ತಂಬ್ರಹಳ್ಳಿಯ ಭಾವೈಕ್ಯತೆ ಶಿಕ್ಷಕ ರೆಡ್ಡಿ ನಾಯ್ಕ

| Published : Sep 05 2025, 01:00 AM IST

ಸಾರಾಂಶ

ಉರ್ದು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುತ್ತದೆ. ರೆಡ್ಡಿ ನಾಯ್ಕ, ಮಕ್ಕಳ ದಾಖಲಾತಿ ಸಂಖ್ಯೆಯನ್ನು 162ಕ್ಕೆ ಏರಿಕೆ ಮಾಡಿದ್ದಾರೆ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಲ್‌. ರೆಡ್ಡಿ ನಾಯ್ಕ ಸಮಾಜದಲ್ಲಿ ಭಾವೈಕ್ಯತೆ ಮೂಡಿಸಲು ಸರ್ವಧರ್ಮ ಹಬ್ಬವನ್ನು ಶಾಲೆಯಲ್ಲಿ ವಿಶಿಷ್ಟವಾಗಿ ಆಚರಿಸುತ್ತಾರೆ. ಹಾಗಾಗಿ ಇವರನ್ನು ಭಾವೈಕ್ಯತೆ ಶಿಕ್ಷಕ ಎನ್ನಲಾಗುತ್ತದೆ. ಉರ್ದು ಶಾಲೆಯಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್‌ರ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಎಸ್‌ಡಿಎಂಸಿ ಹಾಗೂ ಶಾಲಾ ಮಕ್ಕಳ ಪಾಲಕರ ಮನವೊಲಿಸಿ ಸರ್ವ ಧರ್ಮೀಯರ ಹಬ್ಬ ಆಚರಿಸುತ್ತಿದ್ದಾರೆ. ಈ ಶಾಲೆಯಲ್ಲಿ ಗಣೇಶ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಗಿದ್ದು, ಇದಕ್ಕೆ ಸ್ವತಃ ಡಿಡಿಪಿಐ ಅವರೇ ಶಹಬ್ಬಾಸ್‌ ಗಿರಿ ನೀಡಿದ್ದಾರೆ.

ಉರ್ದು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುತ್ತದೆ. ರೆಡ್ಡಿ ನಾಯ್ಕ, ಮಕ್ಕಳ ದಾಖಲಾತಿ ಸಂಖ್ಯೆಯನ್ನು 162ಕ್ಕೆ ಏರಿಕೆ ಮಾಡಿದ್ದಾರೆ. 2016ರಿಂದ 2023-24ನೇ ಸಾಲಿನವರೆಗೆ ಉಚಿತವಾಗಿ ಎಲ್‌ಕೆಜಿ, ಯುಕೆಜಿ ಆರಂಭಿಸಿ ತನ್ನ ವೇತನದಲ್ಲೇ ಶಿಕ್ಷಕರಿಗೆ ಗೌರವ ಧನ ನೀಡಿದ್ದಾರೆ. ಮಕ್ಕಳಿಗೆ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಿದ್ದಾರೆ. ಇವರು ಮಕ್ಕಳಿಗೆ ಶೌರ್ಯ ಪ್ರಶಸ್ತಿ ಕೂಡ ಕೊಡಮಾಡುತ್ತಾರೆ. ಇದಕ್ಕಾಗಿ ರಾಜ್ಯಾದ್ಯಂತ ತಿರುಗಾಡಿ ಪ್ರೋತ್ಸಾಹ ಕೂಡ ನೀಡುತ್ತಿದ್ದಾರೆ. ಎಂಬಿಬಿಎಸ್‌ ಸೇರಿದಂತೆ ಉನ್ನತ ಶಿಕ್ಷಣ ಪಡೆಯುವ 178 ಬಡ ಮಕ್ಕಳ ಶುಲ್ಕವನ್ನೂ ಭರಿಸಿದ್ದಾರೆ. ಇಂಗ್ಲಿಷ್‌ ಭಾಷೆಯಲ್ಲಿ ಉಚ್ಚಾರಣೆ ಸಮರ್ಪಕವಾಗಿ ಮಾಡಲು ಗ್ರಾಮೀಣ ಭಾಗದ ಮಕ್ಕಳಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಇದಕ್ಕಾಗಿ ವಿಶೇಷ ಆದ್ಯತೆ ನೀಡಿದ್ದಾರೆ. ಬೇಸಿಗೆ ರಜೆಯಲ್ಲಿ ಉಚಿತವಾಗಿ ಬೇಸಿಗೆ ಶಿಬಿರ ನಡೆಸುತ್ತಾರೆ. ಸಂಪನ್ಮೂಲ ಶಿಕ್ಷಕರು ಹಾಗೂ ಪ್ರತಿಭಾವಂತರನ್ನು ಆಹ್ವಾನಿಸಿ ಮಕ್ಕಳ ಜ್ಞಾನ ಹೆಚ್ಚಿಸುವ ಕಾರ್ಯ ಮಾಡುತ್ತಾ ಬರುತ್ತಿದ್ದಾರೆ. 27 ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಇವರು, ತಂಬ್ರಹಳ್ಳಿ ಹಾಗೂ ಬನ್ನಿಗೋಳ ಗ್ರಾಮದ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಸೈ ಎನಿಸಿಕೊಂಡಿದ್ದಾರೆ.

ಮಕ್ಕಳ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಇವರು, ಮಕ್ಕಳ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಪುಸ್ತಕಗಳ ನಿಧಿಗಾಗಿ ಒಂದು ಲಕ್ಷ ರು. ದೇಣಿಗೆ ನೀಡಿದ್ದಾರೆ. ಮಕ್ಕಳಿಗಾಗಿ ಗ್ರಂಥಾಲಯ ಕೂಡ ಸ್ಥಾಪಿಸಿದ್ದಾರೆ. ಇವರ ಸೇವೆಗೆ ಹಲವು ಪ್ರಶಸ್ತಿಗಳು ಕೂಡ ಅರಸಿ ಬಂದಿವೆ.

ಶಿಕ್ಷಕ ವೃತ್ತಿ ಅತ್ಯಂತ ಜವಾಬ್ದಾರಿಯುತ ವೃತ್ತಿ ಆಗಿದೆ. ಹಾಗಾಗಿ ಮಕ್ಕಳ ಭವಿಷ್ಯ ರೂಪಿಸುವ ಕೆಲಸವನ್ನು ಮಾಡುತ್ತಾ ಬಂದಿರುವೆ. ಮಕ್ಕಳಲ್ಲಿ ಭಾವೈಕ್ಯತೆ ಮೂಡಿಸುವ ಕೆಲಸ ಮಾಡುತ್ತಿರುವೆ. ಜೊತೆಗೆ ಗ್ರಂಥಾಲಯಕ್ಕೆ ಒತ್ತು ನೀಡಿದ್ದು, ಬಡ ಮಕ್ಕಳ ಉನ್ನತ ಶಿಕ್ಷಣಕ್ಕೂ ಕೈಲಾದ ಮಟ್ಟಿನ ಸಹಾಯ ಮಾಡುತ್ತಿರುವೆ ಎಂದು ತಂಬ್ರಹಳ್ಳಿ ಶಿಕ್ಷಕ ಎಲ್‌.ರೆಡ್ಡಿ ನಾಯ್ಕ ತಿಳಿಸಿದ್ದಾರೆ.