ಸಾರಾಂಶ
ದರೋಜಿ ಕರಡಿಧಾಮ 8272.8 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದೆ. ಬಿಲಿಕಲ್ಲು ಅರಣ್ಯ ಪ್ರದೇಶ ಹಾಗೂ ಬುಕ್ಕಸಾಗರ ಅರಣ್ಯ ಪ್ರದೇಶದಲ್ಲಿ ವ್ಯಾಪಿಸಿದೆ.
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ಭೀಕರ ಬರಗಾಲದಿಂದ ದರೋಜಿ, ಗುಡೇಕೋಟೆ ಕರಡಿಧಾಮಗಳ ಕರಡಿಗಳಿಗೆ ನೀರು ದೊರೆಯದಂತಾಗಿದೆ. ಹಾಗಾಗಿ ಅರಣ್ಯ ಇಲಾಖೆ ರೈತರ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪಡೆದು, ಟ್ಯಾಂಕರ್ ಮೂಲಕ ಕೆರೆಗಳಿಗೆ ನೀರು ಒದಗಿಸುತ್ತಿದೆ. ಕರಡಿಗಳು ಬೆಳೆಗಳನ್ನು ಹಾಳು ಮಾಡುತ್ತವೆ ಎಂದು ದೂರು ನೀಡುವ ರೈತರೇ ಈಗ ಕರಡಿಗಳ ನೆರವಿಗೆ ಧಾವಿಸಿದ್ದಾರೆ. ದರೋಜಿ ಕರಡಿ ಧಾಮದಲ್ಲಿರುವ ಕರಡಿಗಳು ಭಾರೀ ಬಿಸಿಲಿನ ಹೊಡೆತಕ್ಕೆ ತತ್ತರಿಸುತ್ತಿವೆ. ಈ ಕರಡಿಗಳಿಗಾಗಿ ಧಾಮದಲ್ಲಿ ಸಣ್ಣ ಕೆರೆಗಳನ್ನು ನಿರ್ಮಿಸಲಾಗಿದೆ. ಹಳ್ಳ, ಕೊಳ್ಳಗಳು ಕೂಡ ಇವೆ. ಆದರೆ, ಈಗ ದರೋಜಿ ಕರಡಿಧಾಮದಲ್ಲಿನ ಕೆರೆಗಳಲ್ಲೂ ನೀರು ಇಲ್ಲದಾಗಿದೆ. ಮಳೆ ನೀರಿನಲ್ಲಿ ಸಂಗ್ರಹವಾದ ನೀರು ಬತ್ತಲಾರಂಭಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ 30 ಕೆರೆಗಳಿಗೆ ಟ್ಯಾಂಕರ್‌ಗಳಿಂದ ನೀರು ಪೂರೈಸುತ್ತಿದೆ.ದರೋಜಿ ಕರಡಿಧಾಮ 8272.8 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದೆ. ಬಿಲಿಕಲ್ಲು ಅರಣ್ಯ ಪ್ರದೇಶ ಹಾಗೂ ಬುಕ್ಕಸಾಗರ ಅರಣ್ಯ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಧಾಮದಲ್ಲಿ 80ಕ್ಕೂ ಅಧಿಕ ಕರಡಿಗಳಿವೆ ಎಂದು ಅಂದಾಜಿಸಲಾಗಿದೆ. ಇನ್ನು ಗುಡೇಕೋಟೆ ಧಾಮವು 38.48 ಕಿ.ಮೀ. ಪ್ರದೇಶ ವ್ಯಾಪ್ತಿ ಹೊಂದಿದ್ದು, 35ಕ್ಕೂ ಹೆಚ್ಚು ಕರಡಿಗಳು ಈ ಭಾಗದಲ್ಲಿವೆ ಎಂದು ಅಂದಾಜಿಸಲಾಗಿದೆ
ಕರಡಿಧಾಮದಲ್ಲಿನ ಕರಡಿಗಳು ಬೇಸಿಗೆಯಲ್ಲಿ ನೀರಿಗಾಗಿ ನಾಡು ಸೇರಬಾರದು ಎಂದು ಅರಣ್ಯ ಇಲಾಖೆ ಧಾಮಗಳಲ್ಲೇ ಅಲ್ಲಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ ನೀರನ್ನು ಒದಗಿಸುತ್ತಿದೆ. ಇನ್ನು ಉಭಯ ಕರಡಿ ಧಾಮಗಳಲ್ಲಿರುವ ಕೆರೆಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುತ್ತಿದೆ.ಸೋಲಾರ್ ಪಂಪ್‌ಸೆಟ್ ಬಳಕೆ:
ದರೋಜಿ ಕರಡಿ ಧಾಮದಲ್ಲಿ ಮೂರು ಬೋರ್‌ವೆಲ್‌ಗಳ ಪಂಪ್‌ಸೆಟ್‌ಗಳನ್ನು ಸೋಲಾರ್ ವಿದ್ಯುತ್‌ನಿಂದ ಬಳಕೆ ಮಾಡಲಾಗುತ್ತಿದೆ. ಈ ಮೂರು ಬೋರ್‌ವೆಲ್‌ಗಳ ನೀರನ್ನು ಟ್ಯಾಂಕರ್‌ಗಳ ಮೂಲಕ ಕೆರೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನು ದರೋಜಿ ಕರಡಿಧಾಮದ ಅಕ್ಕಪಕ್ಕದಲ್ಲಿರುವ ಹತ್ತಾರು ರೈತರ ಖಾಸಗಿ ಬೋರ್‌ವೆಲ್‌ಗಳಿಂದಲೂ ನೀರು ಪಡೆದು ಕೆರೆಗಳಿಗೆ ನೀರು ಒದಗಿಸಲಾಗುತ್ತಿದೆ. ರೈತರು ಟ್ರ್ಯಾಕ್ಟರ್‌ಗಳಿಗೆ ಅಳವಡಿಕೆ ಮಾಡಿರುವ ಟ್ಯಾಂಕರ್‌ಗಳ ಮೂಲಕವೇ ದರೋಜಿ ಕರಡಿಧಾಮದ 30 ಕೆರೆಗಳಿಗೆ ನೀರು ಪೂರೈಸುತ್ತಿದ್ದಾರೆ.ಗುಡೇಕೋಟೆಯಲ್ಲೂ ನೀರು ಪೂರೈಕೆ:
ಇನ್ನು ಕೂಡ್ಲಿಗಿಯ ಗುಡೇಕೋಟೆ ಕರಡಿಧಾಮದಲ್ಲೂ ಟ್ಯಾಂಕರ್‌ಗಳ ಮೂಲಕವೇ 27 ಕೆರೆಗಳಿಗೆ ನೀರು ಪೂರೈಸಲಾಗುತ್ತಿದೆ. ಧಾಮದಲ್ಲಿ ಐದು ಬೋರ್‌ವೆಲ್‌ಗಳ ಪಂಪ್‌ಸೆಟ್‌ಗಳನ್ನು ಸೋಲಾರ್ ವಿದ್ಯುತ್‌ನಿಂದ ಬಳಸಲಾಗುತ್ತಿದೆ. ಇನ್ನು ರೈತರಿಂದ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ. ರೈತರೇ ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡುತ್ತಿದ್ದಾರೆ.ದರೋಜಿ, ಗುಡೇಕೋಟೆಯ ಕರಡಿಧಾಮಗಳ ಕರಡಿಗಳಿಗೆ ನೀರು, ಆಹಾರದ ಸಮಸ್ಯೆ ಉಂಟಾಗದಂತೆ ಇಲಾಖೆ ಕ್ರಮ ವಹಿಸಬೇಕು. ಬೇಸಿಗೆಯಲ್ಲಿ ನೀರಿನ ಅಭಾವ ಇರುವುದರಿಂದ ಏಪ್ರಿಲ್, ಮೇ, ಜೂನ್ ತಿಂಗಳವರೆಗೆ ನೀರಿನ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಕರಡಿಗಳು ನೀರು, ಆಹಾರ ಅರಸಿ ಊರುಗಳತ್ತ ಬಾರದಂತೆ ಕ್ರಮ ವಹಿಸಬೇಕು ಎಂದು ವನ್ಯಜೀವಿ ಪ್ರೇಮಿಗಳು ಒತ್ತಾಯಿಸಿದ್ದಾರೆ.ದರೋಜಿ, ಗುಡೇಕೋಟೆ ಕರಡಿಧಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಇರುವುದು ವಾಸ್ತವ. ಆದರೆ, ಈಗ ಈ ಎರಡು ಧಾಮಗಳಲ್ಲಿ ರೈತರಿಂದ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ಟ್ಯಾಂಕರ್ ಮೂಲಕ ಕೆರೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ನೀರಿನ ತೊಟ್ಟಿ ನಿರ್ಮಿಸಿ ನೀರು ಪೂರೈಸಲಾಗುತ್ತಿದೆ. ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎನ್ನುತ್ತಾರೆ ಡಿಎಫ್‌ಒ ಆರ್ಸನಲ್.