ಸಾರಾಂಶ
ಪಟ್ಟಣದ ತಾಲೂಕು ಕ್ರೀಡಾಂಗಣವನ್ನು ಅಂದಾಜು 7 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಕೆ.ಎಂ. ಉದಯ್ ಮಂಗಳವಾರ ಹೇಳಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ತಾಲೂಕು ಕ್ರೀಡಾಂಗಣವನ್ನು ಅಂದಾಜು 7 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಕೆ.ಎಂ. ಉದಯ್ ಮಂಗಳವಾರ ಹೇಳಿದರು.ಪಟ್ಟಣದ ಕ್ರೀಡಾಂಗಣದ ಒಳಾಂಗಣ ನವೀಕರಣ ಮತ್ತು ಹೊರ ಆವರಣದ ಅಭಿವೃದ್ಧಿ ಕುರಿತಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ತಾಲೂಕು ಕ್ರೀಡಾಂಗಣದ ಒಳಾಂಗಣ ಮತ್ತು ಹೊರಾಂಗಣದ ಅವ್ಯವಸ್ಥೆ ಕುರಿತಂತೆ ಕ್ರೀಡಾಭಿಮಾನಿಗಳು ಈ ಹಿಂದೆ ನನ್ನ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಅಭಿವೃದ್ಧಿಗೆ ಅಗತ್ಯ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರೀಡಾಂಗಣದ ಅಭಿವೃದ್ಧಿಗಾಗಿ ಮೊದಲ ಹಂತದಲ್ಲಿ 7 ಕೋಟಿ ರು. ಅನುದಾನ ಮಂಜೂರು ಮಾಡಿದ್ದಾರೆ. ಅನುದಾನದಲ್ಲಿ ಪ್ರಥಮವಾಗಿ ಕ್ರೀಡಾಂಗಣದ ಒಳಾಂಗಣ ನವೀಕರಣದೊಂದಿಗೆ ಹೈಟೆಕ್ ಸ್ಪರ್ಶ ನೀಡಲಾಗುವುದು ಎಂದು ತಿಳಿಸಿದರು.ಆ ನಂತರ ತೆರೆದ ಕ್ರೀಡಾಂಗಣದ ಸುತ್ತ ಕಾಂಪೌಂಡ್ ನಿರ್ಮಾಣ ಹಾಗೂ ಪ್ರೇಕ್ಷಕರ ಗ್ಯಾಲರಿ ಮೇಲ್ಭಾಗದಲ್ಲಿ ಮಳೆ ಮತ್ತು ಬಿಸಿಲಿನ ರಕ್ಷಣೆ ಪಡೆಯಲು ಅನುಕೂಲವಾಗುವಂತೆ ಮಂಡ್ಯ ಕ್ರೀಡಾಂಗಣದ ಮಾದರಿಯಲ್ಲಿ ಮೇಲ್ಚಾವಣಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಕ್ರೀಡಾಂಗಣದ ಅಭಿವೃದ್ಧಿ ಕುರಿತಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಯೋಜನೆಯ ಅಂದಾಜು ವೆಚ್ಚದ ಪಟ್ಟಿ ಸಲ್ಲಿಸಿದ ನಂತರ ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಪ್ರಾರಂಭವಾಗಿ ಮುಂದಿನ ವರ್ಷದ ಜನವರಿ ಅಥವಾ ಫೆಬ್ರವರಿ ಕಾಮಗಾರಿ ಪೂರ್ಣಗೊಂಡು ಕ್ರೀಡಾಭಿಮಾನಿಗಳ ಕ್ರೀಡಾ ಚಟುವಟಿಕೆಗಳಿಗೆ ಕ್ರೀಡಾಂಗಣ ಲಭ್ಯವಾಗಲಿದೆ ಎಂದು ಭರವಸೆ ನೀಡಿದರು.ತರುವಾಯು ಕ್ರೀಡಾಂಗಣದ ಸಂಕೀರ್ಣದಲ್ಲಿರುವ ವ್ಯಾಯಾಮ ಶಾಲೆಗೆ ಭೇಟಿ ನೀಡಿದ ಶಾಸಕರು, ವ್ಯಾಯಾಮ ಉಪಕರಣಗಳು ಹಾಗೂ ಕಟ್ಟಡ ಪರಿಶೀಲನೆ ನಡೆಸಿದರು. ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದೇವಾನಂದ. ಎಇ ಗಳಾದ ರಮೇಶ್, ಹನುಮಂತು, ಪುರಸಭಾ ಸದಸ್ಯ ಸಚಿನ್ ಇದ್ದರು.ಪೇಟೆ ಬೀದಿ ರಸ್ತೆ ಶೀಘ್ರ ಅಭಿವೃದ್ಧಿ: ಶಾಸಕ ಉದಯ್ : ಮದ್ದೂರು: ಪಟ್ಟಣದ ಪೇಟೆ ಬೀದಿಯಲ್ಲಿ ಗುಂಡಿ ಬಿದ್ದಿರುವ ರಸ್ತೆಯನ್ನು ಶೀಘ್ರ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಉದಯ್ ಭರವಸೆ ನೀಡಿದರು.
ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಪೇಟೆ ಬೀದಿ ರಸ್ತೆ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿದೆ. ಈ ಬಗ್ಗೆ ಸಾರ್ವಜನಿಕರು ರಸ್ತೆ ದುರಸ್ತಿಗಾಗಿ ಮನವಿ ಸಲ್ಲಿಸಿದ್ದಾರೆ. ಮುಂದಿನ ಒಂದು ವಾರದಲ್ಲಿ ಮಳೆಯ ಪ್ರಮಾಣ ಕಡಿಮೆಯಾದ ನಂತರ ಕೊಲ್ಲಿ ಸರ್ಕಲ್ ನಿಂದ ಪ್ರವಾಸಿ ಮಂದಿರದ ವೃತ್ತದ ವರೆಗೆ ಗುಂಡಿ ಬಿದ್ದಿರುವ ರಸ್ತೆ ಯ ಗುಂಡಿ ಮುಚ್ಚುವ ಕಾಮಗಾರಿಯನ್ನು ಶೀಘ್ರವಾಗಿ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.