ಸಾರಾಂಶ
ಇದು ಹತ್ತನೇ ವರ್ಷದ ಕಾರ್ಯಕ್ರಮವಾಗಿದ್ದು ಈ ವರ್ಷ ದ್ವಿತೀಯ ಪಿ. ಯು.ಸಿ.ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಅಂಕಗಳಿಸಿದ ದೀಪಕ್ ಶೆಟ್ಟಿಗೆ 15 ಸಾವಿರ ರು. ಪ್ರೋತ್ಸಾಹ ಧನ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಬೈಂದೂರು
ಇಲ್ಲಿನ ನಾವುಂದದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 1994 - 96 ನೇ ಸಾಲಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕೊಡುತ್ತಿರುವ ಪ್ರತಿಭಾ ಪ್ರೋತ್ಸಾಹ ಧನದ ವಿತರಣೆ ಕಾರ್ಯಕ್ರಮ ನಡೆಯಿತು.ಇದು ಹತ್ತನೇ ವರ್ಷದ ಕಾರ್ಯಕ್ರಮವಾಗಿದ್ದು ಈ ವರ್ಷ ದ್ವಿತೀಯ ಪಿ. ಯು.ಸಿ.ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಅಂಕಗಳಿಸಿದ ದೀಪಕ್ ಶೆಟ್ಟಿಗೆ 15 ಸಾವಿರ ರು. ಪ್ರೋತ್ಸಾಹ ಧನ ನೀಡಲಾಯಿತು.
1994-96 ನೇ ಸಾಲಿನ ಹಳೆ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಅಮೆರಿಕಾದ ಬೋಸ್ಟನ್‌ನ ಟಾಕೆಡ ಫಾರ್ಮಸಿಟಿಕಲ್ಸ್‌ನಲ್ಲಿ ಎಸೋಸಿಯೇಟ್ ಡೈರೆಕ್ಟರ್ ಆಗಿರುವ ದೀಪಕ್ ಕಂಬದಕೋಣೆ ಇವರು ಆಗಮಿಸಿದ್ದರು. ಯಾವುದೇ ಸಂಸ್ಥೆಯಲ್ಲಿ ಕಲಿತರೂ ಮಕ್ಕಳ ಸ್ವ ಪ್ರಯತ್ನವೇ ಮುಖ್ಯ ಹಾಗೂ ಸಂವಹನ ಕಲೆಯನ್ನು ಈಗಿನಿಂದಲೇ ಉತ್ತಮಪಡಿಸಿಕೊಳ್ಳಬೇಕು ಎಂದರು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪಿಯುಸಿ ಮುಗಿದ ತಕ್ಷಣ ಇರುವಂತಹ ವಿಫುಲ ಅವಕಾಶಗಳ ಬಗ್ಗೆ ಕೂಡ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಸುಜಾತ ಎಂ. ಇವರು ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆ ಮಾತ್ರ ಗುರಿಯಾಗಿಸಿಕೊಳ್ಳದೆ ಜ್ಞಾನವನ್ನು ಗಳಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು. ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಿಂಚನ ಪ್ರಾರ್ಥಿಸಿದರು. ಭೌತಶಾಸ್ತ್ರ ಉಪನ್ಯಾಸಕಿ ಗಾಯತ್ರಿ ಭಟ್ ಸ್ವಾಗತಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಸಾವಿತ್ರಿ ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕರಾದ ಜೀವನ್ ಕುಮಾರ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಇತಿಹಾಸ ಉಪನ್ಯಾಸಕರಾದ ಗಣೇಶ ಎಂ. ಮತ್ತು ಅರ್ಥಶಾಸ್ತ್ರ ಉಪನ್ಯಾಸಕಿ ನೇತ್ರಾವತಿ ಉಪಸ್ಥಿತರಿದ್ದರು.