ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ಆ ಸ್ಥಾನದಲ್ಲಿ ಮುಂದುವರೆಯುತ್ತಿದ್ದು, ಎರಡು ದಿನಗಳ ಹಿಂದೆ ಅವರು ರಚಿಸಿಕೊಂಡಿರುವ ಸಮಿತಿ ಅಸಿಂಧು ಎಂದು ಸಂಘದ ಹಿರಿಯ ಉಪಾಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಆರೋಪಿಸಿದರು. ಕಳೆದ 18 ವರ್ಷಗಳಿಂದ ಆಡಳಿತ ಮಂಡಳಿ ಚುನಾವಣೆ ನಡೆಸದೆ ತಮಗಿಷ್ಟ ಬಂದಂತೆ ಅಧಿಕಾರ ಚಲಾಯಿಸಿಕೊಂಡು ಬೇಕಾದವರನ್ನು ಆಡಳಿತ ಮಂಡಳಿಗೆ ನೇಮಕ ಮಾಡಿಕೊಂಡು ಜಾತಿ ವಿರೋಧಿ ನೀತಿ ಅನುಸರಿಸುತ್ತಿದ್ದು, ಕೂಡಲೇ ಒಕ್ಕಲಿಗ ಸಮಾಜದ ಪ್ರಮುಖರ ಸಭೆ ಕರೆದು ನೂತನ ಆಡಳಿತ ಮಂಡಳಿ ರಚಿಸಲು ಮುಂದಾಗಬೇಕು ಎಂದು ಪಟ್ಟಣದ ಎಚ್.ಡಿ. ದೇವೇಗೌಡ ಸಮುದಾಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು. ಸಂಘದ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಚಿವ ದಿ.ಎಸ್. ನಂಜಪ್ಪ ಅವರು ಮತ್ತು ಪಟ್ಟಣದಲ್ಲಿ ಒಕ್ಕಲಿಗ ಸಮಾಜದ ಬೃಹತ್ ಸಮುದಾಯ ಭವನ ನಿರ್ಮಾಣವಾಗಲು ಕಾರಣರಾಗಿರುವ ಮಾಜಿ ಸಚಿವ ಸಾ.ರಾ. ಮಹೇಶ್ ಅವರಿಗೆ ಗೌರವ ನೀಡದೆ ದುರ್ನಡತೆ ತೋರುತ್ತಿರುವ ಎಂ.ಟಿ. ಅಣ್ಣೇಗೌಡ ವಿಶ್ವಾಸಕ್ಕೆ ಅರ್ಹರಲ್ಲ ಎಂದು ಜರಿದರು. ಸಂಘದ ಅಧ್ಯಕ್ಷರಾಗಿ ನಿಯಮ ಬಾಹಿರವಾಗಿ ಮುಂದುವರೆದಿರುವ ಅವರು ತಮ್ಮನ್ನು ವಿರೋಧ ಮಾಡುವವರನ್ನು ಯಾವುದೇ ಸಭೆಗಳಿಗೆ ಕರೆಯುವುದಿಲ್ಲ, ಆದರೆ ಸಮಾಜದ ಹಿತದೃಷ್ಟಿಯಿಂದ ನಾವು ಎಲ್ಲ ವಿಚಾರಗಳನ್ನು ನುಂಗಿಕೊಂಡು ಬಂದಿದ್ದು, ಮುಂದೆ ಒಕ್ಕಲಿಗರ ಹಿತ ದೃಷ್ಟಿಯಿಂದ ಇದನ್ನು ಸಹಿಸಲು ಸಾಧ್ಯವಿಲ್ಲ, ಹಾಗಾಗಿ ಕೂಡಲೇ ಸಾ.ರಾ. ಮಹೇಶ್ ಮತ್ತು ಕೆ.ಎನ್. ಬಸಂತ್ ಅವರ ಸಮ್ಮುಖದಲ್ಲಿ ಸಭೆ ಕರೆಯಬೇಕೆಂದು ಆಗ್ರಹಿಸಿದರು. ಅಕ್ರಮವಾಗಿ ನೇಮಕ ಮಾಡಿಕೊಂಡಿರುವವರನ್ನು ಸೇರಿಸಿಕೊಂಡು ಸಮುದಾಯ ಭವನದಲ್ಲಿ ಸಭೆ ನಡೆಸಿದರೆ ಮುತ್ತಿಗೆ ಹಾಕುವುದಾಗಿ ತಿಳಿಸಿದ ಅವರು, ಹತ್ತು ದಿನಗಳ ಒಳಗೆ ಸಾ.ರಾ. ಮಹೇಶ್ ಮತ್ತು ಕೆ.ಎನ್. ಬಸಂತ್ ಅವರ ಸಮ್ಮುಖದಲ್ಲಿ ಸಮುದಾಯದ ಸಭೆ ಕರೆಯದಿದ್ದರೆ ನಾವೇ ಮುಂದಾಗಿ ಒಕ್ಕಲಿಗ ಮುಖಂಡರ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಪ್ರಕಟಿಸಿದರು. ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್ ಮಾತನಾಡಿ, ಎಂ.ಟಿ. ಅಣ್ಣೇಗೌಡ ತಮ್ಮ ಅನುಕೂಲಕ್ಕೆ ಬೇಕಾದ ಪದಾಧಿಕಾರಿಗಳನ್ನು ನಿಯಮಾನುಸಾರ ನೇಮಕ ಮಾಡಿಕೊಳ್ಳಲಿ, ಆದರೆ ಸಮಾಜದ ಆಸ್ತಿ ಉಳಿಸುವ ಕೆಲಸ ಮಾಡುವುದರ ಜತೆಗೆ ಭವನವನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕೆಂದು ತಿಳಿಸಿದರು. ಜಿಪಂ ಮಾಜಿ ಸದಸ್ಯ ಎಂ.ಟಿ. ಕುಮಾರ್ ಮಾತನಾಡಿ, ಒಕ್ಕಲಿಗ ಸಮಾಜದ ಆಸ್ತಿ ಉಳಿಸಿ ಅವರ ಏಳಿಗೆಗೆ ಕೆಲಸ ಮಾಡಿ ಎಂದು ನಿಮ್ಮನ್ನು ಆಯ್ಕೆ ಮಾಡಿದರೆ ದಶಕಗಳಿಂದ ಅಧಿಕಾರಕ್ಕೆ ಅಂಟಿಕೊಂಡು ಸಂಘದ ಸಭೆಯನ್ನು ಇಲ್ಲಿ ಮಾಡದೆ ಮೈಸೂರಿನಲ್ಲಿ ನಿಮಗಿಷ್ಟ ಬಂದವರನ್ನು ಸೇರಿಸಿಕೊಂಡು ಸಭೆ ನಡೆಸಿ ಅಕ್ರಮವಾಗಿ ಸಮಿತಿ ರಚಿಸಿಕೊಳ್ಳುವುದು ಸರಿಯೇ ಎಂದು ಪ್ರಶ್ನಿಸಿದರು. ಪುರಸಭೆ ಸದಸ್ಯರಾದ ಕೆ.ಎಲ್. ಜಗದೀಶ್, ಸಂತೋಷ ಗೌಡ, ತಾಲೂಕು ಯುವ ಜೆಡಿಎಸ್ ಅದ್ಯಕ್ಷ ಡಿ.ವಿ. ಗುಡಿ ಯೋಗೇಶ್, ಮಾಜಿ ಅಧ್ಯಕ್ಷ ಎಚ್.ಕೆ. ಸುಜಯ್, ವಕ್ತಾರ ಕೆ.ಎಲ್. ರಮೇಶ್, ವಕೀಲ ಎ. ತಿಮ್ಮಪ್ಪ, ಒಕ್ಕಲಿಗ ಸಮಾಜದ ಮುಖಂಡರಾದ ಅನಿಲ್ ಗೌಡ, ವಿ.ಸಿ. ಶಿವರಾಮು, ಬಿ. ರಮೇಶ್, ಬಿ.ಈ. ರವಿಕುಮಾರ್, ಅನೀಫ್ ಗೌಡ, ಶಂಭು, ರಾಧಾಕೃಷ್ಣ, ರಾಜು, ವಡ್ಡರವಿ, ಎ.ಪಿ. ದರ್ಶನ್, ಅನಿಲ್, ಹರೀಶ್ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))