ಸಾರಾಂಶ
ಗದಗ: ಪ್ರತಿಭಾವಂತ ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇದು ಹೆಚ್ಚು ಪೂರಕವಾಗಲಿದೆ ಎಂದು ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿದರು.
ಅವರು ಶನಿವಾರ ಬೆಟಗೇರಿಯ ಲೊಯೊಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಗದಗ ಜಿಪಂ, ಶಾಲಾ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಕ್ಕಳ ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಸರ್ಕಾರದಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಪ್ರತಿಭಾ ಕಾರಂಜಿಯೂ ಸಹ ಒಂದು ಮಹತ್ವದ ಕಾರ್ಯಕ್ರಮವಾಗಿದ್ದು, ಮಕ್ಕಳಲ್ಲಿ ಸೂಪ್ತವಾಗಿರುವ ಪ್ರತಿಭೆ ತಿಳಿದುಕೊಂಡು ಅದನ್ನು ಪ್ರೋತ್ಸಾಹಿಸಿ ಬೆಳೆಸುವುದು ಅವಶ್ಯಕವಾಗಿದೆ. ಮಕ್ಕಳು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಉದಾಸೀನ ಮನೋಭಾವನೆ ಹೊಂದದೇ ಉತ್ಸಾಹದಿಂದ ಮುನ್ನುಗ್ಗಬೇಕು.
ಸ್ವಾಮಿ ವಿವೇಕಾನಂದರು ಹೇಳಿದಂತೆ ದೇವರು ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಶಕ್ತಿ ಸಾಮರ್ಥ್ಯ ಕೊಟ್ಟಿರುತ್ತಾನೆ. ಆ ಸಾಮರ್ಥ್ಯದಿಂದ ಜೀವನದಲ್ಲಿ ನಾವು ಏನನ್ನಾದರೂ ಸಾಧಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು. ಸಂಗೀತ ಕ್ಷೇತ್ರಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ಡಾ. ಭೀಮಸೇನ ಜೋಶಿ, ವೀರೇಶ್ವರ ಪುಣ್ಯಾಶ್ರಮದ ಪಂಡಿತ ಪುಟ್ಟರಾಜ ಗವಾಯಿಗಳು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆಯ ರಾಜು ಬಗಾಡೆ, ಸುನೀಲ ಜೋಶಿ ಹೀಗೆ ಅನೇಕರು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿಜೇತರಾದವರು ರಾಜ್ಯ ಮಟ್ಟದಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತಂದುಕೊಡಬೇಕು ಎಂದರು.ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಕೃಷ್ಣಗೌಡ ಪಾಟೀಲ ಮಾತನಾಡಿ, ಮಕ್ಕಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮನೋಭಾವನೆ ಹೊಂದಬೇಕು. ಮಕ್ಕಳಲ್ಲಿ ಹುದುಗಿರುವ ಕಲೆ ಪ್ರೋತ್ಸಾಹಿಸುವುದು ಪಾಲಕರ ಹಾಗೂ ಶಿಕ್ಷಕರ ಕರ್ತವ್ಯವಾಗಿದೆ. ಜಿಲ್ಲೆಯ ಮಕ್ಕಳು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಜ್ಯ ಮಟ್ಟದಲ್ಲಿಯೂ ಸಹ ಗದಗ ಜಿಲ್ಲೆಯ ಕೀರ್ತಿ ತರಬೇಕು ಎಂದರು.
ಡಿಡಿಪಿಐ ಆರ್.ಎಸ್. ಬುರಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಗುರುತಿಸುವುದು, ಕಲೆಯನ್ನು ಪ್ರೋತ್ಸಾಹಿಸುವುದು ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶವಾಗಿದೆ. ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಜಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಪಂ ಸಿಇಓ ಭರತ್ ಎಸ್, ಲೋಯಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಿಸ್ಟರ್ ಬೆಂಗೆರಾ ಬಿ.ಎಸ್,ಸಿಸ್ಟರ್ ಪಿಂಟೋ, ಶಿಕ್ಷಣಾಧಿಕಾರಿ ಸಂಘದ ಜಿಲ್ಲಾ ಅಧ್ಯಕ್ಷ ಜಿ.ಎಲ್.ಬಾರಾಟಕ್ಕೆ, ಬಿ.ಎಫ್.ಪೂಜಾರ, ವಿ.ಎಂ.ಹಿರೇಮಠ, ಎಂ.ಕೆ.ಲಮಾಣಿ, ವಿಜಯ ಕಿರೇಸೂರ, ಶಿವಾನಂದ ಗಿಡ್ನಂದಿ, ಬಿ.ಕೆ. ನಿಂಬನಗೌಡ್ರ , ವಸಂತ ಕಲಕಂಬಿ, ರವಿ ಕೋಟಿಯವರ, ಆರ್.ಎಂ. ಶಿರಹಟ್ಟಿ, ಹಾಲನಗೌಡ ಪಾಟೀಲ, ಎಂ.ಎಸ್. ಕುಚಬಾಳ, ರಾಜು ಚವ್ಹಾಣ, ಸರಸ್ವತಿ ಡಿ ಕನವಳ್ಳಿ, ವಿವಿಧ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ಎಂ.ಎ.ಯರಗುಡಿ ನಿರೂಪಿಸಿದರು. ಎಂ.ಎಚ್. ಕಂಬಳಿ ವಂದಿಸಿದರು.