ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಸಂವಿಧಾನಕ್ಕೆ ಬದ್ಧರಾಗದೇ ನಮ್ಮ ಹೀನ ಮನಸ್ಥಿತಿಯೊಂದಿಗೆ ಹೇಯ ಕೃತ್ಯ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾರ್ಯವಾಗಬೇಕು. ಇದರಿಂದ ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಸಾಧ್ಯ ಎಂದು ನಿವೃತ್ತ ಕೃಷಿ ಅಧಿಕಾರಿ ಸಿದ್ದಪ್ಪ ಕಟ್ಟಿಮನಿ ಹೇಳಿದರು.ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಬುಧವಾರ ಕರೆ ನೀಡಿದ್ದ ತಾಳಿಕೋಟೆ ಬಂದ್ ವೇಳೆ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ ಎಂಬಾತ ಶೂ ಎಸೆದು ಕಾನೂನಿಗೆ ಅಗೌರವ ತೋರಿದ್ದ. ಈ ಮೂಲಕ ಆತ ಮನೋವಾದಿತನವನ್ನು ಪ್ರದರ್ಶಿಸಿದ್ದಾನೆ. ಈ ಘಟನೆ ನಡೆದ ೯ ಗಂಟೆಯ ನಂತರ ಪ್ರಧಾನಿಗೆ ವಿಷಯ ಮುಟ್ಟಿದಾಗ ಅವರು ವಿಷಾಧ ವ್ಯಕ್ತಪಡಿಸುತ್ತಾರೆ. ಗೃಹ ಸಚಿವರು, ಕಾನೂನು ಮಂತ್ರಿಗೆ ಗೊತ್ತಾದರೂ ಕಠಿಣ ಕ್ರಮ ತೆಗೆದುಕೊಳ್ಳಲಿಲ್ಲ. ದೇಶದ ಪವಿತ್ರ ಸಂವಿಧಾನಕ್ಕೆ ಅಪಮಾನ ಮಾಡಿದವನಿಗೆ ಗಲ್ಲು ಶಿಕ್ಷೆಯ ನೀಡುವ ಮೂಲಕ ಸಂವಿಧಾನದ ತಾಕತ್‌ನ್ನು ತೋರಿಸಬೆಕಾಗಿದೆ. ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಂದ್ರಶೇಖರ ಶಿಂಗೆ ಮಾತನಾಡಿ, ದೇಶದಲ್ಲಿ ಮನೋವಾದಿಗಳು ಅರಾಜಕತೆ ಸೃಷ್ಠಿಸಿ ಸಂವಿಧಾನಕ್ಕೆ ಪೆಟ್ಟು ನೀಡಲು ತಂತ್ರ ರೂಪಿಸುತ್ತಿದ್ದಾರೆ. ಇಂತವರು ಸಾವಿರ ವರ್ಷ ಬಡಿದಾಡಿದರೂ ವ್ಯರ್ಥವಾಗಲಿದೆ. ಹಿಂದುಳಿದ, ದಲಿತರು, ಅಲ್ಪಸಂಖ್ಯಾತರು ಸಂವಿಧಾನದ ಜೊತೆಗಿದ್ದಾರೆ. ನಾವು ಅರಾಜಕತೆ ಸೃಷ್ಠಿಯಾಗಲು ಬಿಡುವುದಿಲ್ಲ. ಸಚಿವ ಪ್ರಿಯಾಂಕ ಖರ್ಗೆಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಆರ್‌ಎಸ್‌ಎಸ್ ಬ್ಯಾನ್ ವಿಚಾರದಲ್ಲಿ ಅವರಿಗೆ ಎಷ್ಟೇ ಬೆದರಿಕೆಗಳು ಬಂದರೂ ಅವರ ಜೊತೆ ದಲಿತ ಸಂಘಟನೆಗಳಿವೆ. ಮುದ್ದೇಬಿಹಾಳದ ಬಾಲಕಿಯ ಅತ್ಯಾಚಾರ ಪ್ರಕರಣ ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.
ಡಿಎಸ್‌ಎಸ್ ಬೆಳಗಾವಿ ವಿಭಾಗೀಯ ಸಂಚಾಲಕ ದೇವೆಂದ್ರ ಹಾದಿಮನಿ ಮಾತನಾಡಿ, ಸ್ವಾತಂತ್ರ್ಯ ಸಿಕ್ಕು ೭೮ ವರ್ಷಗಳು ಕಳೆದರು ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರ ನಿಂತಿಲ್ಲ. ಇದಕ್ಕೆ ಮುದ್ದೇಬಿಹಾಳ ತಾಲೂಕಿನ ಬಾಲಕಿ ಪ್ರಕರಣವೇ ಸಾಕ್ಷಿಯಾಗಿದೆ. ಕೃತ್ಯವೆಸಗಿದ ಆರೋಪಿಗಳನ್ನು ಬಂಧಿಸಿದರೆ ಸಾಲದು ಅವರಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸಿ ಎಚ್ಚರಿಕೆಯ ಸಂದೇಶ ನೀಡಬೇಕು. ಭಾರತ ಸರ್ಕಾರ ಮನುವಾದಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಪ್ರಿಯಾಂಕ ಖರ್ಗೆಗೆ ಜೀವ ಬೆದರಿಕೆ ಹಾಕಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.ದಲಿತ ಮುಖಂಡ ಜೈಭೀಮ ಮುತ್ತಗಿ, ಸಿದ್ದು ಬಾರಿಗಿಡದ ಮಾತನಾಡಿದರು. ಬೃಹತ್ ಪ್ರತಿಭಟನಾ ಮೆರವಣಿಗೆಯು ಅಂಬೇಡ್ಕರ್ ಭವನದಿಂದ ಬಸವೇಶ್ವರ ಸರ್ಕಲ್‌ಗೆ ಆಗಮಿಸಿ ಧರಣಿ ನಡೆಸಿದರು. ತಾಳಿಕೋಟೆ ಸಂಪೂರ್ಣ ಬಂದ್ ಕರೆ ಹಿನ್ನಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಬಸ್‌ಗಳ ಓಡಾಟ ಪಟ್ಟಣದಿಂದ ಹೊರಗಡೆ ಇತ್ತು. ವಾಹನ ಸಂಚಾರವಿಲ್ಲದೇ ಪಟ್ಟಣದ ಎಲ್ಲ ರಸ್ತೆಗಳು ಮತ್ತು ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದವು. ಈ ವೇಳೆ ತಹಸೀಲ್ದಾರ್ ವಿನಯಾ ಹೂಗಾರ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಬಂದ್ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡಿಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮಹ್ಮದಪಸೀಯುದ್ದೀನ, ಪಿಎಸ್‌ಐ ಜ್ಯೋತಿ ಖೋತ್, ಅಪರಾದ ವಿಭಾಗದ ಪಿಎಸ್‌ಐ ಎಸ್.ಎಂ.ಪಡಶೇಟ್ಟಿ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿತ್ತು.ಈ ಪ್ರತಿಭಟನೆಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಎಸ್.ಬಿ.ಕಟ್ಟಿಮನಿ, ಅಧ್ಯಕ್ಷ ಮುತ್ತಪ್ಪಣ್ಣ ಚಮಲಾಪೂರ, ಡಿಎಸ್‌ಎಸ್ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ನಾಗೇಶ ಕಟ್ಟಿಮನಿ, ಮಹೇಶ ಚಲವಾದಿ, ಕಾಶಿನಾಥ ಕಾರಗನೂರ, ಮಾಸುಮಸಾಬ ಕೇಂಭಾವಿ, ರಾಮಣ್ಣ ಕಟ್ಟಿಮನಿ, ಬಸ್ಸು ಕಟ್ಟಿಮನಿ(ಮಾದರ), ಶಫಿಕ್ ಇನಾಮದಾರ, ಶಂಕರ ಪಡಸಾಲಿ, ಅಂಜುಳಾದೇವಿ, ಶಿವಶಂಕರ ಕಟ್ಟಿಮನಿ, ಮೈನು ಬೇಪಾರಿ, ನಿಸಾರ ಬೇಪಾರಿ, ಸಾಯಬಣ್ಣ ಗುಂಡಕನಾಳ, ನಿಂಗಣ್ಣ ಮಾಯವಂಶಿ, ಕಾಶಿನಾಥ ತುಂಬಗಿ, ಅಬುಬಕರ ಲಾಹೋರಿ, ನಭಿ ಲಾಹೋರಿ, ಮಶಾಕಸಾಬ ನಗಾರ್ಚಿ, ಮಹಾಂತೇಶ ಕಟ್ಟಿಮನಿ, ಶಿವು ಕೂಚಬಾಳ, ರೇವಣಪ್ಪ ದಲ್ಲಾಳಿ, ರಮೇಶ ಹೊನ್ನಳ್ಳಿ, ಗೋಪಾಲ ಕಟ್ಟಿಮನಿ, ಬಸವರಾಜ ತಳವಾರ ಇತರರು ಇದ್ದರು.
;Resize=(128,128))
;Resize=(128,128))