ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಇಲ್ಲಿನ ಮಾದಿಗ ಹಾಗೂ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ತಮಟೆ ಚಳವಳಿ ನಡೆಸುವ ಮೂಲಕ ಶನಿವಾರ ಶಾಸಕ ಎಚ್.ವಿ.ವೆಂಕಟೇಶ್ ಅವರ ಹನುಮಂತನಹಳ್ಳಿಯ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಬೆಳಗ್ಗೆ ಪಟ್ಟಣದ ಟೋಲ್‌ಗೇಟ್ ಬಳಿಯ ಡಾ.ಬಿ.ಆರ್,ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಸಲ್ಲಿಸಿದ ಪ್ರತಿಭಟನಾಕಾರರು ಒಳಮೀಸಲಾತಿ ಜಾರಿಯ ಘೋಷಣೆ ಮೊಳಗಿಸಿ ನಂತರ ದ್ವಿಚಕ್ರವಾಹನಗಳಲ್ಲಿ ತೆರಳಿ ತಮಟೆ ಬಾರಿಸಿ, ಶಾಸಕರ ನಿವಾಸದ ಬಳಿ ಒಳಮೀಸಲಾತಿ ಜಾರಿ ಕುರಿತು ಕೂಡಲೇ ರಾಜ್ಯ ಸರ್ಕಾರ ಆದೇಶ ಜಾರಿಪಡಿಸುವಂತೆ ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ಡಿಎಸ್‌ಎಸ್ ಸಂಚಾಲಕ ಸಿ.ಕೆ.ತಿಪ್ಪೇಸ್ವಾಮಿ ಮಾತನಾಡಿ ಬಹುದಿನಗಳ ಮಾದಿಗ ಸಂಘಟನೆಯ ಹೋರಾಟ ಹಾಗೂ ಸುಪ್ರೀಂ ಕೋರ್ಟ್ ಮೊರೆಹೋದ ಹಿನ್ನಲೆಯಲ್ಲಿ ಜನ ಸಂಖ್ಯೆಗೆ ಅನುಗುಣವಾಗಿ ನ್ಯಾಯಸಮ್ಮತವಾದ ಒಳಮೀಸಲಾತಿ ಜಾರಿಗೆ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಕೇಂದ್ರ ಸರ್ಕಾರದ ಆದೇಶ ಅನ್ವಯ ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ಸಲ್ಲಿಸಿ ಶೀಘ್ರ ಒಳಮೀಸಲಾತಿ ಜಾರಿಗೊಳಿಸಿ ಅನುಕೂಲ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.ಮಹಾ ಅದಿಗ ಹೋರಾಟ ಸಮಿತಿಯ ಅಧ್ಯಕ್ಷ ಕನ್ನಮೇಡಿ ಕೃಷ್ಣಮೂರ್ತಿ ಮಾತನಾಡಿ, ಒಳಮೀಸಲಾತಿ ಜಾರಿಗಾಗಿ ರಾಜ್ಯಾಧ್ಯಂತ ಮಾದಿಗ ಸಂಟನೆಗಳು ಹೋರಾಟ ಹಮ್ಮಿಕೊಂಡಿದ್ದು, ತಮಟೆ ಬಾರಿಸುವ ಮೂಲಕ ಸ್ಥಳೀಯ ಶಾಸಕರ ನಿವಾಸದ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಆದೇಶ ಜಾರಿಪಡಿಸಿದ್ದು ಈಗ ನಡೆಯುವ ಬೆಳಗಾವಿಯ ಅಧಿವೇಶನದಲ್ಲಿ ಎ.ಜೆ.ಸದಾಶಿವ ಆಯೋಗದ ವರದಿ ಯಥಾವತ್ ಜಾರಿಗೆ ರಾಜ್ಯ ಸರ್ಕಾರ ಕ್ರಮವಹಿಸಬೇಕು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸೂಕ್ತ ಕ್ರಮವಹಿಸಿ ಒಳಮೀಸಲಾತಿ ಜಾರಿಪಡಿಸಬೇಕು.ನಿರ್ಲಕ್ಷ್ಯವಹಿಸಿದರೆ ಮುಂದಿನ ಜಿಪಂ ಹಾಗೂ ತಾಪಂ ಚುನಾವಣೆಗಳಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಮುಂದಾಗಲಿದ್ದೇವೆ ಎಂದು ಎಚ್ಚರಿಸಿದರು.
ದಲಿತ ಮುಖಂಡರಾದ ಮಂಗಳವಾಡ ಮಂಜುನಾಥ್, ದೇವಲಕರೆ ಲಿಂಗಣ್ಣ ಹಾಗೂ ಮಾದಿಗ ದಂಡೋರ ಜಿಲ್ಲಾ ಉಪಾಧ್ಯಕ್ಷ ವಳ್ಳೂರು ನಾಗೇಶ್,ತಾಲೂಕು ಡಿಎಸ್‌ಎಸ್ ಸಂಚಾಲಕ ಬಿ.ಪಿ.ಪೆದ್ದನ್ನ ಇತರೆ ದಲಿತ ಸಂಘಟನೆಯ ಅನೇಕ ಮುಖಂಡರು ಬೆಳಗಾವಿ ಅಧಿವೇಶನದಲ್ಲಿ ತೀರ್ಮಾನಿಸಿ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ಮಾದಿಗ ಸಮುದಾಯಕ್ಕೆ ನ್ಯಾಯ ಕಲ್ಪಿಸುವಂತೆ ಒತ್ತಾಯಿಸಿದರು.ಈ ವೇಳೆ ಬಿಪಿಎಸ್ ಎಚ್.ಪಿ.ಈರಣ್ಣ , ಹೊಸಹಳ್ಳಿ ಪ್ರಸಾದ್‌ಬಾಬು,ತಾಲೂಕು ಮಾದಿಗ ದಂಡೋರದ ಉಪಾಧ್ಯಕ್ಷ ಕಡಮಲಕುಂಟೆ ಹನುಮಂತರಾಯಪ್ಪ,ಕಡಪಲಕರೆ ನರಸಿಂಹಪ್ಪ,ಪಳವಳ್ಳಿ ನರಸಿಂಹಮೂರ್ತಿ,ನೀಲಾ ನಾಗರಾಜು,ಗಂಗಾಧರ್,ಸಿದ್ದಪ್ಪ,ನರಸಿಂಹಯ್ಯ,ಬ್ಯಾಡನೂರು ನಾಗರಾಜಪ್ಪ,ಕೆ.ನರಸಿಂಹಪ್ಪ,ರಂಗದಾಮಪ್ಪ ದೇವಲಕರೆ ಹನುಮಂತರಾಯಪ್ಪ ಹಾಗೂ ಇತರೆ ಅನೇಕ ಮಂದಿ ದಲಿತ ಪರ ಸಂಘಟನೆಯ ಮುಖಂಡರು ಹಾಗೂ ಸಂಘಟನೆಯ ಸದಯ್ಯರಿದ್ದರು.