ಸಾರಾಂಶ
ಸರ್ಕಾರಿ ವಾಹನವನ್ನು ಸಾರ್ವಜನಿಕರ ಸೇವೆಗಾಗಿ ಬಳಸದೇ ತಮ್ಮ ಸ್ವಂತಕ್ಕೆ ಬಳಕೆ ಮಾಡಿದ ತಾಪಂ ಇಒ ಶಿವರಾಜಯ್ಯ ಅವರನ್ನು ಯಡಿಯೂರು - ಕುಣಿಗಲ್ ಮಾರ್ಗ ಮಧ್ಯೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ತಡೆದು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ತುರುವೆಕೆರೆ
ಸರ್ಕಾರಿ ವಾಹನವನ್ನು ಸಾರ್ವಜನಿಕರ ಸೇವೆಗಾಗಿ ಬಳಸದೇ ತಮ್ಮ ಸ್ವಂತಕ್ಕೆ ಬಳಕೆ ಮಾಡಿದ ತಾಪಂ ಇಒ ಶಿವರಾಜಯ್ಯ ಅವರನ್ನು ಯಡಿಯೂರು - ಕುಣಿಗಲ್ ಮಾರ್ಗ ಮಧ್ಯೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ತಡೆದು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ತಾಪಂ ಇಒ ಶಿವರಾಜಯ್ಯ ತುರುವೇಕೆರೆಯಿಂದ ತಮ್ಮ ಸ್ವಂತ ಗ್ರಾಮ ಮಾಗಡಿಗೆ ಪ್ರತಿದಿನ ಪ್ರಯಾಣ ಮಾಡುತ್ತಿದ್ದಾರೆಂಬ ವಿಷಯ ಅರಿತ ಕೆಆರ್‌ಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಚನ್ನಯ್ಯ ಯಡಿಯೂರು - ಕುಣಿಗಲ್ ದಾರಿ ಮಧ್ಯೆ ತಾಪಂ ಇಒ ಶಿವರಾಜಯ್ಯರನ್ನು ತಡೆದು ವಿಚಾರಣೆ ಮಾಡಿದ್ದಾರೆ. ಇಒರವರು ಸರ್ಕಾರದ ಯಾವುದೇ ಅನುಮತಿ ಇಲ್ಲದೇ ಪ್ರತಿ ದಿನ ತಮ್ಮ ಸ್ವಗ್ರಾಮಕ್ಕೆ ಸರ್ಕಾರಿ ವಾಹನವನ್ನು ತೆಗೆದುಕೊಂಡು ಹೋಗುತ್ತಿದ್ದಾರೆಂದು ತಿಳಿದು ಬಂದಿದೆ.ಆ ಸಮಯದಲ್ಲಿ ಇಒ ಶಿವರಾಜಯ್ಯ ತಮಗೆ ಆರೋಗ್ಯ ಸರಿಯಿಲ್ಲ ಹಾಗಾಗಿ ವಾಹನವನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ಸಮಜಾಯಿಸಿ ಕೊಡಲು ಪ್ರಯತ್ನಿಸಿದ್ದಾರೆ. ಆದರೆ ಅದಕ್ಕೂ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆಯದೇ ಇರುವುದು ಖಚಿತವಾಗಿದೆ. ಅಂತಿಮವಾಗಿ ಇಒ ತಮ್ಮದು ತಪ್ಪಾಯಿತು. ಮುಂದೆ ಸಾರ್ವಜನಿಕರ ಆಸ್ತಿಯಾಗಿರುವ ಸರ್ಕಾರಿ ವಾಹನವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ಕೈ ಮುಗಿದು ಅಂಗಲಾಚಿದ್ದಾರೆ.
ಈ ನಡುವೆ ಇಒ ಶಿವರಾಜಯ್ಯ ಅವರು ಮುಂದೆ ಹೋಗಲು ಅವಕಾಶ ನೀಡಿ ಎಂದು ಗೋಗರೆದರೂ ಸಹ ಸರ್ಕಾರಿ ವಾಹನದಲ್ಲಿ ತೆರಳಲು ಅವಕಾಶ ನೀಡಿಲ್ಲ. ಶಿವರಾಜಯ್ಯ ಆಟೋವನ್ನಾದರೂ ಗೊತ್ತು ಮಾಡಿಕೊಡಿ ಎಂದು ಕೇಳಿದ್ದಾರೆ. ಅಂತಿಮವಾಗಿ ಜಿಲ್ಲಾ ಉಪಾಧ್ಯಕ್ಷ ಚನ್ನಯ್ಯ ತಮ್ಮದೇ ವಾಹನದಲ್ಲಿ ಮಾಗಡಿಗೆ ಬಿಟ್ಟರು ಎನ್ನಲಾಗಿದೆ. ಸರ್ಕಾರಿ ವಾಹನವನ್ನು ದುರುಪಯೋಗ ಪಡಿಸಿಕೊಂಡ ಆಪಾದನೆ ಮೇರೆಗೆ ಕೂಡಲೇ ತಾಪಂ ಇಒ ಶಿವರಾಜಯ್ಯರನ್ನು ಅಮಾನತು ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ಜಿಪಂ ಸಿಇಒಗೆ ಜಿಲ್ಲಾ ಉಪಾಧ್ಯಕ್ಷ ಚನ್ನಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದರೆ ಅಧಿಕಾರಿಗಳ ವಿರುದ್ಧವೇ ಹೋರಾಟ ಮಾಡಲಾಗುವುದು. ಅಲ್ಲದೇ ನ್ಯಾಯಾಲಯದಲ್ಲೂ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.೧೧ ಟಿವಿಕೆ ೪ -
ತುರುವೇಕೆರೆಯ ತಾಪಂ ಇಒ ಶಿವರಾಜಯ್ಯರನ್ನು ಯಡಿಯೂರು - ಕುಣಿಗಲ್ ಮಾರ್ಗ ಮಧ್ಯೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿರುವುದು.