ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಎಲ್ಲ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ಮಾಡಿದ ಹೆಗ್ಗಳಿಕೆ ಬಾಬಾ ಸಾಹೇಬರದು
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ದೇಶದ ಸಮಸ್ತ ಜನರು ಸಮಾನತೆ ಮತ್ತು ಸ್ವಾಭಿಮಾನದಿಂದ ಬದುಕುವಂತಹ ಸಂವಿಧಾನ ರಚಿಸಿದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗೆಲ್ಲ ದಾರಿ ದೀಪ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಮತ್ತು ಪುರಸಭೆಯ ಸಂಯುಕ್ತಾಶ್ರಯದಲ್ಲಿ ಪಟ್ಟಣದ ವಾಲ್ಮೀಕಿ ನಾಯಕರ ಸಮುದಾಯ ಭವನದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತಿನಲ್ಲಿಯೆ ಸದೃಢವಾದ ಸಂವಿಧಾನ ನಮ್ಮದಾಗಿದ್ದು, ಸತತ ಅಧ್ಯಯನದ ಮೂಲಕ ಅದನ್ನು ರಚನೆ ಮಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಎಲ್ಲ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ಮಾಡಿದ ಹೆಗ್ಗಳಿಕೆ ಬಾಬಾ ಸಾಹೇಬರದು ಎಂದರು.ಕಳೆದ ಎರಡು ವರ್ಷಗಳಿಂದ ತಾಲೂಕು ಎಸ್ಸಿ ಮತ್ತು ಎಸ್ಟಿ ಸಮಾಜದವರ ಸಭೆ ಕರೆದು ಅವರ ಸಮಸ್ಯೆಗಳನ್ನು ಆಲಿಸಿಲ್ಲ ಎಂಬ ದೂರುಗಳಿದ್ದು, ಕೂಡಲೇ ಅಧಿಕಾರಿಗಳು ಸಭೆ ನಡೆಸಬೇಕೆಂದು ಸೂಚನೆ ನೀಡಿದರು.
ಉಪನ್ಯಾಸಕ ಪ್ರಭು ಭಾರತ ಸಂವಿಧಾನ ಕುರಿತು ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸಂವಿಧಾನ ದಿನಾಚರಣೆಯ ಅಂಗವಾಗಿ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.ಕಾರ್ಯಕ್ರಮ ಆರಂಭಕ್ಕೂ ಮೊದಲು ಪಟ್ಟಣದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಬಳಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡಿಸಿ ಸಂವಿಧಾನ ಶಿಲ್ಪಿಗೆ ಜಯಕಾರದ ಘೋಷಣೆ ಮೊಳಗಿಸಿದರು.
ಭಾರತ ಸರ್ಕಾರದ ತಂಬಾಕು ಮಂಡಳಿಯ ನಿವೃತ್ತ ಪ್ರಾದೇಶಿಕ ವ್ಯವಸ್ಥಾಪಕ ಬಿ. ಮಂಜುರಾಜ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ತಾಪಂ ಮಾಜಿ ಅಧ್ಯಕ್ಷ ಎಂ.ಎಚ್. ಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್. ಮಹದೇವ್, ಸದಸ್ಯ ಸೈಯದ್ ಜಾಬೀರ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಚ್.ಎಚ್. ನಾಗೇದ್ರ, ನಿವೃತ್ತ ಉಪನ್ಯಾಸಕ ಕೃಷ್ಣಯ್ಯ, ದಲಿತ ಮುಖಂಡರಾದ ನಾಗರಾಜು, ಎಂ. ಲೋಕೇಶ್, ಶಾಂತಿರಾಜ್, ನಂದೀಶ್, ಗುರು, ಬಸವರಾಜು, ಚಲುವರಾಜು, ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ, ತಾಪಂ ಇ.ಒ. ವಿ.ಪಿ. ಕುಲದೀಪ್, ಬಿಇಒ ಆರ್. ಕೃಷ್ಣಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶಂಕರಮೂರ್ತಿ, ಉಪನ್ಯಾಸಕ ಡಿ. ಶ್ರೀನಿವಾಸ್ ಇದ್ದರು.