ಸಾರಾಂಶ
-ಒಳ ಮೀಸಲಾತಿ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ದಸಂಸ ಆಗ್ರಹ
----ಕನ್ನಡಪ್ರಭ ವಾರ್ತೆ, ಮೊಳಕಾಲ್ಮುರು
ಒಳ ಮೀಸಲಾತಿ ಜಾರಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರಿಂದ ತಮಟೆ ಚಳುವಳಿ ಮೂಲಕ ಪ್ರತಿಭಟನೆ ನಡೆಸಿದರು.ಬಸ್ ನಿಲ್ದಾಣದ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಪರಿಶಿಷ್ಟ ಜಾತಿಯಲ್ಲಿ ಮಾದಿಗ ಸಮುದಾಯ ಬಹುಸಂಖ್ಯಾತವಾಗಿದ್ದರೂ ಈವರೆಗೂ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಪರಿಣಾಮ ಮಾದಿಗ ಸಮುದಾಯ ಸಾಮಾಜಿಕವಾಗಿ,ಶೈಕ್ಷಣಿಕವಾಗಿ,ಆರ್ಥಿಕವಾಗಿ ಅತ್ಯಂತ ಹಿಂದುಳಿದಿದೆ.ಶತಮಾನ ಕಳೆದರೂ ಸಮುದಾಯ ನಿತ್ಯವೂ ಶೋಷಣೆಗೆ ಒಳಗಾಗುತ್ತಿದೆ.ಹಳ್ಳಿಗಳಲ್ಲಿ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದ್ದು ಇಂದಿಗೂ ದೇವಸ್ಥಾನಗಳಿಗೆ,ಹೋಟೆಲ್ ಗಳಿಗೆ ಪ್ರವೇಶ ಇಲ್ಲದೆ ತುಳಿತಕ್ಕೊಳಗಾಗುತ್ತಿದ್ದಾರೆ.ಸಮುದಾಯಕ್ಕೆ ಸೂಕ್ತ ನ್ಯಾಯ ಸಿಗದೇ ಅನ್ಯಾಯಕ್ಕೊಳಗಾಗಿದ್ದಾರೆ.ಸರ್ಕಾರ ಕೂಡಲೇ ಅಸ್ಪೃಶ್ಯತೆ ನಿವಾರಣೆಗೆ ಪ್ರತ್ಯೇಕವಾದ ತಂಡವನ್ನು ರಚನೆ ಮಾಡಬೇಕು ಎಂದಿದ್ದಾರೆ.
ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನಾಲ್ಕು ದಶಕಗಳ ಬೇಡಿಕೆಯಾಗಿದೆ.ಇದಕ್ಕಾಗಿ ನ್ಯಾ ಸದಾ ಶಿವ ಆಯೋಗ ರಚನೆ ಮಾಡಿ ವರದಿ ಸಲ್ಲಿಸಿದ್ದರೂ ಈವರೆಗೂ ಒಳ ಮೀಸಲಾತಿ ಜಾರಿಯಾಗಿಲ್ಲ.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಒಳ ಮೀಸಲು ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು.ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆಯುತ್ತಾ ಬಂದರೂ ಮುಖ್ಯಮಂತ್ರಿಗಳು ಮೀಸಲು ವರ್ಗೀಕರಣಕ್ಕೇ ಮುಂದಾಗುತ್ತಿಲ್ಲ.ಸುಪ್ರೀಂ ಕೋರ್ಟಿನ ಏಳು ನ್ಯಾಯಾಧೀಶರ ಪೀಠ ಒಳ ಮೀಸಲು ನೀಡಬಹುದು.ಆದರೆ ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ತೀರ್ಪು ನೀಡಿದೆ.ಸರ್ಕಾರ ಕೂಡಲೇ ಮಾದಿಗರ ಬಹುದಿನದ ಬೇಡಿಕೆಯಾದ ಒಳ ಮೀಸಲಾತಿ ಜಾರಿಗೆ ತುರ್ತು ಕ್ರಮ ವಹಿಸಬೇಕು.ಅಲ್ಲಿಯ ತನಕ ನೇಮಕಾತಿಗಳನ್ನು ತಡೆ ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.ರಾಜ್ಯದಲ್ಲಿ ನಿತ್ಯವೂ ಮಾದಿಗ ಸಮುದಾಯ ನಿತ್ಯವೂ ದೌರ್ಜನ್ಯಕ್ಕೇ ಒಳಗಾಗುತ್ತಿದೆ ಎಂಬುದಕ್ಕೆ ಯಲಬುರ್ಗಾ ತಾಲೂಕಿನಲ್ಲಿ ನಡೆದ ಕೊಲೆಯೇ ಪ್ರಮುಖ ಸಾಕ್ಷಿಯಾಗಿದೆ.ಕ್ಷೌರ ಮಾಡಿಸಲು ಹೋದಾಗ
ಕ್ಷೌರದಂಗಡಿಯ ಮಾಲೀಕ ಬರ್ಬರವಾಗಿ ಕೊಲೆ ಮಾಡಿರುವುದು ಖಂಡನೀಯ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು.ಸಾಮಾಜಿಕ ನ್ಯಾಯ ಸಿಗಲು ಒಳ ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.ಈ ವೇಳೆ ದಲಿತ ಯುವ ಮುಖಂಡ ಜಿ.ಶ್ರೀನಿವಾಸ ಮೂರ್ತಿ,ತಾಲೂಕು ಸಂಚಾಲಕ ಓ.ಕರಿಬಸಪ್ಪ.ಜಿಲ್ಲಾ ಸಂಘಟನಾ ಸಂಚಾಲರಾದ ರಾಯಪುರ ನಾಗೇಂದ್ರಪ್ಪ, ಬಿಜಿಕೆರೆ ಬಿ.ಬಸವರಾಜ. ಕೋನಸಾಗರ ನಾಗೇಂದ್ರಪ್ಪ , ನಾಗಸಮುದ್ರ ಮರಿಸ್ವಾಮಿ, ಬಿಜಿಕೆರೆ ಸಿದ್ದಣ್ಣ, ಮೊಗಲಹಳ್ಳಿ ಸಿದ್ದಾರ್ಥ ತಿಪ್ಪೇಸ್ವಾಮಿ,ಕೊಂಡಾಪುರ ಬಲರಾಮ್ ದೇವಸಮುದ್ರ ಚಂದ್ರಣ್ಣ, ಬಟ್ರಳ್ಳಿ ಚಂದ್ರಣ್ಣ,ಮುತ್ತಿಗೆರೆಹಳ್ಳಿ ಮಂಜಣ್ಣ,ಹಿರಿಯ ಮುಖಂಡ ತಿಪ್ಪೇಸ್ವಾಮಿ, ಚಿಕ್ಕೊಬನಹಳ್ಳಿ ಅಜ್ಜೆರಿ ತಿಪ್ಪೇಸ್ವಾಮಿ, ವಡೇರಲ್ಲಿ ಬಸವರಾಜ ಇದ್ದರು.