ಬಾಡುತ್ತಿರುವ ಬೆಳೆಗೆ ಟ್ಯಾಂಕರ್‌ ನೀರಿನ ಆಸರೆ

| Published : Dec 18 2023, 02:00 AM IST

ಸಾರಾಂಶ

ಇನ್ನೂ ಕೆಲ ರೈತರು ಬಾವಿ ಹಾಗೂ ಬೋರ್‌ವೆಲ್ ನೀರಿನಿಂದ ಆಸರೆ ಪಡೆದು ಬೆಳೆಗಳನ್ನು ತಮ್ಮ ಕೈಗೆ ಪಡೆದುಕೊಳ್ಳಲು ನಿತ್ಯ ಸರ್ಕಸ್ ಮಾಡುತ್ತಿದ್ದಾರೆ.ನೀರು ಸ್ಥಗಿತ:

ಕುರುಗೋಡು: ಸಮೀಪದ ಜ್ವಲಾಬೆಂಚಿ ಗ್ರಾಮದಲ್ಲಿ ಬಾಡುತ್ತಿರುವ ಮೆಣಸಿನಕಾಯಿ ಬೆಳೆಗೆ ಟ್ಯಾಂಕರ್‌ ಮೂಲಕ ನೀರುಣಿಸಲಾಗುತ್ತಿದೆ.

ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ದಿನದಿಂದ ದಿನಕ್ಕೆ ಜಲಮೂಲಗಳು ಬತ್ತುತ್ತಿವೆ. ಈಗಾಗಲೇ ಎಚ್ಎಲ್‌ ಕಾಲುವೆಗೆ ನೀರು ಸ್ಥಗಿತಗೊಂಡಿದ್ದರಿಂದ ಕಾಲುವೆ ಭಾಗದ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಟ್ರ್ಯಾಕ್ಟರ್ ನೀರಿನ ಟ್ಯಾಂಕ್‌ನಿಂದ ನೀರು ತಂದು ಬೆಳೆಗಳಿಗೆ ಸಿಂಪರಣೆ ಮಾಡಲು ಮುಂದಾಗಿದ್ದಾರೆ.

ಕಾಲುವೆ ಭಾಗದಲ್ಲಿ ಮೆಣಿಸಿನಕಾಯಿ, ಜೋಳ, ಮೆಕ್ಕೆಜೋಳ, ಭತ್ತ ಸೇರಿ ಅನೇಕ ಬೆಳೆಗಳು ಕಟಾವು ಹಂತಕ್ಕೆ ಬಂದಿರುವ ಸಂದರ್ಭದಲ್ಲಿ ಕಾಲುವೆಗೆ ನೀರು ಸ್ಥಗಿತಗೊಂಡ ಪರಿಣಾಮ ಬೆಳೆಗಳಿಗೆ ನೀರು ಉಣಿಸುವುದು ಕಷ್ಟಕರವಾಗಿದೆ.

ತಾಲೂಕಿನ ಜ್ವಲಾಬೆಂಚಿ ಗ್ರಾಮದ ರೈತ ಪಾಲಾಕ್ಷಿ 4 ಎಕರೆ ಜಮೀನಿನಲ್ಲಿ ಮೆಣಸಿನ ಕಾಯಿ ಬಿತ್ತನೆ ಮಾಡಿದ್ದು, ಈ ಗಿಡಗಳಲ್ಲಿ ಕಾಯಿ ಬಿಡುವ ಹಂತದಲ್ಲಿವೆ. ನೀರಿಲ್ಲದೆ ಬೆಳೆ ಒಣಗಿ ಹೋಗುತ್ತಿರುವ ಕಾರಣ ಬೆಳೆ ಉಳಿಸಿಕೊಳ್ಳಲು ಬಾಡಿಗೆ ರೂಪದಲ್ಲಿ ಟ್ರ್ಯಾಕ್ಟರ್‌ ಟ್ಯಾಂಕ್‌ನಿಂದ ನೀರು ತುಂಬಿಕೊಂಡು ಬಂದು ಬೆಳೆಗಳಿಗೆ ಸಿಂಪರಣೆ ಮಾಡುತ್ತಿದ್ದಾರೆ.

ಟ್ರ್ಯಾಕ್ಟರ್ ನೀರಿನ ಟ್ಯಾಂಕ್‌ನ ಒಂದು ದಿನದ ಬಾಡಿಗೆ ₹4000. ಒಂದು ಟ್ರಿಪ್ ನೀರು ತುಂಬಿಸಿಕೊಂಡು ಬರುವುದಕ್ಕೆ ₹100 ವೆಚ್ಚ, 1 ಎಕರೆಗೆ 30ರಿಂದ 40 ಟ್ಯಾಂಕರ್ ನೀರು ಸಿಂಪರಣೆ ಮಾಡುತ್ತಿದ್ದಾರೆ. 1 ಎಕರೆಗೆ ಟ್ರ್ಯಾಕ್ಟರ್ ಬಾಡಿಗೆ, ಡೀಸೆಲ್, ಕೂಲಿ ಕಾರ್ಮಿಕರು ಸೇರಿ ಒಟ್ಟು ₹8ರಿಂದ ₹10 ಸಾವಿರ ಖರ್ಚು ಮಾಡಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಇನ್ನೂ ಕೆಲ ರೈತರು ಬಾವಿ ಹಾಗೂ ಬೋರ್‌ವೆಲ್ ನೀರಿನಿಂದ ಆಸರೆ ಪಡೆದು ಬೆಳೆಗಳನ್ನು ತಮ್ಮ ಕೈಗೆ ಪಡೆದುಕೊಳ್ಳಲು ನಿತ್ಯ ಸರ್ಕಸ್ ಮಾಡುತ್ತಿದ್ದಾರೆ.ನೀರು ಸ್ಥಗಿತ:

4 ಎಕರೆ ತುಂಬಾ ಮೆಣಸಿನಕಾಯಿ ಬಿತ್ತನೆ ಮಾಡಿದ್ದೇನೆ. ಸದ್ಯ ಕಾಲುವೆಗೆ ನೀರು ಸ್ಥಗಿತಗೊಂಡಿರುವುದರಿಂದ ಸರಿಯಾಗಿ ಬೆಳೆಗಳಿಗೆ ನೀರು ಇಲ್ಲದೆ ಒಣಗುತ್ತಿವೆ. ಆದ್ದರಿಂದ ಟ್ರ್ಯಾಕ್ಟರ್‌ ಟ್ಯಾಂಕರ್‌ನಿಂದ ನೀರುತಂದು ಬೆಳೆಗಳಿಗೆ ಹಾಕಲಾಗುತ್ತಿದೆ ಎಂದರು ರೈತ ಪಾಲಾಕ್ಷಿ.