ಸೋಮವಾರಪೇಟೆ: ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಸಭೆ

| Published : Feb 11 2024, 01:46 AM IST

ಸೋಮವಾರಪೇಟೆ: ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಗುರುತರ ಸಮಸ್ಯೆಗಳ ಬಗ್ಗೆ ಗಮನ ಸೆಳೆದು ಪರಿಹರಿಸಬೇಕು

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಸಭೆ ಇಲ್ಲಿನ ಜಾನಕಿ ಕನ್ವೆಷನ್ ಸಭಾಗಂಣದಲ್ಲಿ ಶನಿವಾರ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ. ಮಂತರ್ ಗೌಡ ಅವರಲ್ಲಿ ತಾಲೂಕಿನಲ್ಲಿ ತಾಂಡವವಾಡುತ್ತಿರುವ ಗುರುತರ ಸಮಸ್ಯೆಗಳ ಬಗ್ಗೆ ಗಮನ ಸೆಳೆದು ಪರಿಹರಿಸಬೇಕು ಎಂದು ಮನವಿ ಮಾಡಿದರು. ಜಿಲ್ಲೆಯಲ್ಲಿ ಸೋಮವಾರಪೇಟೆ ಅಭಿವೃದ್ಧಿಯಿಂದ ಹಿಂದೆ ಉಳಿದಿದೆ. ಇಲ್ಲಿ ಯಾವುದೇ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಹಾದುಹೋಗಿಲ್ಲದಿರುವುದು ಎಲ್ಲ ರೀತಿಯ ವಾಣಿಜ್ಯೋದ್ಯಮ ಬೆಳವಣಿಗೆಗೆ ತೊಡಕಾಗಿದೆ. ಕೂಡಲೇ ಬೆಂಗಳೂರಿನಿಂದ ಜಾಲ್ಸೂರಿಗೆ ಹಾದುಹೋಗಲಿರುವ ರಾಜ್ಯ ಹೆದ್ದಾರಿ ಕಾಮಗಾರಿ ಮುಂದುವರೆಸುವಂತೆ ಮನವಿ ಮಾಡಿದರು. ತಾಲೂಕಿನಲ್ಲಿ ಕಾಡುಪ್ರಾಣಿಗಳು ಮತ್ತು ಮಾನವ ಸಂಘರ್ಷ ದಿನದಿಂದ ಹೆಚ್ಚಾಗುತ್ತಿದ್ದು, ಕೊನೆಗಾಣಬೇಕು. ತಾಲೂಕಿನ ಜನರ ಅನುಕೂಲಕ್ಕಾಗಿ ಸಾರಿಗೆ ಉಪಕೇಂದ್ರವನ್ನು ಪ್ರಾರಂಭಿಸಬೇಕು. ಶನಿವಾರಸಂತೆಯಲ್ಲಿ ಜನರಲ್ ಕಾರ್ಯಪ್ಪ ಹುಟ್ಟಿದ ಮನೆಯನ್ನು ಮ್ಯೂಸಿಯಂ ಮಾಡಬೇಕು. ತಾಲೂಕಿನಲ್ಲಿ ಕಾಫಿ ಮ್ಯೂಸಿಯಂ ಮತ್ತು ರೀಸರ್ಚ್ ಕೇಂದ್ರ ಪ್ರಾರಂಭಕ್ಕೆ ಮುಂದಾಗಬೇಕು. ತಾಲೂಕಿನ ಕೆಲವು ಸರ್ಕಾರಿ ಕಚೇರಿಗಳಲ್ಲಿ ಇಂದಿಗೂ ಜನರ ಶೋಷಣೆ ನಡೆಯುತ್ತಿದ್ದು, ಅದನ್ನು ತಪ್ಪಿಸಬೇಕಿದೆ. ತಾಲೂಕು ಕೇಂದ್ರದಿಂದ ದೂರದ ಬೆಂಗಳೂರು, ಮಂಗಳೂರು ಸೇರಿದಂತೆ ಹಲವು ನಗರಗಳಿಗೆ ಸಂಚರಿಸಲು ಸ್ಥಳೀಯರಿಗೆ ಅನುಕೂಲವಾಗುವಂತೆ ಕೆಎಸ್‍ಆರ್‍ಟಿಸಿ ಬಸ್ ಸೌಕರ್ಯ ಕಲ್ಪಿಸಲು ಮುಂದಾಗಬೇಕು. ತಾಲೂಕಿನಲ್ಲಿನ ಪ್ರವಾಸೋದ್ಯಮ ಕೇಂದ್ರಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಪ್ರವಾಸೋದ್ಯಮ ಬೆಳವಣಿಗೆಗೆ ಮುಂದಾಗುವುದು ಸೇರಿದಂತೆ ಹಲವು ಬೇಡಿಕೆಗಳ ಮನವಿಯನ್ನು ಶಾಸಕರಿಗೆ ಸಲ್ಲಿಸಿದರು.

ಮನವಿಯನ್ನು ಸ್ವೀಕರಿಸಿದ ಶಾಸಕ ಮಂತರ್ ಗೌಡ ಮಾತನಾಡಿ, ಈಗಾಗಲೇ ಮಲ್ಲಳ್ಳಿ ಜಲಪಾತಕ್ಕೆ ಕೇಬಲ್ ಕಾರ್ ಅಳವಡಿಸುವ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಮಾತುಕತೆಯಾಡಿದ್ದು, ಮುಂದಿನ ಬಜೆಟ್‍ನಲ್ಲಿ ಸೇರ್ಪಡೆಯಾಗಬಹುದು. ಒಳಾಂಗಣ ಕ್ರೀಡಾಂಗಣ ಪ್ರಾರಂಭಿಸಲು ಮಾತನಾಡಲಾಗಿದೆ. ಕಳೆದ 17 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಮುಂದಿನ ಬಜೆಟ್‍ನಲ್ಲಿ ಹಣ ನೀಡುವ ಸಾಧ್ಯತೆ ಇದೆ ಎಂದರು. ಬೆಂಗಳೂರು ಜಾಲ್ಸೂರು ರಾಜ್ಯ ಹೆದ್ದಾರಿಯ ಉಳಿಕೆ ರಸ್ತೆ ಕಾಮಗಾರಿಗೆ 20 ಕೋಟಿ ರು. ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸೂಕ್ತ ರೀತಿಯಲ್ಲಿ ಕೆಲಸ ಮಾಡಲು ಎಲ್ಲರ ಸಹಕಾರ ಮುಖ್ಯವಾಗಿದ್ದು, ಎಲ್ಲ ಸಂಘ ಸಂಸ್ಥೆಗಳು ಮತ್ತು ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಸಮಿತಿಯ ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಉಪಾಧ್ಯಕ್ಷ ಕೆ.ಎನ್. ದೀಪಕ್, ಖಜಾಂಚಿ ಅಬ್ದುಲ್ ರಜಾಕ್, ನಿರ್ದೇಶಕರಾದ ಕೆ.ಡಿ. ಜೀವನ್‍ಕುಮಾರ್, ಎಚ್.ಕೆ. ತ್ರಿಶೂಲ್, ಜಿ.ಎಂ. ಹೂವಯ್ಯ, ಕೆ.ಎ. ಪ್ರಕಾಶ್, ವಿ.ಎಂ. ಗೌತಮ್, ಮಂಜುನಾಥ್, ಲಕ್ಷ್ಮಣ ಮತ್ತಿತರರು ಪಾಲ್ಗೊಂಡಿದ್ದರು.