ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಆಶ್ರಯ ಯೋಜನೆಗೆ ಮೀಸಲಿಟ್ಟಿರುವ ಜಮೀನನ್ನು ಬಡವರಿಗೆ ಹಂಚಿಕೆ ಮಾಡುವಂತೆ ಆಗ್ರಹಿಸಿ ಹಿಂದುಳಿದ ವರ್ಗಗಳ ಎಲ್ಲಾ ಸಮುದಾಯದ ಒಕ್ಕೂಟ ಸಂಘಟನೆಗಳು ಮತ್ತು ಗ್ರಾಮಸ್ಥರು ತಾಲೂಕಿನ ಹರಿಹರಪುರ ಗ್ರಾಪಂ ಕಚೇರಿ ಎದುರು ತಮಟೆ ಚಳವಳಿ ನಡೆಸಿದರು.

ವಿಶ್ವ ಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ, ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘ, ಜಾಮಿಯಾ ಮಸೀದಿ ಸಂಘ ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಗ್ರಾಮಸ್ಥರು ಗ್ರಾಪಂ ಆಡಳಿತ, ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹರಿಹರಪುರ ಗ್ರಾಮದ ಸರ್ವೇ ನಂಬರ್ 24ರಲ್ಲಿ ಆಶ್ರಯ ಯೋಜನೆಗಾಗಿ ಸರ್ಕಾರ ಸುಮಾರು 2 ಎಕರೆ ಜಮೀನನ್ನು ಮೀಸಲಿಟ್ಟಿತ್ತು. ಈ ಜಮೀನಿನಲ್ಲಿ ಒಟ್ಟು 64 ನಿವೇಶನ ಗುರುತಿಸಲಾಗಿದೆ. ಅವುಗಳನ್ನು ಗ್ರಾಮದ ನಿವೇಶನ ರಹಿತ, ಬಡ ಹಾಗೂ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕಿತ್ತು. ಆದರೆ, ಇತ್ತೀಚೆಗೆ ರಾಜಕೀಯ ಪ್ರಭಾವವಿರುವ ಕೆಲ ವ್ಯಕ್ತಿಗಳು ಮತ್ತು ಬಲಾಢ್ಯರು ರಾತ್ರೋರಾತ್ರಿ ಈ ಜಮೀನಿನಲ್ಲಿ ಅತಿಕ್ರಮವಾಗಿ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಕೂಡಲೇ ಅಕ್ರಮವಾಗಿ ಶೆಡ್ ನಿರ್ಮಿಸಿರುವವರನ್ನು ತೆರವುಗೊಳಿಸಿ ಸರ್ಕಾರಿ ಜಮೀನನ್ನು ಸಂರಕ್ಷಿಸಬೇಕು. ಜಾತಿ-ಭೇದವಿಲ್ಲದೆ ಗ್ರಾಮದ ಎಲ್ಲಾ ಸಮುದಾಯದ ಬಡವರಿಗೆ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರಿಗೆ ಮತ್ತು ಕಡುಬಡವರಿಗೆ ಸಮಾನವಾಗಿ ನಿವೇಶನಗಳನ್ನು ಹಂಚಬೇಕು ಎಂದು ಆಗ್ರಹಿಸಿದರು.


ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಬೇಕು. ಸ್ಥಳೀಯ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ವಿಫಲರಾಗಿದ್ದು, ಜಿಪಂ ಸಿಇಒ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಬೇಕು. ಒಂದು ವೇಳೆ ಜಿಲ್ಲಾ ಮಟ್ಟದ ಅಧಿಕಾರಿಗಳು ನಮ್ಮ ಸಮಸ್ಯೆ ಕೇಳಲು ಬರದಿದ್ದರೆ, ರಾತ್ರಿ ಇಡೀ ಧರಣಿ ನಡೆಸಿ ಮುಂದಿನ ದಿನಗಳಲ್ಲಿ ಜಿಪಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ನಿತೇಶ್ ಶರ್ಮಾ, ಶಿವಕುಮಾರ್ ಎಚ್ಚರಿಸಿದರು.

ಚಲವಾದಿ ನರಸಿಂಹ ಮಾತನಾಡಿ, ಗ್ರಾಮದಲ್ಲಿ ನೂರಾರು ಕುಟುಂಬಗಳು ನಿವೇಶನವಿಲ್ಲದೆ ಸಂಕಷ್ಟದಲ್ಲಿವೆ. ಆದರೆ, ಅಧಿಕಾರಿಗಳು ಅತಿಕ್ರಮಣದಾರರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅಕ್ರಮವಾಗಿ ಶೆಡ್ ನಿರ್ಮಾಣವಾಗುತ್ತಿದ್ದರೂ ಪಂಚಾಯ್ತಿ ಆಡಳಿತ ಕಣ್ಣಿದ್ದೂ ಕುರುಡರಂತೆ ನಾಟಕವಾಡುತ್ತಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಎಲ್ಲಾ ಸಮುದಾಯದ ಯಜಮಾನರು, ಯುವ ಮುಖಂಡರು ಸೇರಿದಂತೆ ನೂರಾರು ಮಹಿಳೆಯರು ಉಪಸ್ಥಿತರಿದ್ದರು.