ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾ ಬರೀ ಬುರುಡೆ: ಸಚಿವ ರಾಮಲಿಂಗಾರೆಡ್ಡಿ

| Published : May 01 2024, 01:20 AM IST

ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾ ಬರೀ ಬುರುಡೆ: ಸಚಿವ ರಾಮಲಿಂಗಾರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ಬ್ರಾಂಡ್‌ಗಳ ಹೆಸರಿನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿ ಆಗಿರುವ ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾ ಎನ್ನುವುದು ಬರೀ ಬುರುಡೆ ಮಾತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ತಿರುಗೇಟು ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹಲವು ಬ್ರಾಂಡ್‌ಗಳ ಹೆಸರಿನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿ ಆಗಿರುವ ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾ ಎನ್ನುವುದು ಬರೀ ಬುರುಡೆ ಮಾತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ತಿರುಗೇಟು ನೀಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರೀನ್ ಸಿಟಿ, ಐಟಿ-ಬಿಟಿ ಸಿಟಿ, ಸಿಲಿಕಾನ್ ಸಿಟಿ ಹೀಗೆ ಹಲವು ಹೆಸರುಗಳಿಂದ ಖ್ಯಾತಿ ಹೊಂದಿದ್ದು, ಅವರಿಗೆ ಬೆಂಗಳೂರಿನ ಇತಿಹಾಸವೇ ಗೊತ್ತಿದ್ದಂತೆ ಕಾಣುತ್ತಿಲ್ಲ ಎಂದು ಆಪಾದಿಸಿದ ಅವರು, ಬೆಂಗಳೂರಿನ ಬಗ್ಗೆ ಪ್ರಧಾನಿಗೆ ಕನಿಷ್ಟ ಜ್ಞಾನವೂ ಇದ್ದಂತಿಲ್ಲ ಎಂದು ಜರಿದರು.

ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ನಿಜ. ಕೂಡಲೇ ಅದಕ್ಕೆ ಸರ್ಕಾರ ಪರಿಹಾರ ಕ್ರಮ ಕೈಗೊಂಡಿದೆ. ಈ ವಿಷಯದಲ್ಲಿ ಪ್ರಧಾನಿ ಹೇಳುವಂತೆ ಟ್ಯಾಂಕರ್ ಮಾಫಿಯಾ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬ್ರಾಂಡ್ ಬೆಂಗಳೂರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಕ್ಕಾಗಿಯೇ ಕಾಂಗ್ರೆಸ್ ಸರ್ಕಾರ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಪ್ರಧಾನಿಗೆ ರಾಜ್ಯದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಮೇಕೆದಾಟು ಬಳಿ ಜಲಾಶಯ ನಿರ್ಮಾಣಕ್ಕೆ ಅನುಮತಿ ನೀಡಲಿ ಎಂದು ಸವಾಲು ಹಾಕಿದರು.

ಲೋಕಸಭೆ ಚುನಾವಣೆ ಕುರಿತು ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪರ ಉತ್ತಮ ವಾತಾವರಣ ಇದೆ. ಇದುವರೆಗೆ ಕಾಂಗ್ರೆಸ್ 20 ಸ್ಥಾನ ಗೆಲ್ಲುವ ವಿಶ್ವಾಸ ಇತ್ತು. ಈಗ ಆ ವಿಶ್ವಾಸ ನೂರ್ಮಡಿಗೊಂಡಿದ್ದು, ಇದೀಗ ರಾಜ್ಯದ 28 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ದುರಾಡಳಿತದಿಂದ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೂ ಕೇಂದ್ರದ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಬರ ವಿಷಯದಲ್ಲಿ ತಾರತಮ್ಯ ಮುಂದುವರಿದಿದೆ. ರಾಜ್ಯದ 7 ಕೋಟಿ ಜನರು ಇದ್ದು, ಅದರಲ್ಲಿ 5 ಕೋಟಿ ಜನ ರೈತರಿದ್ದಾರೆ. ಅವರ ಬಗ್ಗೆ ಕೇಂದ್ರಕ್ಕೆ ಕಾಳಜಿಯೇ ಇಲ್ಲ. ₹18 ಸಾವಿರ ಕೋಟಿ ಬರ ಪರಿಹಾರ ಕೊಡಬೇಕಿದ್ದ ಕೇಂದ್ರ ಸರ್ಕಾರ ಚುನಾವಣೆ ಕಾರಣದಿಂದ ಕೇವಲ ₹ 3 ಸಾವಿರ ಕೋಟಿ ಕೊಟ್ಟು ಕೈ ತೊಳೆದುಕೊಂಡಿದೆ. ರಾಜ್ಯದ 25 ಜನ ಬಿಜೆಪಿ ಸಂಸದರು ಇದ್ದರೂ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ದೂರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯಕುಮಾರ ಸೊರಕೆ ಮಾತನಾಡಿ, ಕಾಂಗ್ರೆಸ್ ಪಕ್ಷ ಯುವಕರಿಗೆ ಆದ್ಯತೆ ನೀಡುತ್ತಿಲ್ಲ ಎನ್ನುವ ಆಪಾದನೆ ಇದೆ. ಆದರೆ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಪಕ್ಷ 6 ಜನ ಮಹಿಳೆಯರಿಗೆ ಅದರಲ್ಲಿಯೂ ಯುವಕರಿಗೆ ಟಿಕೆಟ್ ನೀಡುವ ಮೂಲಕ ಆರೋಪ ಮುಕ್ತವಾಗಿದೆ ಎಂದರು.

ದೇಶದಲ್ಲಿ ಬಿಜೆಪಿಯಿಂದ ವಿರೋಧ ಪಕ್ಷಗಳನ್ನು ದಮನ ಮಾಡುವ ಕೆಲಸ ನಡೆದಿದೆ. ಪ್ರಜಾಪ್ರಭುತ್ವ ಅಸ್ತ್ರಗಳನ್ನು ಮನಬಂದಂತೆ ಬಳಕೆ ಮಾಡುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿನ ತಾರತಮ್ಯ ಸರಿಪಡಿಸಬೇಕಿದೆ. ಅದಕ್ಕಾಗಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಬೇಕಿದೆ. ಹೆಚ್ಚಿರುವ ನಿರುದ್ಯೋಗ, ಬಡತನ ನಿಯಂತ್ರಣ ಮಾಡಬೇಕಿದೆ. ಸದ್ಯ ದೇಶದಲ್ಲಿ 19 ಕೋಟಿ ಜನ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೆ ಬದುಕು ಸಾಗಿಸುವಂತಾಗಿದೆ. ಇದೆಲ್ಲ ಬಿಜೆಪಿಯವರ ಕೊಡುಗೆ ಎಂದು ಆರೋಪಿಸಿದ ಅವರು, ಬಿಜೆಪಿಗರ ನೀತಿಯಿಂದ ರೋಸಿಹೋಗಿದ್ದಾರೆ. ಹಾಗಾಗಿ ಕೇಂದ್ರದಲ್ಲಿ ಈ ಬಾರಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಎಸ್.ಕೆ. ಯಡಹಳ್ಳಿ, ನಾಗರಾಜ ಹದ್ಲಿ, ಆರ್.ಎಲ್. ಕಟಗೇರಿ, ಈಶ್ವರ ಕೋನಪ್ಪನವರ, ಶ್ರೀನಿವಾಸಗೌಡ ಗೌಡರ ಮತ್ತಿತರರು ಇದ್ದರು.