ಸಾರಾಂಶ
ಶರಣು ಸೊಲಗಿ ಮುಂಡರಗಿ
ನಾಗರೀಕರ ಆರೋಗ್ಯ ಕಾಪಾಡಬೇಕಿದ್ದ ಮುಂಡರಗಿ ತಾಲೂಕು ಪಂಚಾಯತಿ ಸ್ವಚ್ಛತೆ ಮರೆತಿದ್ದರಿಂದ ಇಡೀ ಪಟ್ಟಣ ಗಬ್ಬು ನಾರುತ್ತಿದೆ. ಎಲ್ಲಿ ನೋಡಿದರಲ್ಲಿ ಕಸ, ಹರಿವ ಕೊಳಚೆ, ಹಂದಿಗಳ ಹಿಂಡು, ವಿಕಾರ ಮೂತ್ರಾಲಯಗಳು ತಾಪಂ ಕಾರ್ಯವೈಖರಿ ಕೂಗಿ ಹೇಳುತ್ತಿವೆ.ಪಟ್ಟಣದ ಹೃದಯ ಭಾಗದಲ್ಲಿರುವ ತಾಪಂ ಕಚೇರಿ ಆವರಣದಲ್ಲಿ ಕಾಲಿಟ್ಟರೆ ಸಾಕು ಎಲ್ಲೆಂದರಲ್ಲಿ ಕಸ ಬಿದ್ದು ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ಆವರಣದ ಮೂಲೆಯಲ್ಲಿರುವ ಮೂತ್ರಾಲಯ ನಾನಿಲ್ಲಿದ್ದೇನೆಂದು ತನ್ನ ವಾಸನೆ ಮೂಲಕವೇ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.
ಹೌದು. ತಾಲೂಕಿನ ಎಲ್ಲ ಗ್ರಾಪಂಗಳಿಗೆ ಹಿರಿಯಣ್ಣನೆಂದರೆ ಅದು ತಾಪಂ. ಎಲ್ಲ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಛತೆ, ಮೂತ್ರಾಲಯ ಹಾಗೂ ಶೌಚಾಲಯಗಳ ಕುರಿತು ಜಾಗೃತಿ ಮೂಡಿಸುವುದು ಈ ತಾಪಂ ಕಚೇರಿಯ ಅಧಿಕಾರಿಗಳ ಜವಾಬ್ದಾರಿ. ಆದರೆ ತಾಲೂಕು ಕೇಂದ್ರದಲ್ಲಿರುವ ತಾಪಂ ಆವರಣದಲ್ಲಿಯೇ ಎಲ್ಲೆಂದರಲ್ಲಿ ಕಸ ಬಿದ್ದಿದ್ದು, ಇದೀಗ ಮಳೆ ಸುರಿಯುತ್ತಿರುವುದರಿಂದ ಆ ಕಸ ಕೊಳೆತು ಗಬ್ಬು ವಾಸನೆ ಬೀರುತ್ತಿದೆ.ತಾಪಂ ಕಾರ್ಯನಿರ್ವಾಹಕ ಅಧಿಕಾರಿಯೂ ಸೇರಿದಂತೆ ಎಲ್ಲ ಹಂತದ ಅಧಿಕಾರಿಗಳು ನಿತ್ಯವೂ ಕಚೇರಿಗೆ ಆಗಮಿಸುತ್ತಿದ್ದರೂ ಕಚೇರಿ ಆವರಣದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸವನ್ನು ಒಂದು ಬಾರಿಯೂ ತಿರುಗಿ ನೋಡದಂತೆ ಕಾಣುತ್ತಿದೆ. ಹೀಗಾಗಿ ಇಡೀ ತಾಪಂ ಕಚೇರಿ ಆವರಣದಲ್ಲಿ ಗೋಡೆಗಳ ಪಕ್ಕದಲ್ಲಿ ಕಸ ಕಾಣುತ್ತಿದೆ.
ಅಲ್ಲದೇ ತಾಪಂ ಕಚೇರಿಗೆ ಬರುವ ಸಾರ್ವಜನಿಕರಿಗಾಗಿ ಆವರಣದ ಹಿಂದುಗಡೆಗೆ ಮೂತ್ರಾಲಯ ನಿರ್ಮಿಸಿದ್ದು, ಅದರಲ್ಲಿನ ಮೂತ್ರ ಹರಿದು ಹೋಗದೇ ನಿಂತಲ್ಲೇ ನಿಂತು ಹಸಿರು ಬಣ್ಣಕ್ಕೆ ತಿರುಗಿ ತಾಪಂ ಕಚೇರಿಗೆ ಬರುವವರಿಗೆ ನಾನಿಲ್ಲಿದ್ದೇನೆಂದು ತನ್ನ ವಾಸನೆ ಮೂಲಕವೇ ಎಲ್ಲರನ್ನೂ ತನ್ನತ್ತ ಸೆಳೆಯುವಂತಿದೆ. ಈ ಕುರಿತು ಅನೇಕ ಬಾರಿ ಇಲ್ಲಿನ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಇದುವರೆಗೂ ಆ ಮೂತ್ರಾಯದ ದುರಸ್ತಿ ಕಾರ್ಯ ನಡೆಯುತ್ತಿಲ್ಲ ಎನ್ನುವುದು ಇಲ್ಲಿಗೆ ಆಗಮಿಸಿದ ಸಾರ್ವಜನಿಕರು ದೂರಿದ್ದಾರೆ.ತಾಪಂ ಆವರಣದಲ್ಲಿ ಇನ್ನೂ ಎರಡು ಇಲಾಖೆ ಕಚೇರಿಗಳಿದ್ದು, ಅವರನ್ನೂ ಸೇರಿಸಿಕೊಂಡು ಸ್ವಚ್ಛತೆಗೆ ಮುಂದಾಗಬೇಕಿದೆ. ತಮ್ಮ ಕಚೇರಿ ಆವರಣದಲ್ಲಿಯೇ ಸ್ವಚ್ಛತೆಗೆ ಗಮನ ಹರಿಸದ ತಾಪಂ ಅಧಿಕಾರಿಗಳು ಇನ್ನು ಇಡೀ ತಾಲೂಕಿನಾದ್ಯಂತ ಸ್ವಚ್ಛ ಭಾರತ ಕಾರ್ಯಕ್ರಮದ ನಿರ್ವಹಣೆ ಹೇಗೆ ಮಾಡುತ್ತಾರೆ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಉತ್ತರಿಸಬೇಕಿದೆ.
ತಾಪಂ ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಇರುವುದರ ಜತೆಗೆ ಮಳೆಯ ನೀರು ಹರಿದು ಹೋಗದಂತೆ ಅಲ್ಲಿಯೇ ನಿಂತು ಹಸಿರು ಬಣ್ಣಕ್ಕೆ ತಿರುಗಿದೆ. ಸಾರ್ವಜನಿಕರ ಮೂತ್ರ ವಿಸರ್ಜನೆಗಾಗಿ ನಿರ್ಮಿಸಿದ ಮೂತ್ರಾಲಯ ಇದ್ದೂ ಇಲ್ಲದಂತಾಗಿದೆ. ರಾಜ್ಯಾದ್ಯಂತ ಡೆಂಘೀ ಜ್ವರ ಹರಡುತ್ತಿರುವ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ನಿತ್ಯವೂ ಅಧಿಕಾರಿಗಳು ಬಂದು ಕಾರ್ಯ ನಿರ್ವಹಿಸುತ್ತಿರುವುದರಿಂದ ಅಲ್ಲಿ ಸೊಳ್ಳೆ ಉತ್ಪಾದನೆ ಆಗಿ ಡೆಂಘೀ ಹರಡುವ ಭೀತಿ ಇದ್ದು ತಕ್ಷಣವೇ ಸ್ವಚ್ಛತೆಗೆ ಮುಂದಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಡಿವೆಪ್ಪ ಛಲವಾದಿ ತಿಳಿಸಿದ್ದಾರೆ.ತಾಪಂ ಆವರಣದಲ್ಲಿರುವ ಮೂತ್ರಾಲಯವನ್ನು ಈ ಹಿಂದೆ ಸ್ವಚ್ಛಗೊಳಿಸಲಾಗಿದೆ. ನಾಳೆ ಮತ್ತೊಂದು ಬಾರಿ ಮೂತ್ರಾಲಯ ಹಾಗೂ ಕಚೇರಿ ಆವರಣ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಹೇಳಿದ್ದಾರೆ.