ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಪ್ರತಿಭೆಗೆ ಎಂತದೇ ಸಂದರ್ಭದಲ್ಲಿ ಚ್ಯುತಿಯಾಗದು. ಬಡತನ, ಸಿರಿತನದ ಅವಸ್ಥೆಗಳಿಗೆ ಒಳಗಾಗದೇ ಪ್ರತಿಭಾವಂತರು ತಮ್ಮದೇ ಆದ ಶೈಕ್ಷಣಿಕ ಸಾಧನೆಯ ಪರಿಕ್ರಮಗಳು ಮತ್ತು ಮಾರ್ಗಗಳಿಂದ ನಿರೀಕ್ಷಿತ ಗುರಿ ತಲುಪುತ್ತಾರೆ ಎಂದು ಹಿರಿಯ ಶಿಕ್ಷಕ ಬಿ.ಟಿ. ಪತ್ತಾರ ಹೇಳಿದರು.ಭಾನುವಾರ ತೇರದಾಳದ ಖೋತ ಇಂಗ್ಲಿಷ್ ಟ್ಯುಟೋರಿಯಲ್ಸ್ ಸಂಸ್ಥೆಯಲ್ಲಿ ನಡೆದ ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಇಲಾಖೆ ೮ನೇ ತರಗತಿ ಮಕ್ಕಳಿಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ವಾರ್ಷಿಕ ₹ ೪೮ ಸಾವಿರದಂತೆ ೪ ವರ್ಷ ಕಾಲ ಶಿಷ್ಯವೇತನಕ್ಕೆ ಭಾಜನರಾದ ಸಸಾಲಟ್ಟಿ ಗ್ರಾಮದ ಪರಗೊಂಡ ಮರಡಿ, ಮುತ್ತಯ್ಯ ಮಠಪತಿ, ಸಹನಾ ಇಂಗಳೆ, ಗೊಲಭಾಂವಿ ಗ್ರಾಮದ ಮೃತ್ಯುಂಜಯ ಕಡಕಬಾವಿ, ಐಶ್ವರ್ಯ ಮಾಂಗ, ಹನಗಂಡಿ ಗ್ರಾಮದ ಸೌಪರ್ಣಿಕಾ ಗುಬಚಿ ಅವರನ್ನು ಸನ್ಮಾನಿಸಿ ಮಾತನಾಡಿದರು.ಶೈಕ್ಷಣಿಕ ಸಾಧನೆಯಲ್ಲಿ ಪ್ರತಿಭಾವಂತರು ಎಂದೂ ಕುಟುಂಬಕ್ಕೆ ಹೊರೆಯಾಗದೆ ತಮ್ಮ ಶೈಕ್ಷಣಿಕ ಸಾಮರ್ಥ್ಯದ ಮೇಲೆ ಖಚಿತ ಗುರಿ ತಲುಪುತ್ತಾರೆ. ಅದಕ್ಕೆ ವ್ಯವಸ್ಥಿತ ಕ್ರಮದ ಅಧ್ಯಯನ ನಡೆಸಲು ಶಿಕ್ಷಕರ ಸಹಕಾರವಿದ್ದಲ್ಲಿ ಪ್ರತಿಭೆಗಳು ಈ ನೆಲದ ಸಾಧನೆ ತಾರೆಗಳಾಗುತ್ತಾರೆ. ಪದವಿ ಪೂರ್ವ ಶಿಕ್ಷಣದವರೆಗೆ ಈ ಐವರು ಮಕ್ಕಳು ಆರ್ಥಿಕವಾಗಿ ಕುಟುಂಬಗಳಿಗೆ ಹೊರೆಯಾಗದೆ ತಮ್ಮದೆ ಆದ ಅರ್ಹತೆಯ ಮೂಲಕ ಕೇಂದ್ರ ಸರ್ಕಾರದ ನೆರವಿನಲ್ಲಿ ಶಿಕ್ಷಣ ಪೂರ್ಣಗೊಳಿಸಲು ಸಾಧ್ಯವಿದೆ. ಅಲ್ಲದೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡುವ ಇತರೆ ಸೌಲಭ್ಯಗಳನ್ನು ಬಳಸಿಕೊಂಡು ರಾಷ್ಟ್ರದ ಬೌದ್ಧಿಕ ಆಸ್ತಿಯಾಗಲು ವಿಪುರ ಅವಕಾಶಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಎಲ್ಲ ಮಕ್ಕಳೂ ಸಾಧನೆಯ ಮೇಲೇರಬೇಕೆಂದು ಆಶಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಮುರಳೀಧರ ಸೋಪಾನ ಖೋತ, ವ್ಯವಸ್ಥಾಪಕ ನಾಮದೇವ ಸೋಪಾನ ಖೊತ, ಶಿಕ್ಷಕರಾದ ಮಲ್ಲಿಕಾರ್ಜುನ ಮದುವಾಲ, ಶ್ವೇತಾ ಖೋತ, ಅಮರ ಇಂಗಳೆ ಸೇರಿದಂತೆ ಪಾಲಕರುಉಪಸ್ಥಿತರಿದ್ದರು.