ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಡಪೀಡಿತ ಎಂದು ಘೋಷಿಸಲಾದ ನಗರ ಜಿಲ್ಲೆಯ ಐದು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನತೆಗೆ ಕುಡಿವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಕ್ರಮ ವಹಿಸಲು ಬೆಂಗಳೂರು ನಗರ ಉಸ್ತುವಾರಿ ಕಾರ್ಯದರ್ಶಿ ಟಿ. ಕೆ. ಅನಿಲ್ ಕುಮಾರ್ ಸೂಚಿಸಿದ್ದಾರೆ.
ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬರ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು. ನಗರ ಜಿಲ್ಲೆಯ 84 ಗ್ರಾಮ ಪಂಚಾಯಿತಿ ಪೈಕಿ 44 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
10 ಖಾಸಗಿ ಬೋರ್‌ವೆಲ್ ಗುರುತಿಸಿ ಸ್ಥಳೀಯ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ನೀರಿನ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈಮಲ್ಯ ಅಧಿಕಾರಿ ಮಾಹಿತಿ ನೀಡಿದರು.
ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ 21 ವಾರಗಳಿಗೆ ಸಾಕಾಗುವಷ್ಟು ಮೇವನ್ನು ಸಂಗ್ರಹಿಸಲಾಗಿದೆ ಹಾಗೂ ಹೆಸರಘಟ್ಟದ ಜಾನುವಾರು ಸಂವರ್ಧನ ಕ್ಷೇತ್ರದಲ್ಲಿ 35 ಎಕರೆ ಪ್ರದೇಶದಲ್ಲಿ ಮೇವು ಬೆಳೆಸಲಾಗುತ್ತಿದೆ.
20 ಎಕರೆ ಪ್ರದೇಶದಲ್ಲಿ ಸೋರಗಂ ಮೇವನ್ನು ಬೆಳೆಯಲು ವ್ಯವಸ್ಥೆ ಮಾಡಲಾಗಿದೆ. ಈವರೆಗೆ 12,877 ಮೇವಿನ ಬೀಜದ ಮಿನಿ ಕಿಟ್ ವಿತರಿಸಲಾಗಿದ್ದು, 5300 ಮಿನಿ ಕಿಟ್ ಬೇಡಿಕೆ ಇದೆ ಎಂದು ಪಶುಸಂಗೊಪನೆ ಇಲಾಖೆ ಅಧಿಕಾರಿ ತಿಳಿಸಿದರು.
ಜಿಲ್ಲಾಧಿಕಾರಿ ಕೆ. ಎ. ದಯಾನಂದ, ಜಿಲ್ಲಾ ಪಂಚಾಯತ್ ಸಿಇಒ ಕಾಂತರಾಜು ಪಿ.ಎಸ್. ಸೇರಿ ಇತರ ಅಧಿಕಾರಿಗಳಿದ್ದರು.