ತಾಳಿಕೋಟೆ ತಾಲೂಕು ಒಳಗೊಂಡು ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷ ರೈತ ಮೋರ್ಚಾ ಹಾಗೂ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಸೋಮವಾರ ಕರೆ ನೀಡಿದ್ದ ತಾಳಿಕೋಟೆ ಬಂದ್ ಯಶಸ್ವಿಯಾಯಿತು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ತಾಳಿಕೋಟೆ ತಾಲೂಕು ಒಳಗೊಂಡು ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷ ರೈತ ಮೋರ್ಚಾ ಹಾಗೂ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಸೋಮವಾರ ಕರೆ ನೀಡಿದ್ದ ತಾಳಿಕೋಟೆ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಭಾಗವಾಗಿ ೩ ದಿನಗಳ ಸತತ ಹೋರಾಟದ ನಂತರ ಸೋಮವಾರ ಬಂದ್ ಕರೆ ನೀಡಲಾಗಿತ್ತು. ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಿಂದ ಬೃಹತ್ ಪ್ರತಿಭಟನೆ ಮೂಲಕ ಕತ್ರಿ ಬಜಾರ, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತ, ಬಸ್ ನಿಲ್ದಾಣದ ಮುಂಭಾಗದ ರಸ್ತೆಗುಂಟಾ ಹಾಯ್ದು ಬಸವೇಶ್ವರ ವೃತ್ತದಲ್ಲಿ ಸಭೆಯಾಗಿ ಮಾರ್ಪಟ್ಟಿತು.

ತಾಳಿಕೋಟೆ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಬಹುತೇಕ ಎಲ್ಲ ಅಂಗಡಿ-ಮುಂಗಟ್ಟುಗಳು ಬೆಳಗ್ಗೆಯಿಂದಲೇ ಮುಚ್ಚಿದ್ದವು. ಮದ್ಯ ಮಾರುಕಟ್ಟೆ, ಸರಾಫ್ ಬಜಾರ್, ಎಪಿಎಂಸಿ, ಕಿರಾಣಿ, ಅಡತ್ ಮರ್ಚಂಟ್, ತರಕಾರಿ, ಹಣ್ಣು ಸೇರಿ ವಿವಿಧ ವ್ಯಾಪಾರ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಪರಿಣಾಮ ಪಟ್ಟಣದ ಪ್ರಮುಖ ರಸ್ತೆಗಳು ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಬಂದ್‌ಗೆ ವ್ಯಾಪಾರಸ್ಥರು, ರೈತರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಂದ್ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ತಾಳಿಕೋಟೆ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು.

ವಿಜಯಪುರ ಮಾರ್ಗ ಮತ್ತು ಮುದ್ದೇಬಿಹಾಳ, ಬಾಗಲಕೋಟೆ ಮಾರ್ಗದೆಡೆಗೆ ತೆರಳಲು ಬಸ್‌ಗಳು ಮಿಣಜಗಿ ಸರ್ಕಲ್‌ದಿಂದ ಪ್ರಯಾಣಿಕರನ್ನು ಪಿಕಪ್‌ ಮಾಡಿದವು. ಯಾದಗಿರಿ ಕಡೆಗೆ ತೆರಳಲು ಮೈಲೇಶ್ವರ ಸರ್ಕಲ್, ದೇವರ ಹಿಪ್ಪರಗಿ ಕಡೆಗೆ ತೆರಳಲು ಬಸ್ ಘಟಕದಿಂದಾಚೆಗೆ ಬಸ್‌ಗಳು ಸಂಚರಿಸಿದ್ದು ಕಂಡು ಬಂರು..

ಕೆಲವು ಗ್ರಾಮೀಣ ಪ್ರದೇಶಗಳಿಗೆ ಹಾಗೂ ದೂರದ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಬಸ್‌ಗಳಿಲ್ಲದೆ ಪರದಾಡುವಂತಾಯಿತು. ಕೆಲವು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಶಾಲೆಗಳಿಗೆ ರಜೆ ಘೋಷಿಸಿದ್ದವು.

ಬೃಹತ್ ಪ್ರತಿಭಟನಾ ಮೆರವಣಿಗೆ:

ಪಟ್ಟಣದ ಶ್ರೀ ಖಾಸ್ಗತೇಶ್ವೆರ ಮಠದಿಂದ ಪ್ರಾರಂಭಗೊಂಡ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಸಿದ್ದಲಿಂಗ ದೇವರು ಎತ್ತಿನ ಬಂಡೆಯ ಮೇಲೆ ಹತ್ತಿ ಚಾಲನೆ ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ), ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಬಸನಗೌಡ ಯಡಿಯಾಪೂರ, ಜೆಡಿಎಸ್ ತಾಲೂಕು ಅಧ್ಯಕ್ಷ ಮಡುಸಾಹುಕಾರ ಬಿರಾದಾರ, ಪ್ರಭುಗೌಡ ಅಸ್ಕಿ, ಬಸನಗೌಡ ಮಾಡಗಿ, ಸಂಗನಗೌಡ ಹೆಗರಡ್ಡಿ, ಸಾಯಬಣ್ಣ ಆಲ್ಯಾಳ, ಡಾ.ಭಲವಂತ್ರಾಯ ನಡಹಳ್ಳಿ, ರಾಜುಗೌಡ ಗುಂಡಕನಾಳ, ಎಂ.ಎಂ.ಪಾಟೀಲ, ರಾಜುಗೌಡ ಕೊಳೂರ, ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ರೈತರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.