ಹಗರಣಕ್ಕೆ ಸಂಬಂಧಿಸಿದಂತೆ 32 ಜನರಿಗೆ ಕೊಪ್ಪಳ ಸಹಕಾರಿ ಇಲಾಖೆಯ ಸಹಾಯಕ ನಿಬಂಧಕರು ನೋಟಿಸ್ ಜಾರಿ ಮಾಡಿದ್ದು, ತನಿಖೆಗೆ ಸಹಕರಿಸುವಂತೆ ಸೂಚಿಸಿದ್ದಾರೆ.
ರಾಮಮೂರ್ತಿ ನವಲಿ ಗಂಗಾವತಿ
ಇಲ್ಲಿಯ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಲ್ಲಿ (ಟಿಎಪಿಸಿಎಂಎಸ್) ಭಾರಿ ಭ್ರಷ್ಟಾಚಾರ ನಡೆದಿದ್ದು, ಸಹಕಾರ ಇಲಾಖೆ ಚುರುಕಿನ ತನಿಖೆ ಆರಂಭಿಸಿದೆ.ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಂಘದಲ್ಲಿ ₹1.22 ಕೋಟಿ ಕಬಳಿಕೆಯಾಗಿದ್ದು, ಆಡಿಟ್ ವರದಿ ಆದರಿಸಿ ದೂರು ದಾಖಲಾಗಿರುವುದು ರೈತ ಸಮುದಾಯ ಮತ್ತು ಸಂಘದ ಪೇರುದಾರರು ಬೆಚ್ಚಿ ಬೀಳುವಂತಾಗಿದೆ.
ಈ ಹಗರಣಕ್ಕೆ ಸಂಬಂಧಿಸಿದಂತೆ 32 ಜನರಿಗೆ ಕೊಪ್ಪಳ ಸಹಕಾರಿ ಇಲಾಖೆಯ ಸಹಾಯಕ ನಿಬಂಧಕರು ನೋಟಿಸ್ ಜಾರಿ ಮಾಡಿದ್ದು, ತನಿಖೆಗೆ ಸಹಕರಿಸುವಂತೆ ಸೂಚಿಸಿದ್ದಾರೆ.ಏನಿದು ಭ್ರಷ್ಟಾಚಾರ? ಕಳೆದ ಮೂರು ವರ್ಷಗಳಿಂದ ಸಹಕಾರಿ ಸಂಘದ ಗೋದಾಮಿನಲ್ಲಿ ಗೊಬ್ಬರ ದಾಸ್ತಾನು ಅವಧಿ ಮೀರಿದ ಮೇಲೆ ಮಾರಾಟ ಮತ್ತು ಮಾರಾಟ ಮಾಡಿದ ಹಣ ಸಂಘಕ್ಕೆ ಜಮಾಯಿಸದೇ ದುರುಪಯೋಗ ಮಾಡಿರುವುದು ಬೆಳಕಿಗೆ ಬಂದಿದೆ. 11 ಅಂಶಗಳ ಕುರಿತು ಕಾಯ್ದೆ 1959ರ ಕಲಂ 64ರ ಅಡಿಯಲ್ಲಿ ಸಮಗ್ರ ತನಿಖೆ ನಡೆದಿದ್ದು, ಮಳಿಗೆಗಳ ಬಾಡಿಗೆ ಸೇರಿದಂತೆ ವಿವಿಧ ವಸ್ತುಗಳ ಮಾರಾಟದಲ್ಲಿ ಭ್ರಷ್ಟಾಚಾರ ನಡೆದಿದೆ. ಅಲ್ಲದೇ ಉಳೇನೂರು ಗ್ರಾಮದ ಶ್ರೀ ಚೆನ್ನಬಸವೇಶ್ವರ ಏತ ನೀರಾವರಿ ಸಹಕಾರ ಸಂಘ ಸ್ಥಗಿತಗೊಂಡಿದ್ದರೂ ಇದರ ಹೆಸರಿನಲ್ಲಿ 14,36,180 ಮೊತ್ತದ ಗೊಬ್ಬರ ಉದ್ರಿ ರೂಪದಲ್ಲಿ ಸರಬರಾಜು ಮಾಡಿರುವುದು ಭ್ರಷ್ಟಾಚಾರ ನಡೆದಿರುವುದಕ್ಕೆ ಸಾಕ್ಷಿಯಾಗಿದೆ.
ಅಲ್ಲದೇ ಸಂಘದ ಆವರಣದಲ್ಲಿರುವ ರೈಸ್ ಮಿಲ್ ಮತ್ತು ಮಳಿಗೆಗಳ ಬಾಡಿಗೆ ಪಡೆಯುವಲ್ಲಿ ವಿಫಲವಾಗಿದ್ದು. ಬಸ್ ನಿಲ್ದಾಣ ಬಳಿ ಇರುವ ಮಳಿಗೆಗಳ ಲೆಕ್ಕ ಪತ್ರ ಇಲ್ಲದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.ಈಗಾಗಲೇ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಲ್ಲಿ ಭಾರಿ ಭ್ರಷ್ಟಾಚಾರಕ್ಕೆ ಕಾರಣರಾಗಿದ್ದಾರೆನ್ನುವ ಹಿನ್ನೆಲೆ ಸಹಕಾರ ನಿಬಂಧಕರಿಂದ ಅಂತಿಮ ನೋಟಿಸ್ ಜಾರಿ ಮಾಡಿ ಇದಕ್ಕೆ ವರದಿ ನೀಡುವಂತೆ ತನಿಖಾಧಿಕಾರಿಗಳು ಸೂಚನೆ ನೀಡಿದ್ದಾರೆ. ಸಂಘದಲ್ಲಿರುವ ಸಿಇಓ, ವ್ಯವಸ್ಥಾಪಕರು, ಸಿಬ್ಬಂದಿ ಈ ಹಿಂದೆ ಅಧಿಕಾರದಲ್ಲಿದ್ದ ನಿರ್ದೇಶಕರುಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಈ ಬಗ್ಗೆ ಕೊಪ್ಪಳ ಸಹಕಾರ ಇಲಾಖೆಯಿಂದ ತನಿಖೆ ನಡೆದಿದ್ದು, ಸಂಪೂರ್ಣ ತನಿಖೆಯಿಂದ ಭ್ರಷ್ಟಾಚಾರ ನಡೆದಿರುವುದು ಸಾಬೀತಾದರೆ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವದಕ್ಕೆ ಸಹಕಾರ ಇಲಾಖೆ ಮುಂದಾಗಿದೆ.ಗಂಗಾವತಿ ಒಕ್ಕಲತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವದು ಆಡಿಟ್ ವರದಿಯಿಂದ ತಿಳಿದು ಬಂದಿದ್ದು, ಸಂಘದಲ್ಲಿ ₹1.22 ಕೋಟಿ ಕಬಳಿಕೆಯಾಗಿರುವ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ತನಿಖೆ ನಡೆದಿದ್ದು, ಜಿಲ್ಲಾ ಸಹಕಾರಿ ಇಲಾಖೆಯ ಉಪ ನಿಬಂಧಕರಿಗೆ ವರದಿ ಸಲ್ಲಿಸಲಾಗುತ್ತದೆ. ತಪ್ಪಿತಸ್ಛರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುತ್ತದೆ ಎಂದು ಸಹಕಾರ ಸಂಘದ ಸಹಾಯಕ ನಿಬಂಧಕ ಕೊಪ್ಪಳ ತನಿಖಾಧಿಕಾರಿ ಮಲ್ಲಯ್ಯ ತಿಳಿಸಿದ್ದಾರೆ.