ಕಲಾದಗಿ ಗೋವಿಂದಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಥಿಲಾವಸ್ಥೆಯಾಗಿರುವ ಅಕ್ಷರ ದಾಸೋಹದ ಕೋಣೆಯನ್ನು ಪರಿಶೀಲಿಸುತ್ತಿರುವ ಬಾಗಲಕೋಟೆ ತಾಪಂ ಸಿಇಒ ಸುಭಾಷ ಸಂಪಗಾವಿ.
ಕನ್ನಡಪ್ರಭ ವಾರ್ತೆ ಕಲಾದಗಿ
ಸಮೀಪದ ಗೋವಿಂದಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮುಕ ಶಾಲೆಯ ಬಿಸಿ ಊಟ ತಯಾರಿಸುವ ಕೋಣೆ, ಆಹಾರ ದಾಸ್ತಾನು ಇಡುವ ಕೋಣೆ ಹಾಗೂ ಶಾಲಾ ಕೋಣೆ ಶಿಥಿಲಾವಸ್ಥೆಯಲ್ಲಿರುವ ಹಿನ್ನೆಲೆ ಮಂಗಳವಾರ ಶಾಲೆಗೆ ಭೇಟಿ ನೀಡಿದ ಬಾಗಲಕೊಟೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ ಕೋಣೆಗಳನ್ನು ಪರಿಶೀಲಿಸಿದರು.ಅಪಾಯ ಸ್ಥಿತಿಯಲ್ಲಿರುವ ಅಡುಗೆ ಕೋಣೆ ಹಾಗೂ ಪಡಿತರ ಇಡುವ ಕೋಣೆಗೆಳೆರೆಡು ಅನೇಕ ವರ್ಷಗಳಿಂದ ಬಹಳ ಹಾಳಾದ ದುಃಸ್ಥಿತಿಯಲ್ಲಿದ್ದು, ಇವುಗಳನ್ನು ದುರಸ್ತಿ ಮಾಡಲು ಮನವಿ ಮಾಡಿದರು. ನಿರ್ಲಕ್ಷ್ಯಮಾಡುತ್ತಿರುವ ಸಂಬಂಧಿಸಿದ ಇಲಾಖೆಗಳ ವಿರುದ್ಧ ಡಿ.1ರಂದು ಶಾಲೆಗೆ ಬೀಗ ಹಾಕುವ ಪತ್ರ ಬರೆದ ಹಿನ್ನೆಲೆಯಲ್ಲಿ ಅಕ್ಷರ ದಾಸೋಹದ ತಾಲೂಕು ಅಧಿಕಾರಿ ನಾಗರಾಜ ದೇಶಪಾಂಡೆ ಅವರೊಂದಿಗೆ ಶಾಲೆಗೆ ಆಗಮಿಸಿ ಕೋಣೆಗಳ ದುಃಸ್ತಿತಿ ಪರಿಶೀಲಿಸಿದರು.
ಪಿಡಿಒಗೆ ತಾಕೀತು:ಅಡುಗೆ ಕೋಣೆ ದುರಸ್ತಿಗೆ ಗ್ರಾಪಂನಿಂದ ₹6.50 ಲಕ್ಷ ಮಂಜೂರಾಗಿದ್ದು, ಕೂಡಲೇ ಕ್ರಿಯಾಯೋಜನೆಯಲ್ಲಿರುವಂತೆ ಟೆಂಡರ್ ಕರೆದು ಬೇಗ ಕಟ್ಟಡ ನಿರ್ಮಾಣವಾಗುಂತೆ ನೋಡಿಕೊಳ್ಳಬೇಕೆಂದು ಸ್ಥಳದಲ್ಲಿದ್ದ ಹಿರೇಶೆಲ್ಲಿಕೇರಿ ಗ್ರಾಪಂನ ಪಿಡಿಒ ಸಿದ್ದಾರ್ಥ ಗೋಠೆ ಅವರಿಗೆ ಸಿಸಿಒ ಸಂಪಗಾವಿ ಖಡಕ್ ಸೂಚನೆ ನೀಡಿದರು.ಈ ವೇಳೆ ಶಾಲೆಯ ಮುಖ್ಯ ಗುರುಗಳಾದ ಆರ್,ಎಸ್. ಪಾಟೀಲ ಹಾಗೂ ಗ್ರಾಮದ ಹಿರಿಯರು ಇದ್ದರು.
ಇದಕ್ಕೂ ಮೊದಲು ತಾಪಂ ಸಿಇಓ ಅವರು ಅಕ್ಷರ ದಾಸೋಹದ ತಾಲೂಕು ಅಧಿಕಾರಿ ನಾಗರಾಜ ದೇಶಪಾಂಡೆ ಅವರೊಂದಿಗೆ ಸಮೀಪದ ದೇವನಾಳದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಕ್ಷೀರಭಾಗ್ಯ ಯೋಜನೆಯ ಅನುಷ್ಠಾನ ಗಮನಿಸಿದರು. ಮಕ್ಕಳೊಂದಿಗೆ ಯೋಜನೆಯ ಬಿಸಿ ಬಿಸಿಯಾಧ ಹಾಲು ಸೇವಿಸಿದರು.