ಸಾರಾಂಶ
ಹುಬ್ಬಳ್ಳಿಯ ಮಾರುಕಟ್ಟೆಗೆ ಪ್ರತಿ ವರ್ಷ ಹಾವೇರಿ, ಕಲಘಟಗಿ, ಖಾನಾಪುರ, ಮಧ್ನಳಿ ಮತ್ತು ರಾಣಿಬೆನ್ನೂರು... ಹೀಗೆ ಇನ್ನಿತರ ಸ್ಥಳಗಳಿಂದ ಮಣ್ಣಿನ ಹಣತೆ ಬರುತ್ತವೆ. ಆದರೆ, ಈ ಹಣತೆಗಳ ವ್ಯಾಪಾರ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.
ಶಿವಾನಂದ ಕುಂದರಗಿ
ಹುಬ್ಬಳ್ಳಿ:ಆಧುನಿಕ ಭರಾಟೆ, ಬಣ್ಣ ಬಣ್ಣದ ಲೈಟಿನ್ ಸರಗಳ ನಡುವೆ ಮಣ್ಣಿನ ಹಣತೆ ನೇಪಥ್ಯಕ್ಕೆ ಸರಿಯುತ್ತಿರುವ ಸಂದರ್ಬದಲ್ಲಿ ತಮಿಳುನಾಡಿನಲ್ಲಿ ಅಚ್ಚಿನಿಂದ ತಯಾರಿಸಿದ ಚೀನಿ ಮಣ್ಣಿನ ಹಣತೆಗಳು ಹುಬ್ಬಳ್ಳಿ ಮಾರುಕಟ್ಟೆ ಪ್ರವೇಶಿಸಿದ್ದು, ಸ್ಥಳೀಯ ಕುಂಬಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹುಬ್ಬಳ್ಳಿಯ ಮಾರುಕಟ್ಟೆಗೆ ಪ್ರತಿ ವರ್ಷ ಹಾವೇರಿ, ಕಲಘಟಗಿ, ಖಾನಾಪುರ, ಮಧ್ನಳಿ ಮತ್ತು ರಾಣಿಬೆನ್ನೂರು... ಹೀಗೆ ಇನ್ನಿತರ ಸ್ಥಳಗಳಿಂದ ಮಣ್ಣಿನ ಹಣತೆ ಬರುತ್ತವೆ. ಆದರೆ, ಈ ಹಣತೆಗಳ ವ್ಯಾಪಾರ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಹೆಚ್ಚಿನ ಬಾಳಿಕೆ ಬರುವ ಅಚ್ಚಿನ ಮೂಲಕ ತಯಾರಿಸಿದ ಹೊಸ ಶೈಲಿಯ ವಿವಿಧ ಬಗೆಯ ತಮಿಳುನಾಡಿನ ಹಣತೆಗಳು ಮಾರುಕಟ್ಟೆಗೆ ಬಂದಾಗಿನಿಂದಲೂ ಹಣತೆ ತಯಾರಿಕರು ನಷ್ಟವನ್ನೇ ಅನುಭವಿಸುತ್ತಿದ್ದಾರೆ.ಆರು ತಿಂಗಳ ಶ್ರಮ:
ದೀಪಾವಳಿ ಹಬ್ಬದ 6 ತಿಂಗಳ ಮುಂಚಿತವಾಗಿಯೇ ಹಬ್ಬಕ್ಕೆ ಬೇಕಾಗುವ ಹಣತೆಗಳ ತಯಾರಿಕೆ ಆರಂಭವಾಗುತ್ತದೆ. ನೂರಾರು ಕಾರ್ಮಿಕರು ಸೇರಿ ವಿವಿಧ ರೀತಿಯ ಶ್ಯೆಲಿಯಲ್ಲಿ ಹಣತೆ ತಯಾರಿಸಿ ಒಣಗಿಸುತ್ತಾರೆ. ನಂತರ ಕಟ್ಟಿಗೆ ಹಾಕಿ ಸುಡಲಾಗುತ್ತದೆ. ಅವುಗಳಿಗೆ ಬಣ್ಣದ ಲೇಪನ ಮಾಡಿ ಅವುಗಳ ಅಂದ ಹೆಚ್ಚಿಸಲಾಗುತ್ತದೆ. ಹೀಗೆ ಸಿದ್ಧಪಡಿಸಿದ ಹಣತೆಗಳನ್ನು ರೈಲು, ಟ್ರಕ್ ಮೂಲಕ ವಿವಿಧ ಸ್ಥಳಗಳಿಗೆ ಕಳುಹಿಸಲಾಗುತ್ತದೆ. ಹೀಗೆ ಹುಬ್ಬಳ್ಳಿಗೂ ತೆಗೆದುಕೊಂಡು ಬರಲಾಗುತ್ತದೆ.ಸ್ಥಳಿಯ ಹಣತೆಗೆ ಕುಸಿದ ಬೇಡಿಕೆ
ತಮಿಳುನಾಡಿನ ಹಣತೆಗಳಿಗೆ ಈಗ ಹೆಚ್ಚಿನ ಬೇಡಿಕೆಯಿದೆ. ಇವುಗಳನ್ನು ಕೈಯಿಂದ ಸಿದ್ಧಪಡಿಸದೇ ಯಂತ್ರಗಳಲ್ಲಿ, ಚೀನಿ ಮಣ್ಣಿನಿಂದ ಸಿದ್ಧಪಡಿಸಲಾಗುತ್ತದೆ. ಜತೆಗೆ ಕಡಿಮೆ ಬೆಲೆಗೆ ದೊರೆಯುತ್ತಿವೆ. ಮಾರುಕಟ್ಟೆಯಲ್ಲಿ ಸ್ಥಳೀಯ ಮಣ್ಣಿನಿಂದ ನಿರ್ಮಿಸಲಾದ ಹಣತೆಗಳು ₹40 ರಿಂದ ₹50 ಇದ್ದರೆ. ತಮಿಳುನಾಡಿನ ಹಣತೆಗಳು ಡಜನ್‌ಗೆ ₹30 ರಿಂದ ₹35ಕ್ಕೆ ದೊರೆಯುತ್ತಿದೆ. ಹಾಗಾಗಿ ಸ್ಥಳೀಯವಾಗಿ ಸಿದ್ಧಪಡಿಸಲಾಗಿರುವ ಹಣತೆಯನ್ನು ಕೊಂಡುಕೊಳ್ಳುವವರೇ ಇಲ್ಲದಂತಾಗಿದೆ.ಹಂಚಿನ ಮಣ್ಣಿನಿಂದ ಮಾಡಿದ ತಮಿಳುನಾಡಿನ ಹಣತೆಗಳು ಮಾರುಕಟ್ಟೆಗೆ ಬಂದಾಗಿನಿಂದಲೂ ಸ್ಥಳೀಯವಾಗಿ ತಯಾರಿಸಲಾಗುವ ಹಣತೆಗಳಿಗೆ ಬೇಡಿಕೆ ಕುಸಿದಿದೆ. ಹೀಗಾಗಿ ನಾವು ಸಹ ಅವುಗಳನ್ನೆ ತಂದು ಮಾರಾಟ ಮಾಡುತ್ತಿದ್ದೇವೆ.
ಜ್ಯೋತಿ ಕುಂಬಾರ, ಹಣತೆ ವ್ಯಾಪಾರಸ್ಥರುಚೀನಿ ಮಣ್ಣಿನ ಹಣತೆಗಳು ಬಂದಾಗಿನಿಂದ ಮಣ್ಣಿನ ಹಣತೆ ಕೇಳುವವರೇ ಇಲ್ಲ. ಕಡಿಮೆ ಲಾಭವಿದ್ದರೂ ಸಹ ಮಣ್ಣಿನ ಹಣತೆಗಳನ್ನೆ ತಯಾರಿಸಿ ಜೀವನ ಸಾಗಿಸುವ ನಮಗೆ ಗ್ರಾಹಕರು ಖರೀದಿಸಿದರೆ ನಮಗೂ ಆರ್ಥಿಕ ಸಹಾಯ ಆಗುತ್ತದೆ.ಬಸವಣ್ಣೆಪ್ಪ ಕುಂಬಾರ, ಹಣತೆ ತಯಾರಕರು, ಕಲಘಟಗಿ