ಕನಕಪುರ: ತಾಲೂಕಾದ್ಯಂತ ದಲಿತರ ಮೇಲೆ ಸರಣಿ ದೌರ್ಜನ್ಯಗಳು ನಡೆಯುತ್ತಿದ್ದರೂ ತಾಲೂಕು ಆಡಳಿತ ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಜೆ.ಎಂ.ಶಿವಲಿಂಗಯ್ಯ ಆರೋಪಿಸಿದರು
ಕನಕಪುರ: ತಾಲೂಕಾದ್ಯಂತ ದಲಿತರ ಮೇಲೆ ಸರಣಿ ದೌರ್ಜನ್ಯಗಳು ನಡೆಯುತ್ತಿದ್ದರೂ ತಾಲೂಕು ಆಡಳಿತ ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಜೆ.ಎಂ.ಶಿವಲಿಂಗಯ್ಯ ಆರೋಪಿಸಿದರು. ತಾಲೂಕು ಕಚೇರಿ ಮುಂದೆ ದಲಿತಪರ ಸಂಘಟನೆಗಳು ಹಮ್ಮಿಕೊಂಡಿದ್ದ ತಮಟೆ ಚಳವಳಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ದಲಿತರ ಮೇಲೆ ಜಾತಿ ದೌರ್ಜನ್ಯ ಹಾಗೂ ತಾರತಮ್ಯ ಪ್ರಕರಣಗಳು ಮಿತಿ ಮೀರುತ್ತಿವೆ. ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಹರಿಹರ, ಭೂಹಳ್ಳಿ ಗ್ರಾಮಗಳಲ್ಲಿ ದಲಿತರ ಮೇಲೆ ಅಮಾನವೀಯ ದೌರ್ಜನ್ಯಗಳು ನಡೆದಿದ್ದರೂ ತಾಲೂಕು ಆಡಳಿತ ಹಾಗೂ ಸಾತನೂರು ಪೊಲೀಸ್ ಠಾಣಾಧಿಕಾರಿಗಳು ಪ್ರಕರಣ ದಾಖಲಿಸದೆ ವಿಳಂಬ ನೀತಿ ಅನುಸರಿಸಿದ್ದಾರೆ. ಹಾರೋಶಿವನಹಳ್ಳಿ ಗ್ರಾಮದಲ್ಲಿ ಗಣೇಶಮೂರ್ತಿ ವಿಸರ್ಜನೆ ವೇಳೆ ಸವರ್ಣೀಯರ ಗುಂಪಿನ ಕೆಲ ಕಿಡಿಗೇಡಿಗಳು ದಲಿತ ಸಮುದಾಯದ ಮೇಲೆ ಹಲ್ಲೆ, ಜಾತಿ ನಿಂದನೆ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ್ದರೂ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಮೌನವಾಗಿದೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಕೂಡಲೇ ದೌರ್ಜನ್ಯ ಎಸಗಿರುವವರ ವಿರುದ್ಧ ದೂರು ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿದರು.
ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲಿ ದಲಿತರಿಗೆ ಹಿಂದುಳಿದ ವರ್ಗಗಳಿಗೆ, ರಕ್ಷಣೆ ಇಲ್ಲದಂತಾಗಿದೆ. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ದಲಿತರ ಬದುಕಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಇದಕ್ಕೆ ಪೊಲೀಸ್ ಇಲಾಖೆಯ ವೈಫಲ್ಯವೂ ಕಾಣುತ್ತಿದೆ. ಮುಖ್ಯಮಂತ್ರಿಗಳು ಈ ಕಡೆಗೆ ಗಮನಹರಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಮನವಿ ಮಾಡಿದರು.ಮನವಿ ಸ್ವೀಕರಿಸಿದ ತಹಸೀಲ್ದಾರ್ ಎಂ.ಸಂಜಯ್ ಮಾತನಾಡಿ, ತಾಲೂಕಿನ ತುಂಗಣಿ ಗ್ರಾಮದಲ್ಲಿ ಇದೇ ರೀತಿ ದೌರ್ಜನ್ಯ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ದೇನೆ. ಯಾವುದೇ ಬೇಜವಾಬ್ದಾರಿ ವರ್ತನೆ ಮಾಡಿಲ್ಲ. ಹಾರೋಶಿವನಹಳ್ಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ತಿಳಿದುಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ದಲಿತರ ಕುಂದು ಕೊರತೆ ಸಭೆ 15 ದಿನಗಳಲ್ಲಿ ಕರೆದು ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ದಲಿತ ಹೋರಾಟಗಾರ ಟಿ.ಗೋಪಿ, ಸಮಾಜ ಸೇವಕ ರುದ್ರೇಶ್ ಕಹಳೆ, ಛಲವಾದಿ ಮಹಾಸಭಾ ಜಿಲ್ಲಾ ಉಸ್ತುವಾರಿ ನವೀನ್, ಬಿಎಸ್ಪಿ ಜಿಲ್ಲಾಧ್ಯಕ್ಷ ರಾಜ್ ಮೌರ್ಯ, ದಲಿತ ಮುಖಂಡ ನಾಗಯ್ಯ, ತಾ.ಮ.ಮಲ್ಲೇಶ್, ಗೋಪಾಲ್, ಏಳಗಳ್ಳಿ ಶಿವು, ಭರತ್, ಹರಿಹರ ಸ್ವಾಮಿ, ಗಣೇಶ್, ಯಶವಂತ ಪಾಲ್ಗೊಂಡಿದ್ದರು.ಕೆ ಕೆ ಪಿ ಸುದ್ದಿ 01:
ಕನಕಪುರ ತಾಲೂಕು ಆಡಳಿತದ ವಿರುದ್ಧ ದಲಿತ ಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.