ಜಿಲ್ಲೆಯ ಗ್ರಾಮೀಣ ರಾಜಕೀಯದಲ್ಲಿ ಹೊಸ ಸಂಚಲನ ಆರಂಭವಾಗಿದೆ. ಜನವರಿ ಮೊದಲ ವಾರದಲ್ಲಿ ಜಿಪಂ, ತಾಪಂ ಚುನಾವಣೆ ನಡೆಸುವ ಉದ್ದೇಶವನ್ನು ಸರ್ಕಾರ ವ್ಯಕ್ತಪಡಿಸಿರುವ ಹಿನ್ನೆಲೆ ಗ್ರಾಮೀಣ ರಾಜಕೀಯ ಚಟುವಟಿಕೆ ಮತ್ತಷ್ಟು ಚುರುಕುಗೊಂಡಿದೆ.

ಮೀಸಲಾತಿ ಬಳಿಕ ಟಿಕೆಟ್‌ಗೆ ಹೆಚ್ಚಿದ ಬೇಡಿಕೆ, 87 ಕ್ಷೇತ್ರಗಳಿಗೆ ಕೈ, ಕಮಲದಲ್ಲಿ ಪೈಪೋಟಿ ಹೊಸಬರಿಗೆ ಅವಕಾಶ

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗ

ಜಿಲ್ಲೆಯ ಗ್ರಾಮೀಣ ರಾಜಕೀಯದಲ್ಲಿ ಹೊಸ ಸಂಚಲನ ಆರಂಭವಾಗಿದೆ. ಜನವರಿ ಮೊದಲ ವಾರದಲ್ಲಿ ಜಿಪಂ, ತಾಪಂ ಚುನಾವಣೆ ನಡೆಸುವ ಉದ್ದೇಶವನ್ನು ಸರ್ಕಾರ ವ್ಯಕ್ತಪಡಿಸಿರುವ ಹಿನ್ನೆಲೆ ಗ್ರಾಮೀಣ ರಾಜಕೀಯ ಚಟುವಟಿಕೆ ಮತ್ತಷ್ಟು ಚುರುಕುಗೊಂಡಿದೆ. ಜಿಲ್ಲೆಯ 7 ತಾಲೂಕು ವ್ಯಾಪ್ತಿಯಲ್ಲಿ 87 ತಾಪಂ ಕ್ಷೇತ್ರಗಳಿಗೆ, ನರಗುಂದ 9, ಲಕ್ಷ್ಮೇಶ್ವರ 9, ಶಿರಹಟ್ಟಿ 9, ಗಜೇಂದ್ರಗಡ 9, ಮುಂಡರಗಿ 11, ರೋಣ 12 ಹಾಗೂ ಗದಗ ತಾಲೂಕಿನಲ್ಲಿ 18 ಕ್ಷೇತ್ರಗಳಿವೆ. ಒಟ್ಟು 87 ಸ್ಥಾನಗಳ ಪೈಕಿ 41 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಪ್ರವರ್ಗವಾರು ನೋಡಿದರೆ ಎಸ್‌ಸಿಗೆ 14, ಎಸ್‌ಟಿಗೆ 7, ಹಿಂದುಳಿದ ವರ್ಗ ಅ ಗೆ 13, ಹಿಂದುಳಿದ ವರ್ಗ ಬಗೆ 2 ಹಾಗೂ ಸಾಮಾನ್ಯ ವರ್ಗಕ್ಕೆ 51 ಸ್ಥಾನ ನಿಗದಿಯಾಗಿದೆ.

7.84 ಲಕ್ಷ ಮತದಾರರು:

ಸೆ.5 ರ ಸ್ಥಿತಿಗನುಸಾರ ಜಿಲ್ಲೆಯಲ್ಲಿ ಒಟ್ಟು 784325 ಮತದಾರರು ಇದ್ದು, 393459 ಪುರುಷರು, 390818 ಮಹಿಳೆಯರು ಹಾಗೂ 48 ತೃತೀಯಲಿಂಗಿ ಮತದಾರರಿದ್ದಾರೆ. ಆದರೆ ಅ. 27 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿರುವುದರಿಂದ ಚುನಾವಣಾ ವೇಳೆಗೆ ಈ ಸಂಖ್ಯೆ ಬದಲಾಗುವ ಸಾಧ್ಯತೆಯಿದೆ. ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದ ಪಾಲು ಸುಮಾರು ಶೇ.64. 337 ಗ್ರಾಮಗಳು ಮತ್ತು 122 ಗ್ರಾಪಂಗಳ ವ್ಯಾಪ್ತಿಯನ್ನು ಹೊಂದಿದ್ದು ತಾಪಂ ಚುನಾವಣೆಯೇ ಜಿಲ್ಲೆಯ ನಿಜವಾದ ರಾಜಕೀಯ ವೇದಿಕೆಯಾಗಲಿದೆ.

ಹತ್ತು ವರ್ಷಗಳ ಆಡಳಿತ ಶೂನ್ಯತೆ?:

ತಾಪಂ, ಜಿಪಂ ಚುನಾವಣೆ ನಡೆಯದೆ ದೀರ್ಘ ಅವಧಿ ಕಳೆದಿರುವುದು ಗ್ರಾಮೀಣ ಆಡಳಿತದಲ್ಲಿ ಪ್ರಮುಖ ಪ್ರಶ್ನೆ ಎಬ್ಬಿಸಿದ್ದು, ಇನ್ನಾದರೂ ಅಧಿಕಾರಿಗಳ ಆಡಳಿತಕ್ಕೆ ತೆರೆ ಬೀಳಲಿ, ಜನರಿಂದ ನೇರವಾಗಿ ಆಯ್ಕೆಯಾದ ತಾಪಂ ಸದಸ್ಯರ ಮೂಲಕ ಸ್ಥಳೀಯ ಆದ್ಯತೆ, ಸಮಸ್ಯೆಗಳ ಚರ್ಚೆ, ಕಾಮಗಾರಿಗಳ ಮೇಲ್ವಿಚಾರಣೆ ಹಾಗೂ ಜನರ ರಾಜಕೀಯ ಪ್ರತಿನಿಧಿತ್ವದ ವ್ಯವಸ್ಥೆ ಬಲಗೊಳ್ಳಬೇಕಿದೆ. ನೀರು ಸರಬರಾಜು, ಗ್ರಾಮೀಣ ರಸ್ತೆಗಳು, ಶಾಲಾ ಕಟ್ಟಡಗಳು, ಸ್ವಚ್ಛತೆ, ಚರಂಡಿ, ಸಣ್ಣ ನೀರಾವರಿ, ಅಂಗನವಾಡಿ, ಆರೋಗ್ಯ, ಉದ್ಯೋಗ ಖಾತ್ರಿ ಸೇರಿದಂತೆ ತಾಪಂ ವ್ಯಾಪ್ತಿಯ ಹಲವು ಅಭಿವೃದ್ಧಿ ಕಾರ್ಯಗಳಿಗೆ ತಾಪಂ ವ್ಯವಸ್ಥೆ ಮಹತ್ವದ ಪಾತ್ರ ವಹಿಸುತ್ತದೆ.

ಯುವ ಜನತೆಗೆ ಆದ್ಯತೆ:

ಈ ಚುನಾವಣೆ ಹಳೆಯ ಮುಖಗಳಿಗಿಂತ ಹೊಸ ಪೀಳಿಗೆಯ ನಾಯಕರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಯನ್ನೂ ಹೆಚ್ಚಿಸಿದೆ. ಮಹಿಳಾ ಮೀಸಲಾತಿಯ 41 ಸ್ಥಾನಗಳು ಗ್ರಾಮೀಣ ರಾಜಕೀಯದಲ್ಲಿ ಮಹಿಳೆಯರ ಹೊಸ ನಾಯಕತ್ವಕ್ಕೆ ವೇದಿಕೆ ಸೃಷ್ಟಿಸಿವೆ. ಯುವಕರು, ರೈತ ಮುಖಂಡರು, ಸಹಕಾರ ಕ್ಷೇತ್ರದವರು, ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸ್ಥಳೀಯವಾಗಿ ಜನಸಂಪರ್ಕ ಹೊಂದಿರುವ ಹೊಸ ಮುಖಗಳು ಪಕ್ಷಗಳ ಟಿಕೆಟ್‌ ಗಾಗಿ ಮುನ್ನೆಲೆಗೆ ಬರುತ್ತಿದ್ದಾರೆ. ಮತ್ತೊಂದೆಡೆ ದೀರ್ಘ ವಿರಾಮದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತ ಅಭ್ಯರ್ಥಿಗಳು ಲಭ್ಯವಾಗುತ್ತಿರುವುದು ಪಕ್ಷಗಳ ಸಂಘಟನೆಗೆ ಬಲವಾಗುವ ನಂಬಿಕೆಯನ್ನು ಹೊಂದಿವೆ.

ಲೆಕ್ಕಾಚಾರ ಬದಲು

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಬಿಜೆಪಿ ತಲಾ ಎರಡು ಕ್ಷೇತ್ರಗಳನ್ನು ಹೊಂದಿರುವ ಹಿನ್ನೆಲೆ ತಾಪಂ ಚುನಾವಣೆ ಎರಡೂ ಪಕ್ಷಗಳ ಗ್ರಾಮೀಣ ಸಂಘಟನಾ ಸಾಮರ್ಥ್ಯಕ್ಕೆ ಪರೀಕ್ಷೆಯಾಗಲಿದೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ರಾಜಕೀಯಕ್ಕಿಂತ ತಾಪಂ ಚುನಾವಣೆಯಲ್ಲಿ ಗ್ರಾಮ, ಹೋಬಳಿ, ಕುಟುಂಬ, ವೈಯಕ್ತಿಕ ಸಂಪರ್ಕ ಹಾಗೂ ಸ್ಥಳೀಯ ಅಭಿವೃದ್ಧಿ ವಿಚಾರಗಳು ಹೆಚ್ಚು ಪ್ರಭಾವ ಬೀರುವ ಸಾಧ್ಯತೆ ಇದೆ. ಮೀಸಲಾತಿಯಿಂದಾಗಿ ಹಲವು ಕ್ಷೇತ್ರಗಳಲ್ಲಿ ಹಳೆಯ ರಾಜಕೀಯ ಲೆಕ್ಕಾಚಾರವೇ ಬದಲಾಗಿದೆ.