ಸಾರಾಂಶ
ತಾಲೂಕು ಆಡಳಿತ ಸೌಧದ ಮುಂದೆ ಮಹಿಳೆಯರು ಕಾಲೇಜು ರಸ್ತೆ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣ ವೃತ್ತಕ್ಕೆ ತೆರಳಿದರು
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಮಹಿಳೆಯರು ಪಟ್ಟಣದಲ್ಲಿ ಮಂಗಳವಾರ ತಾಯಿ-ಮಗು ಆರೈಕೆ ಮತ್ತು ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನಾ ಜಾಥಾ ಮತ್ತು ಸಹಿ ಸಂಗ್ರಹ ಆಂದೋಲನ ನಡೆಸಿದರು.ತಾಲೂಕು ಕೇಂದ್ರದಲ್ಲಿ ತಾಯಿ-ಮಗು ಆರೈಕೆಗೆ ಮತ್ತು ಹೆರಿಗೆಗೆ ಆಸ್ಪತ್ರೆಯೊಂದು ನಿರ್ಮಾಣವಾಗಲೇಬೇಕೆಂದು ಪಟ್ಟು ಹಿಡಿದಿರುವ ಸಾವಿರಾರು ಮಹಿಳೆಯರು ತಾಯಿ-ಮಗು ಆರೈಕೆ ಮತ್ತು ಹೆರಿಗೆ ಆಸ್ಪತ್ರೆ ನಿರ್ಮಾಣ ಹೋರಾಟ ಸಮಿತಿ ಕರೆಯ ಹಿನ್ನೆಲೆ ಸರ್ಕಾರವನ್ನು ಒತ್ತಾಯಿಸಲು ಹಾಗೂ ಈ ಭಾಗದ ಜನಪ್ರತಿನಿಧಿಗಳ ಗಮನವನ್ನು ಸೆಳೆಯಲು ರಸ್ತೆಗೆ ಇಳಿದಿದ್ದರು. ಹಕ್ಕೊತ್ತಾಯದ ಫಲಕಗಳನ್ನ ಹಿಡಿದು, ಹೆರಿಗೆ ಆಸ್ಪತ್ರೆ ನಿರ್ಮಾಣ ಆಗಬೇಕೆಂಬ ಘೋಷಣೆ ಕೂಗಿ ಚಳುವಳಿ ನಡೆಸಿ, ಎಲ್ಲರ ಗಮನ ಸೆಳೆದರು.
ತಾಲೂಕು ಆಡಳಿತ ಸೌಧದ ಮುಂದೆ ಮಹಿಳೆಯರು ಕಾಲೇಜು ರಸ್ತೆ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣ ವೃತ್ತಕ್ಕೆ ತೆರಳಿದರು. ವೃತ್ತದಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದರು. ಬಳಿಕ ಸಾರ್ವಜನಿಕ ಆಸ್ಪತ್ರೆ ರಸ್ತೆಯ ಮೂಲಕ ಕುಟುಂಬ ಮತ್ತು ಕಲ್ಯಾಣ ಇಲಾಖೆಯ ತಾಲೂಕು ಆರೋಗ್ಯಾಧಿಕಾರಿಗಳು ಕಚೇರಿಯಿರುವ ಸಾರ್ವಜನಿಕ ಆಸ್ಪತ್ರೆಯ ಆವರಣಕ್ಕೆ ತೆರಳಿದರು. ಆಸ್ಪತ್ರೆ ಮುಂಭಾಗ ಕೆಲ ಸಮಯ ಧರಣಿ ಕುಳಿತು ತಹಸೀಲ್ದಾರ್ ಟಿ.ಜಿ. ಸುರೇಸಾಚಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಕೆ. ರವಿಕುಮಾರ್ ಹಾಗೂ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಎಸ್.ಬಿ. ಅಭಿಲಾಷ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.ಆಂದೋಲನದ ನೇತೃತ್ವವನ್ನು ವಹಿಸಿದ್ದ ಹೋರಾಟ ಸಮಿತಿ ಸಂಚಾಲಕ ಶಿವಕುಮಾರ್ ಮಾತನಾಡಿ, ಕೂಡಲೇ ತಾಯಿ ಮಗು ಆರೈಕೆ ಮತ್ತು ಹೆರಿಗೆ ಆಸ್ಪತ್ರೆ ನಿರ್ಮಾಣ ಮಾಡಲು ಪ್ರಸ್ತುತ ಆಯವ್ಯಯದಲ್ಲಿ ಅನುದಾನವನ್ನು ಮಂಜೂರು ಮಾಡುವ ಮೂಲಕ ಮತ್ತೊಂದು ಹೋರಾಟಕ್ಕೆ ಆಸ್ಪದ ನೀಡಬಾರದೆಂದು ಮನವಿ ಮಾಡಿದರು.
ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷ ಪಿ.ಎಂ. ಸರೋಜಮ್ಮ ಮಾತನಾಡಿದರು.ಎಸ್‌ಐ ಜಗದೀಶ ಧೂಳಶೆಟ್ಟಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಹೋರಾಟ ಸಮಿತಿ ಅಧ್ಯಕ್ಷೆ ಮೋಹನ ಕುಮಾರಿ, ಕಾರ್ಯದರ್ಶಿಗಳಾದ ರೇಖಾ, ಶಶಿಕಲಾ, ಉಪಾಧ್ಯಕ್ಷೆ ಕೋಮಲಾಕ್ಷಿ, ಸಂಚಾಲಕರಾದ ಸುರೇಶ್, ಸ್ವಾಮಿ, ಕುಕ್ಕೂರು ರಾಜು, ಸೋಮಶೇಖರ್, ಮಣಿಲಾ, ಸರೋಜಮ್ಮ, ಪ್ರೇಮಕುಮಾರಿ, ಮಹದೇವಮ್ಮ, ಕಾಂತಮ್ಮ, ಪಾರ್ವತಿ, ಚಂದ್ರಮ್ಮ, ಹೊನ್ನಮ್ಮ , ಶಾಂತಮ್ಮ, ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹದೇವಯ್ಯ, ರೈತ ಸಂಘದ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಶಂಕರ್ ಇದ್ದರು.