ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಅಯ್ಯೋಧ್ಯೆ ನಗರದಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ಪಟ್ಟಣವು ಸಂಪೂರ್ಣ ವಿದ್ಯುತ್ ದ್ವೀಪಾಲಂಕಾರದಿಂದ ಕಂಗೊಳಿಸುತ್ತಿದೆ.ಪಟ್ಟಣದ ಸಂಪರ್ಕ ರಸ್ತೆಗಳಿಂದ ಹಿಡಿದು ಪ್ರಮುಖ ಎಲ್ಲ ರಸ್ತೆಗಳಲ್ಲಿಯೂ ವಿದ್ಯುತ್ ದ್ವೀಪಗಳಿಂದ ಅಲಂಕಾರಗೊಳಿಸಲಾಗಿದೆ. ಇದರ ಜೊತೆಗೆ ಕೇಸರಿ ಬಟ್ಟೆಗಳಿಂದ ಪ್ರಮುಖ ನಡುರಸ್ತೆಗಳಲ್ಲಿ ಅಳವಡಿಸಲಾದ ವಿದ್ಯುತ್ ದ್ವೀಪಗಳ ಕಂಬಗಳಿಂದ ಸಿಂಗರಿಸಲಾಗಿದೆ. ಜೊತೆಗೆ ಜೈಶ್ರೀರಾಮ ಎಂಬ ನಾಮಪಠಣ ಪ್ರತಿಯೊಬ್ಬರಲ್ಲಿ ಮೂಡಲಿ ಎಂಬ ಕಾರಣದಿಂದ ಪ್ರತಿ ಕಂಬಗಳಿಂದ ಜೈಶ್ರೀರಾಮ ಎಂಬ ನಾಮಾಂಕಿತ ಅಂಟಿಸಿ ಶ್ರೀರಾಮ ಮೇಲಿನ ಭಕ್ತಿ ಸಮರ್ಪಣಾ ಭಾವ ಮೆರೆದಿದ್ದಾರೆ.
ಸ್ವಚ್ಛತೆಗೆ ಸಿದ್ದಲಿಂಗ ಶ್ರೀಗಳ ಕರೆ:ಪಟ್ಟಣದಲ್ಲಿ ಪ್ರಮುಖವಾಗಿ ಗುರುತಿಸಲಾಗಿರುವ ಸುಮಾರು ೯೦ಕ್ಕೂ ಹೆಚ್ಚು ದೇವಸ್ಥಾನಗಳ ಸ್ವಚ್ಛತೆಯ ಜೊತೆಗೆ ವಿಶೇಷ ಪೂಜೆ ಕಾರ್ಯಾಕ್ರಮಗಳನ್ನು ಕೈಗೊಳ್ಳಲು ಖಾಸ್ಗತೇಶ್ವರಮಠದ ಬಾಲಶಿವಯೋಗಿ ಸಿದ್ಧಲಿಂಗ ದೇವರು ಕರೆ ನೀಡಿದ್ದು ಇದರಿಂದ ಯುವಕರಿಗೆ ಇನ್ನಷ್ಟು ಸ್ವಚ್ಛತೆಗೆ ಪುಷ್ಟಿ ನೀಡುವುದರ ಜೊತೆಗೆ ದೇವಸ್ಥಾನಗಳನ್ನು ಸ್ವಚ್ಛತೆಗೆ ಮುಂದಾಗಿದ್ದು, ಇದರಿಂದ ಬಹುತೇಕ ದೇವಸ್ಥಾನಗಳು ಸ್ವಚ್ಛತೆಗೊಂಡು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಇದರ ಜೊತೆಗೆ ವಿಶ್ವ ಹಿಂದು ಪರಿಷತ್ ಕರೆಯಂತೆ ಈಗಾಗಲೇ ಪಟ್ಟಣದ ಮುಖ್ಯಭಾಗದಲ್ಲಿರುವ ಶ್ರೀಹನುಮಾನ ಮಂದಿರ ಒಳಗೊಂಡು ಕೆಲವು ದೇವಸ್ಥಾನಗಳಲ್ಲಿ ಜ.೧೪ ರಿಂದಲೇ ಶ್ರೀರಾಮ ನಾಮ ಜಪದ ಜೊತೆಗೆ ಪಾರಾಯಣ, ಮಂತ್ರಘೋಷ, ಅಲ್ಲದೇ ಶ್ರೀರಾಮ ಸ್ತ್ರೋತ್ರಗಳನ್ನು ಪಠಿಸುತ್ತ ಬರಲಾಗಿದೆ.
ಪಟ್ಟಣದ ೧೧ನೇ ಶತಮಾನದ ಕಾಲದ್ದು ಎಂದು ಹೇಳಲಾಗುತ್ತಿರುವ ಡೋಣಿ ನಧಿ ತೀರದ ಹತ್ತಿರವಿರುವ ಶ್ರೀರಾಮ ಮಂದಿರವನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗಿದ್ದು, ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ದಿನದಂದು ವಿಶೇಷ ಪೂಜೆಗಳೊಂದಿಗೆ ಮಹಾ ಪ್ರಸಾದ ವಿತರಿಣೆ ನಡೆಯಲಿದೆ. ಈಗಾಗಲೇ ಸಾಕಷ್ಟು ಸದ್ಭಕ್ತರು ಅಂದು ಪ್ರಮುಖ ಎಲ್ಲ ದೇವಸ್ಥಾನಗಳಲ್ಲಿ ಮಹಾಪ್ರಸಾದದ ವ್ಯವಸ್ಥೆ ಕೈಗೊಂಡಿದ್ದು ಪಟ್ಟಣದ ಪ್ರಮುಖ ಭಾಗದಲ್ಲಿರುವ ದೇವಸ್ಥಾನಗಳಲ್ಲಿ ಅಂದು ಎಲ್‌ಇಡಿ (ಟಿವಿ)ಯ ಮೂಲಕ ಪ್ರಭು ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯ ನೇರ ಪ್ರಸಾರದ ವ್ಯವಸ್ಥೆಯೊಂದಿಗೆ ಎಲ್ಲ ಭಕ್ತಾದಿಗಳಿಗೆ ವೀಕ್ಷಣೆಗೆ ಅನುವು ಮಾಡಲಾಗಿದೆ.ಅಯ್ಯೋಧ್ಯೆ ನಗರಿಯಲ್ಲಿ ಪ್ರಭು ಶ್ರೀರಾಮ ಚಂದ್ರನ ಮೂರ್ತಿಯು ಜ.೨೨ ರಂದು ಪ್ರತಿಷ್ಠಾಪನೆಗೊಳ್ಳಲಿರುವ ಹಿನ್ನೆಲೆ ಪಟ್ಟಣದ ಎಲ್ಲ ದೇವಸ್ಥಾನಗಳನ್ನು ಸ್ವಚ್ಛಗೊಳಿಸಿ ಎಲ್ಲ ದೇವಸ್ಥಾನಗಳು ಸಂಪೂರ್ಣ ಪೂಜೆಗೆ ಸಿದ್ಧಗೊಳಿಸಲಾಗಿದೆ. ಈಗಾಗಲೇ ಪಟ್ಟಣದ ಎಲ್ಲ ಜನರಿಗೆ ಶ್ರೀರಾಮನ ಮಂತ್ರಾಕ್ಷತೆಯನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಯವು ಮುಗಿದಿದೆ. ಅಂದು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯು ಶ್ರೀರಾಮನ ಪೂಜೆಯೊಂದಿಗೆ ಕಣ್ಣತುಂಬಿಕೊಳ್ಳಲು ಎಲ್ಲ ಭಕ್ತರು ಸಜ್ಜಾಗಿದ್ದಾರೆ.- ಬಾಲಶಿವಯೋಗಿ ಸಿದ್ದಲಿಂಗ ಶ್ರೀ, ಖಾಸ್ಗತೇಶ್ವರಮಠ ತಾಳಿಕೋಟೆ.