ಪಂಚಾಯಿತಿಗಳಿಗೆ ನನ್ನ ಅವಧಿಯಲ್ಲಿ ಹೆಚ್ಚಿನ ಅನುದಾನ ನೀಡಿದ್ದೆ. ಅನುದಾನ ನೀಡದವರು ಪಂಚಾಯಿತಿಗಳ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ: ಗ್ರಾಮ ಪಂಚಾಯಿತಿಗಳಿಗೆ ರಾಜಕೀಯ ವಿಕೇಂದ್ರೀಕರಣದ ಜತೆಗೆ ಆರ್ಥಿಕ ವಿಕೇಂದ್ರೀಕರಣ ಆಗಬೇಕೆನ್ನುವುದು ನಮ್ಮ ಹೋರಾಟ. ಪಂಚಾಯಿತಿಗಳಿಗೆ ನನ್ನ ಅವಧಿಯಲ್ಲಿ ಹೆಚ್ಚಿನ ಅನುದಾನ ನೀಡಿದ್ದೆ. ಅನುದಾನ ನೀಡದವರು ಪಂಚಾಯಿತಿಗಳ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಬಸವರಾಜ ಬೊಮ್ಮಾಯಿ ಅಭಿಮಾನಿಗಳ ಬಳಗದಿಂದ ಹಮ್ಮಿಕೊಂಡಿದ್ದ ಬಸವರಾಜ ಬೊಮ್ಮಾಯಿಯವರ 66ನೇ ಜನ್ಮದಿನದ ಪ್ರಯುಕ್ತ ಸೈನಿಕರು, ರೈತರು, ಪೌರ ಕಾರ್ಮಿಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಕೇಕ್ ಕತ್ತರಿಸಿ ಅವರು ಮಾತನಾಡಿದರು.

ನಮ್ಮ ತಂದೆ-ತಾಯಿ ಮಾಡಿದ ಪುಣ್ಯದಿಂದಾಗಿ ನಾನು ಈ ಮಟ್ಟಕ್ಕೆ ಬಂದಿದ್ದೇನೆ. ಏನು ಗೊತ್ತಿರದ ನಮಗೆ ನೀತಿಪಾಠ ಹೇಳಿ ಕೊಟ್ಟಿದ್ದಾರೆ. ತಾಯಿ ಮಮತೆಯಿಂದ ಬೆಳೆಸಿದರೆ, ತಂದೆ ಭವಿಷ್ಯ ರೂಪಿಸಿದ್ದಾರೆ. ಹಾವೇರಿ ಜಿಲ್ಲೆ ನನ್ನ ಕುಟುಂಬ, ಎಲ್ಲ ಸದಸ್ಯರು ನನ್ನ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು. ಇಂದು ಕೇವಲ ನೆಪಕ್ಕೆ ಮಾತ್ರ ನನ್ನ ಜನ್ಮ ದಿನ. ಎಲ್ಲರೂ ಆಕಸ್ಮಿಕವಾಗಿ ಹುಟ್ಟಿ, ಅನಿರೀಕ್ಷಿತವಾಗಿ ಬಂದಿದ್ದೇವೆ. ನಮ್ಮ ತಾಯಿ ಮಡಿಲಲ್ಲಿ ಮಗುವಾಗಿ ಮಲಗಿರುವ ವಾತಾವರಣ ಇನ್ನೂ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ನಮ್ಮ ತಂದೆ ಮೊದಲ ದಿನ ಕೈ ಹಿಡಿದು ಶಾಲೆಗೆ ಕರೆದುಕೊಂಡು ಹೋಗಿದ್ದು ನೆನಪಿದೆ. ನಮ್ಮ ತಂದೆ-ತಾಯಿಗಳು ನೀತಿ ಪಾಠ ಹೇಳಿಕೊಟ್ಟಿದ್ದಾರೆ. ಅಷ್ಟೇ ಪ್ರೀತಿಯನ್ನು ಜಿಲ್ಲೆಯ ಜನ ನನಗೆ ಕೊಟ್ಟಿದ್ದಾರೆ. ನನಗೆ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಇಷ್ಟವಿರದಿದ್ದರೂ ಅಭಿಮಾನಿ ಬಳಗದವರು ಮಾಜಿ ಸೈನಿಕರು, ರೈತರು, ಪೌರ ಕಾರ್ಮಿಕರನ್ನು ಸನ್ಮಾನಿಸುವ ಇಚ್ಛೆ ವ್ಯಕ್ತಪಡಿಸಿದ ಕಾರಣ ಒಪ್ಪಿಕೊಂಡಿದ್ದೇನೆ ಎಂದರು.

ನಾನು ಸಿಎಂ ಆಗಿದ್ದಾಗ ಪೌರ ಕಾರ್ಮಿಕರನ್ನು ಪೌರ ನೌಕರರನ್ನಾಗಿ ಮಾಡಿದೆ. 40 ಸಾವಿರ ಪೌರ ಕಾರ್ಮಿಕರ ಪೈಕಿ 13 ಸಾವಿರ ಪೌರ ನೌಕರರೆಂದು ಘೋಷಣೆ ಮಾಡಿದ್ದೆ ಎಂದು ಸ್ಮರಿಸಿದರು. ಅದರಂತೆ ರೈತರು ನಮ್ಮ ದೇಶದ ಉಸಿರು. 11 ಲಕ್ಷ ಜನ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದು ತೃಪ್ತಿ ತಂದಿದೆ. ಆದರೀಗ ಯೋಜನೆ ಮುಂದುವರಿಯದೇ ಇರುವುದು ಅಸಮಾಧಾನವಾಗಿದೆ. ನೇಕಾರರಿಗೆ, ಮೀನುಗಾರರಿಗೆ ಅನೇಕ ಯೋಜನೆ ಜಾರಿಗೊಳಿಸಿದ್ದೆ ಎಂದ ಅವರು, ಹಾವೇರಿ ನಗರದಲ್ಲಿ ಮಾಜಿ ಸೈನಿಕರು ಕಟ್ಟುತ್ತಿರುವ ಭವನಕ್ಕೆ ₹10 ಲಕ್ಷ ಅನುದಾನ ಕೊಡುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಯುವ ಮುಖಂಡ ಭರತ್ ಬೊಮ್ಮಾಯಿ, ಡಿ.ಎಂ. ಸಾಲಿ, ಭೋಜರಾಜ ಕರೂದಿ, ಲಿಂಗರಾಜ ಚಪ್ಪರದಹಳ್ಳಿ, ಬಸವರಾಜ ಅರಬಗೊಂಡ, ಶಿವರಾಜ ಸಜ್ಜನರ, ನಾಗೇಂದ್ರ ಕಟಕೊಳ, ನಂಜುಂಡೇಶ ಕಳ್ಳೇರ, ವೆಂಕಟೇಶ ನಾರಾಯಣಿ, ಎಂ.ಎಸ್ ಪಾಟೀಲ, ಪಾಲಾಕ್ಷಗೌಡ ಪಾಟೀಲ, ಮಲ್ಲಿಕಾರ್ಜುನ ಬಳ್ಳಾರಿ, ಸುರೇಶ ಹೊಸಮನಿ ಇತರರು ಇದ್ದರು.

ರಾಜಕೀಯ ವಿಕೇಂದ್ರೀಕರಣ

ನನ್ನ ಅವಧಿಯಲ್ಲಿ ಗ್ರಾಪಂಗಳಿಗೆ ಸಹಾಯ ಮಾಡಿದೆ. ಸಿಬ್ಬಂದಿಗಳ ವೇತನ ಹೆಚ್ಚಳ, ಗ್ರಾಪಂ ಅನುದಾನ ಹೆಚ್ಚಳ ಮಾಡಿದ್ದೇನೆ. ಗ್ರಾಪಂಗಳಿಗೆ ಸಹಾಯ ಮಾಡದೆ ಇರೋರು ಈಗ ಗ್ರಾಮ ಪಂಚಾಯಿತಿ ಬಗ್ಗೆ ಮಾತನಾಡುತ್ತಾರೆ. ಗ್ರಾಪಂಗಳು ರಾಜಕೀಯ ವಿಕೇಂದ್ರೀಕರಣ ಆಗಿದೆ. ಆರ್ಥಿಕ ವಿಕೇಂದ್ರೀಕರಣ ಆಗಬೇಕು. ಈ ಬಗ್ಗೆ ನಮ್ಮ ಹೋರಾಟ ಯಾವಾಗಲೂ ಇರುತ್ತದೆ.

* ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ, ಸಂಸದಒಳ್ಳೆ ರಾಜಕಾರಣ

ದೇಶವನ್ನು ಕಾಯುವ ಸೈನಿಕರು, ಅನ್ನ ನೀಡುವ ರೈತರು, ಮನೆ ಅಂಗಳ ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ಸನ್ಮಾನ ಅರ್ಥಪೂರ್ಣವಾಗಿದೆ. ನಾಡಿನ ರೈತರಿಗೆ ನೀರು ಹರಿಸುವ ಮೂಲಕ ನೀರಾವರಿ ಭಗೀರಥ ಬೊಮ್ಮಾಯಿಯವರು. ತಂದೆ ಎಸ್.ಆರ್.ಬೊಮ್ಮಾಯಿ ಅಂತೆಯೇ ರಾಜ್ಯ, ರಾಷ್ಟ್ರದಲ್ಲಿ ಒಳ್ಳೆ ರಾಜಕಾರಣ ಮಾಡುತ್ತಿದ್ದಾರೆ. ಭಗವಂತ ಸುಖ ಆರೋಗ್ಯ ನೀಡಲಿ.

* ಸದಾಶಿವ ಸ್ವಾಮೀಜಿ, ಹುಕ್ಕೇರಿಮಠ.ಸ್ತುತ್ಯಾರ್ಹ

ಬಸವರಾಜ ಬೊಮ್ಮಾಯಿ ಅವರು ಮಾಡಿದ ಜನಪರ ಕಾರ್ಯಗಳೇ ಇಷ್ಟು ಅಭಿಮಾನಿಗಳು ಬರಲಿಕ್ಕೆ ಸಾಕ್ಷಿಯಾಗಿದೆ. ಜನ್ಮದಿನದ ಪ್ರಯುಕ್ತ ಸನ್ಮಾನ ಕಾರ್ಯಕ್ರಮ ನಡೆಸುತ್ತಿರುವುದು ಸ್ತುತ್ಯಾರ್ಹ. ಅವರಿಗೆ ದೇವರು ಆಯುಷ್ಯ, ಆರೋಗ್ಯ, ಭಾಗ್ಯಾದಿಗಳನ್ನು ಕೊಟ್ಟು ಕಾಪಾಡಲಿ.

* ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಗೌರಿಮಠಪ್ರಧಾನ ಮಂತ್ರಿಯಾಗಲಿ

ಬಸವರಾಜ ಬೊಮ್ಮಾಯಿ ಅವರು ಶತಾಯುಷಿಗಳಾಗಿ ಬಾಳಬೇಕು. ತಂದೆ ಎಸ್.ಆರ್ ಬೊಮ್ಮಾಯಿ ಅವರು ಕೇಂದ್ರ ಹಾಗೂ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಿ ತಮ್ಮದೇಯಾದ ಛಾಪು ಮೂಡಿಸಿದ್ದರು. ಅವರಂತೆಯೇ ಬಸವರಾಜ ಬೊಮ್ಮಾಯಿ ಅವರು ಶಾಸಕರಾಗಿ, ಸಚಿವರಾಗಿ, ಸಿಎಂ ಆಗಿ ರಾಜ್ಯದಲ್ಲಿ ಸೇವೆ ಮಾಡಿದ್ದಾರೆ. ಸದ್ಯ ಸಂಸದರಾಗಿರುವ ಅವರು ಬರುವ ದಿನಗಳಲ್ಲಿ ದೇಶದ ಪ್ರಧಾನ ಮಂತ್ರಿಯಾಗುವ ಸೌಭಾಗ್ಯ ಸಿಗಲಿ.

* ಎಸ್. ಎಸ್ ಪಾಟೀಲ, ಗದಗ.