ಕನ್ನಡಪ್ರಭ ವಾರ್ತೆ ತುರುವೇಕೆರೆ
ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಕನ್ನಡ ಸಾಹಿತ್ಯ ಪರಿಷತ್ ನ ತಾಲೂಕು ಸಮ್ಮೇಳನವನ್ನು ಶೀಘ್ರದಲ್ಲೇ ಮಾಡಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಸಿದ್ಧಲಿಂಗಪ್ಪ ತಾಲೂಕು ಅಧ್ಯಕ್ಷರಿಗೆ ಸೂಚಿಸಿದರು. ಪಟ್ಟಣದ ಕನ್ನಡಭವನದಲ್ಲಿ ಜರುಗಿದ ಕಸಾಪ ಅಜೀವ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಾಹಿತ್ಯ ಸಮ್ಮೇಳನಗಳು ನಡೆದಿವೆ. ತುರುವೇಕೆರೆಯಲ್ಲೂ ಸಮ್ಮೇಳನ ನಡೆಸಲು ಕಳೆದೊಂದು ವರ್ಷದಿಂದ ಪ್ರಯತ್ನಗಳು ನಡೆದಿದೆ. ಆದರೆ ಆಗಿಲ್ಲ. ಈಗ ಸಮ್ಮೇಳನ ನಡೆಸಲು ಸಕಾಲ. ಒಂದೇ ದಿನ ಸರಳವಾಗಿ ಸಮ್ಮೇಳನ ನಡೆಸಲು ಸಾಹಿತ್ಯ ಪರಿಷತ್ ತಾಲೂಕು ಘಟಕ ರೂಪರೇಷೆ ಸಿದ್ಧಪಡಿಸಿ ಕಾರ್ಯಪ್ರವೃತ್ತವಾಗಬೇಕು ಎಂದು ಸಲಹೆ ನೀಡಿದರು. ಕಸಾಪ ತಾಲೂಕು ಅಧ್ಯಕ್ಷ ಡಿ.ಪಿ.ರಾಜು ಮಾತನಾಡಿ ಆರಂಭಿಕ ಹಂತದಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿಭಾ ಪುರಸ್ಕಾರ, ಮನೆಮನೆ ಸಾಹಿತ್ಯ ಗೋಷ್ಠಿಗಳು, ಕನ್ನಡ ಕವಿಗಳ ಜಯಂತಿ ಆಚರಣೆ ಮೊದಲಾದ ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಆ ನಂತರ ಕೆಲ ಕಾರಣಗಳಿಂದ ಚಟುವಟಿಕೆಗಳು ಸ್ವಲ್ಪ ಹಿನ್ನಡೆ ಕಂಡಿರುವುದು ನಿಜ. ಆದರೆ ಮುಂಬರುವ ಸಾಹಿತ್ಯ ಸಮ್ಮೇಳನವನ್ನು ಶಾಸಕ ಎಂ.ಟಿ.ಕೃಷ್ಣಪ್ಪನವರ ಮಾರ್ಗದರ್ಶನದಲ್ಲಿ ಆಗಸ್ಟ್ ನಲ್ಲಿ ಸಮ್ಮೇಳನ ನಡೆಸುವೆ ಎಂದು ಭರವಸೆ ನೀಡಿದರು. ಲೇಖಕ ತುರುವೇಕೆರೆ ಪ್ರಸಾದ್ ಮಾತನಾಡಿ, ಸಾಹಿತ್ಯ ಕಾರ್ಯಕ್ರಮಗಳು ಜನರ ಮಧ್ಯೆ ಕಾರ್ಯಕ್ರಮಗಳು ನಡೆಯುವಂತಾಗಬೇಕು. ಸಂತೆಯಲ್ಲಿ ಕನ್ನಡ ಸಾಹಿತ್ಯ, ಬೀದಿಗಳಲ್ಲಿ ಪುಸ್ತಕ ಜಾಥಾ, ಮುಂತಾದ ಕಾರ್ಯಕ್ರಮಗಳ ಮೂಲಕ ಜನರನ್ನು ಕನ್ನಡ ಭವನಕ್ಕೆ ಕರೆತರಬೇಕು. ತಾಲೂಕಿನಲ್ಲಿ ಕನಿಷ್ಠ ೧೨ ದತ್ತಿಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು. ಸಾಹಿತಿ ಪ್ರೊ.ಕೆ. ಪುಟ್ಟರಂಗಪ್ಪ, ಕಸಾಪ ಮಾಜಿ ಅಧ್ಯಕ್ಷ ಸಾ.ಶಿ.ದೇವರಾಜು ಮೊದಲಾದವರು ಕನ್ನಡ ಭವನ ನಿರ್ವಹಣೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡಕ್ಕೆ, ಸಾಹಿತ್ಯಕ್ಕೆ ಸಂಬಂಧಿಸದ ಚಟುವಟಿಕೆಗಳು ಕನ್ನಡ ಭವನದಲ್ಲಿ ನಡೆಯುತ್ತಿವೆ. ಇದನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು. ಅಧ್ಯಕ್ಷ ಡಿ.ಪಿ.ರಾಜು ಸ್ಪಷ್ಟೀಕರಣ ನೀಡಿ ಹಲವರು ಕನ್ನಡ ಭವನವನ್ನು ಪಡೆದ ಉದ್ದೇಶಕ್ಕೆ ಬಳಸದೆ ಮರೆಮಾಚಿ ಅನ್ಯ ಉದ್ದೇಶಗಳಿಗೆ ಬಳಿಸಿದ್ದಾರೆಂಬುದು ನನ್ನ ಗಮನಕ್ಕೆ ಬಂದಿದೆ. ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲಾಧ್ಯಕ್ಷ ಸಿದ್ಧಲಿಂಗಪ್ಪ ಕನ್ನಡ ಭವನ ನಿರ್ವಹಣೆಗೇ ಒಂದು ಉಪಸಮಿತಿ ರಚಿಸಿ ಗ್ರಂಥಾಲಯವನ್ನು ನಿಗದಿತ ಅವಧಿಯಲ್ಲಿ ಸಾರ್ವಜನಿಕ ಉಪಯೋಗಕ್ಕೆ ತೆರೆದಿಡುವ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದರು.ಸಭೆಯಲ್ಲಿ ಬಿಇಓ ಸೋಮಶೇಖರ್, ಎಂ.ಆರ್. ಪರಮೇಶ್ವರ ಸ್ವಾಮಿ ಮಾತನಾಡಿದರು. ತಾಲೂಕು ಕಸಾಪ ಗೌರವಾಧ್ಯಕ್ಷ ಟಿ.ಎಸ್.ಬೋರೇಗೌಡ, ಜಿಲ್ಲಾ ಕಾರ್ಯದರ್ಶಿ ಕಂಟಲಗೆರೆ ಸಣ್ಣಹೊನ್ನಯ್ಯ, ತುಮಕೂರು ತಾಲೂಕು ಕಸಾಪ ಅಧ್ಯಕ್ಷ ಶಿವಕುಮಾರ್, ದಿನೇಶ್, ಎನ್.ಆರ್. ಜಯರಾಮ್, ಕುವೆಂಪು ಗ್ರಾಮೀಣಾಭಿವೃದ್ಧಿ ವೇದಿಕೆ ಅಧ್ಯಕ್ಷ ವೆಂಕಟೇಶ್, ಕೆಂಪರಾಜು, ಆರ್.ಸತ್ಯನಾರಾಯಣ್, ಸಾಹಿತಿ ಮಂಜೇಗೌಡ, ಸತೀಶ್, ರೂಪಶ್ರೀ, ಬಸವರಾಜು, ವಿಶ್ವಾರಾಧ್ಯ ಮೊದಲಾದವರಿದ್ದರು. ಎಸ್.ಯೋಗಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಲಜಾಕ್ಷಿ ವರದಿ ಮಂಡಿಸಿದರು. ಸಿ.ಪಿ.ಪ್ರಕಾಶ್ ಸ್ವಾಗತಿಸಿದರು. ಮಾಯಸಂದ್ರ ಹೋಬಳಿ ಕಸಾಪ ಅಧ್ಯಕ್ಷ ಮುನಿರಾಜು ವಂದಿಸಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನ ಮಾಡಿ
ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಕನ್ನಡ ಸಾಹಿತ್ಯ ಪರಿಷತ್ ನ ತಾಲೂಕು ಸಮ್ಮೇಳನವನ್ನು ಶೀಘ್ರದಲ್ಲೇ ಮಾಡಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಸಿದ್ಧಲಿಂಗಪ್ಪ ತಾಲೂಕು ಅಧ್ಯಕ್ಷರಿಗೆ ಸೂಚಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.