ಕಳೆದ ಐದು ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಾದ ತಾಪಂ, ಜಿಪಂ ಚುನಾವಣೆ ನನೆಗುದಿಗೆ ಬಿದ್ದಿದ್ದು, ಯಾವಾಗ ನಡೆಯುತ್ತವೆ ಎಂದು ಎಲ್ಲರ ಚಿತ್ತ ಚುನಾವಣೆಯತ್ತ ನೆಟ್ಟಿತ್ತು. ಕಳೆದ ವಾರ ಮುಂಡರಗಿ ತಾಲೂಕಿನ 4 ಜಿಪಂ, 11 ತಾಪಂ ಕ್ಷೇತ್ರಗಳಿಗೆ ಕ್ಷೇತ್ರವಾರು ಮೀಸಲು ಪ್ರಕಟವಾದ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಶರಣು ಸೊಲಗಿ
ಕನ್ನಡಪ್ರಭ ವಾರ್ತೆ ಮುಂಡರಗಿಕಳೆದ ಐದು ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಾದ ತಾಪಂ, ಜಿಪಂ ಚುನಾವಣೆ ನನೆಗುದಿಗೆ ಬಿದ್ದಿದ್ದು, ಯಾವಾಗ ನಡೆಯುತ್ತವೆ ಎಂದು ಎಲ್ಲರ ಚಿತ್ತ ಚುನಾವಣೆಯತ್ತ ನೆಟ್ಟಿತ್ತು. ಕಳೆದ ವಾರ ಮುಂಡರಗಿ ತಾಲೂಕಿನ. 4 ಜಿಪಂ, 11 ತಾಪಂ ಕ್ಷೇತ್ರಗಳಿಗೆ ಕ್ಷೇತ್ರವಾರು ಮೀಸಲು ಪ್ರಕಟವಾದ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಹಮ್ಮಿಗಿ ಜಿಪಂ ಸಾಮಾನ್ಯ, ಡಂಬಳ ಜಿಪಂ ಕ್ಷೇತ್ರ ಅನುಸೂಚಿತ ಜಾತಿ ಮಹಿಳೆ(ಎಸ್ಸಿ), ಹಿರೇವಡ್ಡಟ್ಟಿ ಜಿಪಂ ಕ್ಷೇತ್ರ ಹಿಂದುಳಿದ ವರ್ಗ ಅ ಮಹಿಳೆ, ನೂತನವಾಗಿ ಪ್ರಾರಂಭವಾಗಿರುವ ಕಲಕೇರಿ ಜಿಪಂ ಕ್ಷೇತ್ರ ಅನುಸೂಚಿತ ಜಾತಿಗೆ ಮೀಸಲಾಗಿದೆ. ಡಂಬಳ ತಾಪಂ: ಸಾಮಾನ್ಯ (ಮಹಿಳೆ), ಡೋಣಿ ತಾಪಂ: ಅನುಸೂಚಿತ ಜಾತಿ( ಮಹಿಳೆ), ಕದಾಂಪೂರ: ಅನುಸೂಚಿತ ಜಾತಿ, ಹಿರೇವಡ್ಡಟ್ಟಿ: ಸಾಮಾನ್ಯ, ಮೇವುಂಡಿ: ಸಾಮಾನ್ಯ, ಆಲೂರ: ಹಿಂದುಳಿದ ವರ್ಗ ಅ(ಮಹಿಳೆ), ಕಲಕೇರಿ: ಅನುಸೂಚಿತ ಜಾತಿ(ಮಹಿಳೆ), ಹಾರೋಗೇರಿ: ಅನಸೂಚಿತ ಪಂಗಡ ಮಹಿಳೆ(ಎಸ್ಪಿ), ಕೊರ್ಲಹಳ್ಳಿ: ಸಾಮಾನ್ಯ, ಹಮ್ಮಿಗಿ: ಸಾಮಾನ್ಯ ಮಹಿಳೆ, ಬಾಗೇವಾಡಿ: ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಗೊಂಡಿದೆ.ಚುರುಕುಗೊಂಡ ರಾಜಕೀಯ ಚಟುವಟಿಕೆ:
ಜಿಪಂ ಹಾಗೂ ತಾಪಂ ಚುನಾವಣೆಗೆ ಮೀಸಲು ಪ್ರಕಟವಾದ ಹಿನ್ನೆಲೆ ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಪರ್ಧಿಸಲಿಚ್ಛಿಸುವ ಆಕಾಂಕ್ಷಿಗಳು ತಮ್ಮ ಪಕ್ಷಗಳ ಮುಖಂಡರ ಮನೆಗಳಿಗೆ, ಹಾಲಿ ಹಾಗೂ ಮಾಜಿ ಶಾಸಕರುಗಳ ಮನೆಗಳಿಗೆ ತಮ್ಮ ಬೆಂಬಲಿಗರೊಂದಿಗೆ ಭೇಟಿ ನೀಡಿ ತಮಗೆ ಟಿಕೇಟ್ ಕೊಡಿಸುವಂತೆ ದುಂಬಾಲು ಬಿದ್ದಿದ್ದಾರೆ. ಕೆಲವು ಆಕಾಂಕ್ಷಿಗಳು ತಮ್ಮ ಕ್ಷೇತ್ರವ್ಯಾಪ್ತಿಯ ಗ್ರಾಮಗಳ ಮನೆ ಮನೆಗೆ ತೆರಳಿ ಪಕ್ಷ ತಮಗೆ ಟಿಕೆಟ್ ನೀಡುವುದು ಗ್ಯಾರಂಟಿ ತಾವು ಆಶೀರ್ವಾದ ಮಾಡಬೇಕೆಂದು ಸಹ ಹೇಳಿಕೊಂಡು ಓಡಾಡುತ್ತಿರುವುದು ಕಂಡು ಬರುತ್ತಿದೆ.ಮೀಸಲಾತಿ ಗೊಂದಲ, ಅಸಮಾಧಾನ:
ಹಮ್ಮಿಗಿ, ಡಂಬಳ ಜಿಪಂ ಕ್ಷೇತ್ರಗಳ ಮೀಸಲಾತಿ ಪದೇ ಪದೇ ಈ ಹಿಂದಿದ್ದ ಮೀಸಲಾತಿಗಳೇ ಬರುತ್ತಿದ್ದು, ಹಮ್ಮಿಗಿ ಕ್ಷೇತ್ರವು ಈ ಬಾರಿ ಎಸ್ಟಿ ಕ್ಷೇತ್ರವಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಅದು ಮತ್ತೆ ಸಾಮಾನ್ಯ ಕ್ಷೇತ್ರವಾಗಿದೆ. ಹೀಗಾಗಿ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ಒಂದು ವೇಳೆ ಅಲ್ಲಿ ಸರಿಯಾದ ನ್ಯಾಯ ಸಿಗದಿದ್ದರೆ, ಪಕ್ಷವೂ ಎಸ್ಟಿ ಸಮುದಾಯಕ್ಕೆ ಆದ್ಯತೆ ನೀಡದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಎಸ್ಟಿ ಸಮುದಾಯದಿಂದ ಸ್ಪರ್ಧೆಗಿಳಿಯುವ ಮಾತುಗಳ ಕೇಳಿ ಬರುತ್ತಿವೆ. ಡಂಬಳ ಕ್ಷೇತ್ರಕ್ಕೂ ಸಹ ಮತ್ತೆ ಹಿಂದಿನ ಮೀಸಲಾತಿಯೇ ಬಂದಿದ್ದು, ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಇತರೆ ಸಮಾಜ ಬಾಂಧವರಿಗೆ ಪದೇ ಪದೇ ಅನ್ಯಾಯವಾಗುತ್ತಿದೆ ಎಂದು ಎರಡೂ ಕಡೆಗಳಲ್ಲಿ ಆಕಾಂಕ್ಷಿಗಳಿಂದ ಅಸಮಾಧಾನ ವ್ಯಕ್ತವಾಗುತ್ತಿರುವುದು ಕಂಡು ಬರುತ್ತಿದೆ.ನೂತನ ಕಲಕೇರಿ ಜಿಪಂಗೂ ಬೇಡಿಕೆ:
ಈ ಬಾರಿ ಜಿಪಂ ಕ್ಷೇತ್ರ ವಿಂಗಡನೆಯ ಹಿನ್ನೆಲೆಯ ಕಲಕೇರಿ ನೂತನ ಕ್ಷೇತ್ರವಾಗಿದ್ದು, ಈ ಕ್ಷೇತ್ರವು ಅನುಸೂಚಿತ ಜಾತಿಗೆ ಸೀಮಿತವಾಗಿದ್ದು, ಇಲ್ಲಿಯೂ ಸಹ ಆಡಳಿತಾರೂಢ ಕಾಂಗ್ರೆಸ್, ವಿರೋಧ ಪಕ್ಷ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಪಿ ದೊಡ್ಡದಾಗಿದೆ.ಸಾಮಾನ್ಯ ಕ್ಷೇತ್ರಕ್ಕೆ ಹೆಚ್ಚಿದ ಬೇಡಿಕೆ:
ಹಮ್ಮಿಗಿ ಜಿಪಂ ಕ್ಷೇತ್ರವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಈ ಬಾರಿ ಇಲ್ಲಿ ಸ್ಪರ್ಧಿಸಲು ಘಟಾನುಘಟಿ ವ್ಯಕ್ತಿಗಳೇ ಮುಂದಾಗಿದ್ದು, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಪಕ್ಷೇತರವಾಗಿಯೂ ಅನೇಕರು ಸ್ಪರ್ಧೆಗಿಳಿಯುವ ಮಾತುಗಳು ಕೇಳಿಬರುತ್ತಿವೆ. ಇದು ಸಾಮನ್ಯ ಕ್ಷೇತ್ರವಾಗಿರುವುದರಿಂದ ಎಸ್ಸಿ, ಎಸ್ಟಿ ಹಾಗೂ ಇತರೆ ಎಲ್ಲ ಸಮುದಾಯದವರೂ ಸ್ಪರ್ಧಿಸಲು ಮುಂದಾಗುತ್ತಿರುವುದು ಕಂಡು ಬರುತ್ತಿದೆ.ಅ.19ರೊಳಗೆ ಆಕ್ಷೇಪನೆಗೆ ಅವಕಾಶ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಅಧಿಸೂಚನೆ ಹೊರಡಿಸಿದ್ದು, ಈಗಾಗಲೇ ಮೀಸಲು ಪ್ರಕಟವಾಗಿರುವ ಕ್ಷೇತ್ರಗಳಲ್ಲಿ ಏನಾದರೂ ಆಕ್ಷೇಪಣೆಗಳಿದ್ದರೆ ಅ.19 ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಹಮ್ಮಿಗಿ, ಡಂಬಳ ಕ್ಷೇತ್ರಗಳೂ ಸೇರಿದಂತೆ ವಿವಿಧೆಡೆ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆಗಳಿವೆ.ಹಮ್ಮಿಗಿ ಜಿಪಂ ಕ್ಷೇತ್ರ ಈ ಬಾರಿ ಎಸ್ಟಿ ಮೀಸಲು ಕ್ಷೇತ್ರವಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದವು. ಆದರೆ ಅದು ಹುಸಿಯಾಗಿದೆ. ಹೀಗಾಗಿ ನ್ಯಾಯಾಲಯದ ಮೋರೆ ಹೋಗಲು ಯೋಚಿಸಲಾಗುತ್ತಿದೆ ಎಂದು ವಾಲ್ಮೀಕಿ ನಾಯಕ ಸಂಘದ ಮುಂಡರಗಿ ಅಧ್ಯಕ್ಷ ರಾಮಣ್ಣ ಕೋಳಿ ತಿಳಿಸಿದ್ದಾರೆ.