ಬಳ್ಳಾರಿ ಜಿಲ್ಲೆ: ಹೆಸರಿಗಷ್ಟೇ ತಾಲೂಕು, ಸಿಗಲಿಲ್ಲ ಸೌಕರ್ಯ!

| Published : Jan 13 2024, 01:32 AM IST

ಸಾರಾಂಶ

ಜಗದೀಶ್‌ ಶೆಟ್ಟರ್, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹೀಗೆ ಸಿಎಂಗಳು ಸರದಿಯಂತೆ ಬದಲಾವಣೆಗೊಂಡರೂ ತಾಲೂಕು ಕೇಂದ್ರಗಳ ಸ್ಥಿತಿಗತಿ ಮಾತ್ರ ಬದಲಾಗಲಿಲ್ಲ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಆಡಳಿತಾತ್ಮಕ ಅನುಕೂಲಕ್ಕೆಂದು ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳ ಹಿಂದೆಯೇ ಅಸ್ತಿತ್ವ ಪಡೆದ ಮೂರು ತಾಲೂಕುಗಳು ಇಂದಿಗೂ ಪೂರ್ಣ ಪ್ರಮಾಣದ ತಾಲೂಕು ಕೇಂದ್ರದ ಸ್ವರೂಪ ಪಡೆದುಕೊಳ್ಳದೇ ಜನತೆಯ ಪರದಾಟ ತಪ್ಪುತ್ತಿಲ್ಲ!

ಬೆರಳೆಣಿಕೆಯಷ್ಟು ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಉಳಿದ ಇಲಾಖೆಯ ಕಚೇರಿ ಕೆಲಸಗಳು, ವಿವಿಧ ಸೌಕರ್ಯಗಳಿಗೆ ಜನರು ಎಂದಿನಂತೆ ಅಲೆದಾಡುತ್ತಿದ್ದಾರೆ. ಇದು ತಾಲೂಕು ಕೇಂದ್ರದ ಮೂಲ ಆಶಯವನ್ನೇ ವಿಮುಖಗೊಳಿಸಿದೆ.

ಸ್ಥಿತಿಗತಿ ಬದಲಾಗಲಿಲ್ಲ: ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ವೇಳೆ ತಮ್ಮ ಅಧಿಕಾರ ಅವಧಿಯ ಕೊನೆ ಗಳಿಗೆಯಲ್ಲಿ ರಾಜ್ಯದಲ್ಲಿ 49 ತಾಲೂಕುಗಳನ್ನು ಘೋಷಣೆ ಮಾಡಿದರು. 2018ರಿಂದ ಅನ್ವಯವಾಗುವಂತೆ ತಾಲೂಕು ರಚನೆ ಮಾಡಲು ಆಡಳಿತಾತ್ಮಕ ಅನುಮೋದನೆಯೂ ದೊರೆಯಿತು. 2018ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರ ಅವಧಿಯಲ್ಲಿ 49 ತಾಲೂಕುಗಳು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದವು. ಈ ಪೈಕಿ ಅಖಂಡ ಬಳ್ಳಾರಿ ಜಿಲ್ಲೆಯ ಕೊಟ್ಟೂರು, ಕಂಪ್ಲಿ ಹಾಗೂ ಕುರುಗೋಡು ತಾಲೂಕುಗಳಾದವು.

ಹಗರಿಬೊಮ್ಮನಹಳ್ಳಿ ಹಾಗೂ ಕೂಡ್ಲಿಗಿ ತಾಲೂಕಿನ ಅನೇಕ ಗ್ರಾಮಗಳು ಕೊಟ್ಟೂರು ತಾಲೂಕಿಗೆ, ಹೊಸಪೇಟೆ ತಾಲೂಕಿನ ಗ್ರಾಮಗಳು ಸೇರಿಸಿ ಕಂಪ್ಲಿ ಹಾಗೂ ಬಳ್ಳಾರಿ ತಾಲೂಕಿನ ಹತ್ತಾರು ಹಳ್ಳಿಗಳನ್ನು ಸೇರ್ಪಡೆಗೊಳಿಸಿ ಕುರುಗೋಡು ತಾಲೂಕನ್ನಾಗಿ ಮಾಡಲಾಯಿತು. ಆದರೆ, ಹೆಸರಿಗಷ್ಟೇ ತಾಲೂಕುಗಳು ಘೋಷಣೆಗೊಂಡವೇ ವಿನಾ, ತಾಲೂಕು ಕೇಂದ್ರಕ್ಕೆ ಬೇಕಾದ ಕಚೇರಿಗಳನ್ನು ಪೂರ್ಣಪ್ರಮಾಣದಲ್ಲಿ ವರ್ಗಾಯಿಸಲೇ ಇಲ್ಲ. ತಾಲೂಕು ಆಡಳಿತ ಭವನ ನಿರ್ಮಿಸುವ ಕಾಳಜಿಯೂ ಆಗಲಿಲ್ಲ. ಹೀಗಾಗಿ ತಾಲೂಕು ಕೇಂದ್ರ ಕಚೇರಿಗಳು ಯಾತ್ರಿ ನಿವಾಸ ಹಾಗೂ ಎಪಿಎಂಸಿ ಕಟ್ಟಡಗಳಲ್ಲಿ ಕೆಲಸ ನಿರ್ವಹಿಸುವಂತಾಗಿದೆ.

ಜಗದೀಶ್‌ ಶೆಟ್ಟರ್, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹೀಗೆ ಸಿಎಂಗಳು ಸರದಿಯಂತೆ ಬದಲಾವಣೆಗೊಂಡರೂ ತಾಲೂಕು ಕೇಂದ್ರಗಳ ಸ್ಥಿತಿಗತಿ ಮಾತ್ರ ಬದಲಾಗಲಿಲ್ಲ.

ಕೊಟ್ಟೂರು ಪೂರ್ಣ ನಿರ್ಲಕ್ಷ್ಯ:

ಅಖಂಡ ಜಿಲ್ಲೆಯ ಮೂರು ತಾಲೂಕುಗಳ ಪೈಕಿ ಕುರುಗೋಡು ಹಾಗೂ ಕಂಪ್ಲಿ ತಾಲೂಕು ಕೇಂದ್ರಗಳಲ್ಲಿ ಒಂದಷ್ಟು ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಕೊಟ್ಟೂರು ತಾಲೂಕು ಕೇಂದ್ರದಲ್ಲಿ ತಾಲೂಕು ಪಂಚಾಯಿತಿ, ತಹಸೀಲ್ದಾರ್ ಕಚೇರಿ ಹೊರತುಪಡಿಸಿದರೆ, ಉಳಿದ ಯಾವುದೇ ಕಚೇರಿಗಳು ಕಾರ್ಯಾರಂಭ ಮಾಡಿಲ್ಲ. ಹೀಗಾಗಿ ಎಂದಿನಂತೆ ಈ ತಾಲೂಕಿನ ಜನರು ಕಚೇರಿ ಕಾರ್ಯಗಳಿಗೆ ದೂರದ ಕೂಡ್ಲಿಗಿಗೆ ತೆರಳುವಂತಾಗಿದೆ. ಕುರುಗೋಡು ಹಾಗೂ ಕಂಪ್ಲಿ ತಾಲೂಕು ಆಡಳಿತ ಭವನಗಳ ಕಾಮಗಾರಿ ಮುಗಿಯುವ ಹಂತದಲ್ಲಿವೆ. ಆದರೆ, ಕೊಟ್ಟೂರಿನಲ್ಲಿ ತಾಲೂಕು ಆಡಳಿತ ಭವನಕ್ಕೆ ಶಿಲಾನ್ಯಾಸ ಸಹ ನಡೆದಿಲ್ಲ.

ಇತ್ತ ಬಾರದ ಕಚೇರಿಗಳು:

* ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ

* ಲೋಕೋಪಯೋಗಿ ಇಲಾಖೆ

* ನೀರಾವರಿ ಇಲಾಖೆ

* ಆರೋಗ್ಯ ಮತ್ತು ಕುಟುಂಬ ಕಲ್ಯಾಣ

* ಪಂಚಾಯತ್ ರಾಜ್ ಇಂಜಿನಿಯರಿಂಗ್

* ಜೆಸ್ಕಾಂ

* ಸಮಾಜ ಕಲ್ಯಾಣ ಇಲಾಖೆ

* ಬಿಸಿಎಂ ಇಲಾಖೆ

* ಕುಡಿವನೀರು ಸರಬರಾಜು

* ಪ್ರಾದೇಶಿಕ ಅರಣ್ಯ ಇಲಾಖೆ

* ಪಶು ಸಂಗೋಪನಾ ಇಲಾಖೆ

* ತೋಟಗಾರಿಕೆ ಇಲಾಖೆ

* ಕೃಷಿ ಇಲಾಖೆ

* ಮೀನುಗಾರಿಕೆ

* ಕಾರ್ಮಿಕ ಇಲಾಖೆ