ಸಾರಾಂಶ
ಅಧಿಕಾರಿಗಳ ವಿರುದ್ಧ ದಲಿತ ಮುಖಂಡ ಅಶೋಕ ಬಂಢಾರಕರ, ನ್ಯಾಯವಾದಿ ತಮ್ಮಣ್ಣವರ ತಾಲೂಕು ಮಟ್ಟದ ಪ.ಜಾತಿ, ಪ.ವರ್ಗದ ಹಿತರಕ್ಷಣಾ ಹಾಗೂ ಸಂರಕ್ಷಣಾ ಸಭೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಹಳ್ಳಿಗಳಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗದ ಜನರಿಗಾಗಿ ಸ್ಮಶಾನ ಭೂಮಿ, ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ತಾಲೂಕಾಡಳಿತ ವಿಫಲವಾಗಿದೆ ಎಂದು ದಲಿತ ಮುಖಂಡ ಅಶೋಕ ಬಂಢಾರಕರ, ನ್ಯಾಯವಾದಿ ಸುದರ್ಶನ ತಮ್ಮಣ್ಣವರ ಅಕ್ರೋಶ ವ್ಯಕ್ತಪಡಿಸಿದರು.ಶುಕ್ರವಾರ ಪಟ್ಟಣದ ಐ.ಎಂ.ಎ ಸಭಾಗೃಹದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ.ಜಾತಿ, ಪ.ವರ್ಗದ ಹಿತರಕ್ಷಣಾ ಹಾಗೂ ಸಂರಕ್ಷಣಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಮಟ್ಟದ ಅಧಿಕಾರಿಗಳು ಮೂಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹೆರಿಗೆ ಮಾಡಿಸಲು ವಿಳಂಬ ತೋರುವುದಲ್ಲದೇ ತಮ್ಮ ಖಾಸಗಿ ಆಸ್ಪತ್ರೆಗೆ ಬರಲು ಹೇಳುತ್ತಾರೆ ಎಂದು ಆರೋಪಿಸಿದರು.
ತಹಸೀಲ್ದಾರ ಚಿದಂಬರ ಕುಲಕರ್ಣಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸ್ಮಶಾನ ಭೂಮಿ ಇಲ್ಲದೇ ಇದ್ದರೆ ಮುಖಂಡರು ನಮ್ಮ ಗಮನಕ್ಕೆ ತಂದರೆ, ಆಯಾ ಊರುಗಳಿಗೆ ಸ್ಮಶಾನ ಭೂಮಿ ಒದಗಿಸುವುದಲ್ಲದೇ ಸಮಾಜ ಕಲ್ಯಾಣ ಇಲಾಖೆಯಿಂದ ಅಭಿವೃದ್ಧಿಗಾಗಿ ಸರ್ಕಾರದ ಅನುದಾನ ದೊರೆಯಲಿದೆ ಎಂದರು.ಅಶೋಕ ಭಂಡಾರಕರ, ಶೇಖರ ಪ್ರಭಾತ, ರಾವಸಾಹೇಬ ಫಕೀರೆ, ಸುದರ್ಶಣ ತಮ್ಮನ್ನವರ, ನಿರಂಜನ ಕಾಂಬಳೆ ಸೇರಿದಂತೆ ದಲಿತ ಮುಖಂಡರು, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ.ಮೇಕನಮರಡಿ, ಸಿಪಿಐ ಶ್ರೀಧರ ಚೌಗಲಾ, ಎಸ್.ಎಸ್.ಕಾದ್ರೋಳ್ಳಿ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣ ಪಾಟೀಲ ಸ್ವಾಗತಿಸಿದರು.ಸಂಜಯ ದೇಸಾಯಿ ನಿರೂಪಿಸಿ,ವಂದಿಸಿದರು.