ಪ್ರೋಗ್ರಾಂ ನಿರ್ದೇಶಕಿ ಡಾ. ಪುಷ್ಪಲತಾ ಮಾತನಾಡಿ, ಸಾಮಾಜಿಕವಾಗಿ ಹಲವು ಸವಾಲುಗಳನ್ನು ಎದುರಿಸುತ್ತಿರುವ ಮಕ್ಕಳು ವಿವೇಕ ಸ್ಕಾಲರ್ ಪ್ರೋಗ್ರಾಂ ಮುಖಾಂತರ ಸಹಾಯ ಪಡೆದು ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು. ಶ್ರೀದೇವಿ ಬೇಲೇರಿಮಠ ಮಾತನಾಡಿದರು. 40 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ದೀಕ್ಷಿತಾ ಕಟಗಿ ಸ್ವಾಗತಿಸಿದರು. ಹರ್ಷವರ್ಧನ ಶೀಲವಂತ, ಜಯಂತ ಕೆ.ಎಸ್, ವರ್ಷಾ ಹಂಚಿನಮನಿ ಇದ್ದರು.