ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು ಪಟ್ಟಣದಲ್ಲಿ ರಾಗಿ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ರೈತ ಸಂಘದ ಸದಸ್ಯರು ಪ್ರತಿಭಟಿಸಿದರು.ಪಟ್ಟಣದ ತಾಲೂಕು ಕಚೇರಿ ಆವರಣದ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದ ರೈತ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಹುಣಸೂರು ಉಪವಿಭಾಗ ವ್ಯಾಪ್ತಿಯಲ್ಲಿ ಪ್ರಮುಖ ಬೆಳೆ ತಂಬಾಕಿನ ನಂತರ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಬೆಳೆಯೆಂದರೆ ಅದು ರಾಗಿಯಾಗಿದ್ದು, ಸರ್ಕಾರ ರಾಗಿಗೆ ಬೆಂಬಲ ಬೆಲ ಘೋಷಿಸಿರುವ ಹಿನ್ನೆಲೆ ರೈತರು ಹೆಚ್ಚು ಆಸಕ್ತಿಯಿಂದ ರಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಸ್ಥಾಪನೆಯಲ್ಲೇ ಸರ್ಕಾರಗಳು ನಿರ್ಲಕ್ಷ್ಯತನ ತೋರುತ್ತಿರುವುದು ಖಂಡನೀಯ. ಜಿಲ್ಲಾಡಳಿತಕ್ಕೆ ಈ ಕುರಿತು ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಪ್ರಯೋಜನಕ್ಕೆ ಬಂದಿಲ್ಲ. ರೈತರು ರಾಗಿ ಬೆಳೆದು ದಲ್ಲಾಳಿಗಳ ಹೊಟ್ಟೆ ತುಂಬಿಸುವಂತಾಗಿದೆ. ದಲ್ಲಾಳಿಗಳು ಪರಿಸ್ಥಿತಿಯ ಪ್ರಯೋಜನ ಪಡೆದುಕೊಂಡು ಕನಿಷ್ಟ ದರಕ್ಕೆ ಖರೀದಿಸುವ ಮೂಲಕ ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ದೂರಿದರು.ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳದ ಸರ್ಕಾರಗಳು ಬೆಂಬಲ ಬೆಲೆ ಎನ್ನುವ ಕನಸನ್ನು ರೈತರಲ್ಲಿ ಬಿತ್ತಿ ಅದರಲ್ಲೂ ಮೋಸ ಮಾಡುತ್ತಿರುವುದು ಖಂಡನೀಯ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕೂಡಲೇ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ರಾಗಿ ಖರೀದಿಸುವ ಮೂಲಕ ರೈರನ್ನು ರಕ್ಷಿಸಬೇಕೆಂದು ಒತ್ತಾಯಿಸಿದರು.ಬೆಳಗಿನಿಂದ ಪ್ರತಿಟನೆ ನಡೆಸುತ್ತಿದ್ದರೂ ಉಪವಿಭಾಗಾಧಿಕಾರಿ ಸೇರಿದಂತೆ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದು ನಮ್ಮ ಅಹವಾಲು ಸ್ವೀಕರಿಸುತ್ತಿಲ್ಲವೆಂದು ಆರೋಪಿಸಿ ರೈತಮುಖಂಡರು ಮಧ್ಯಾಹ್ನದ ವೇಳೆಗೆ ಹೆದ್ದಾರಿ ರಸ್ತೆ ತಡೆ ನಡೆಸಿದರು.ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ರೈತರ ಮನವೊಲಿಕೆಗೆ ಮುಂದಾದರೂ ಪ್ರಯೋಜನವಾಗಲಿಲ್ಲ. ಪೊಲೀಸರು ರೈತ ಮುಖಂಡರನ್ನು ವಾಹನದಲ್ಲಿ ಠಾಣೆಗ ಕರೆದೊಯ್ದರು. ಈ ವೇಳೆಗೆ ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ಎಚ್.ಬಿ. ವಿಜಯಕುಮಾರ್, ತುರ್ತು ಕಾರ್ಯವಿದ್ದುದರಿಂದ ಬರಲು ವಿಳಂಬವಾಯಿತು. ಖರೀದಿ ಕೇಂದ್ರ ಸ್ಥಾಪನೆಗೆ ಕ್ರಮವಹಿಸಲಾಗಿದ್ದು, ಇಂದಿನಿಂದಲೇ (ಶನಿವಾರ) ಕಾರ್ಯಾರಂಭ ಮಾಡಲಿದೆ ಎಂದು ಭರವಸೆ ನೀಡಿದರು. ನಂತರ ರೈತ ಮುಖಂಡರನ್ನು ಬಿಡುಗಡೆ ಗೊಳಿಸಲಾಯಿತು. ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ರಾಮೇಗೌಡ, ಎಚ್.ಡಿ. ಕೋಟೆ ತಾಲೂಕು ಅಧ್ಯಕ್ಷ ಮಹದೇವ ನಾಯಕ, ಕೆ.ಆರ್. ನಗರ ತಾಲೂಕು ಅಧ್ಯಕ್ಷ ಎಂ.ಜಿ. ಮಲ್ಲೇಶ್, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾ ಉಪಾಧ್ಯಕ್ಷ ಅಲಿಜಾನ್, ಖಜಾಂಚಿ ಈಶ್ವರ್, ತಾಲೂಕು ಯುವ ಘಟಕದ ಪ್ರಧಾನ ಕಾರ್ಯದರ್ಶಿ ರವಿ ನಾರಾಯಣ್, ಗ್ರಾಮ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ರೈತರು ಭಾಗವಹಿಸಿದ್ದರು.