ಸಾರಾಂಶ
ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನಾದ್ಯಂತ ಮುಂಗಾರು ಹಂಗಾಮಿನಲ್ಲಿ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಂದಿದೆ. ಆದ್ದರಿಂದ ಬಿತ್ತನೆ ಕಾರ್ಯ ಶೇ.95ರಷ್ಟು ಮುಗಿದಿದೆ. ಈ ಸಂದರ್ಭ ಬೆಳೆಗೆ ಯೂರಿಯಾ ಗೊಬ್ಬರ ಅಗತ್ಯವಾಗಿ ಹಾಕಬೇಕಾಗಿದೆ. ಪರಿಣಾಮ ಯೂರಿಯಾ ರಸಗೊಬ್ಬರಕ್ಕೆ ಎಲ್ಲಿಲ್ಲದ ಬೇಡಿಕೆ ಉಂಟಾಗಿದೆ. ಆದ್ದರಿಂದ ಹೊನ್ನಾಳಿ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಯೂರಿಯಾವನ್ನು ಶುಕ್ರವಾರ ಪೊಲೀಸ್ ಬಂದೋಬಸ್ತ್‌ನಲ್ಲಿ ರೈತರಿಗೆ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನಾದ್ಯಂತ ಮುಂಗಾರು ಹಂಗಾಮಿನಲ್ಲಿ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಂದಿದೆ. ಆದ್ದರಿಂದ ಬಿತ್ತನೆ ಕಾರ್ಯ ಶೇ.95ರಷ್ಟು ಮುಗಿದಿದೆ. ಈ ಸಂದರ್ಭ ಬೆಳೆಗೆ ಯೂರಿಯಾ ಗೊಬ್ಬರ ಅಗತ್ಯವಾಗಿ ಹಾಕಬೇಕಾಗಿದೆ. ಪರಿಣಾಮ ಯೂರಿಯಾ ರಸಗೊಬ್ಬರಕ್ಕೆ ಎಲ್ಲಿಲ್ಲದ ಬೇಡಿಕೆ ಉಂಟಾಗಿದೆ. ಆದ್ದರಿಂದ ಹೊನ್ನಾಳಿ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಯೂರಿಯಾವನ್ನು ಶುಕ್ರವಾರ ಪೊಲೀಸ್ ಬಂದೋಬಸ್ತ್‌ನಲ್ಲಿ ರೈತರಿಗೆ ವಿತರಿಸಲಾಯಿತು.ಟಿಎಪಿಸಿಎಂಸ್‌ನಲ್ಲಿದ್ದ 150 ಟನ್ ಯೂರಿಯಾ ರಸಗೊಬ್ಬರವನ್ನು ರೈತರಿಗೆ ವಿತರಿಸಲಾಯಿತು. ಮತ್ತೆ 100 ಟನ್ ಯೂರಿಯಾಕ್ಕೆ ಇಂಡೆಂಟ್ ಹಾಕಿದ್ದೇವೆ. ಯೂರಿಯಾ ಬಿಡುಗಡೆಯಾದ ಕೂಡಲೇ ಮತ್ತೆ ರೈತರಿಗೆ ವಿತರಿಸುತ್ತೇವೆ ಎಂದು ಟಿಎಪಿಸಿಎಂಸ್ ಕಾರ್ಯದರ್ಶಿ ಮುರುಗೇಶ್ ತಿಳಿಸಿದರು.
ನ್ಯಾನೊ ಯೂರಿಯಾ ಬಳಸಿ:ಈ ಸಂದರ್ಭ ತಾಲೂಕು ಸಹಾಯಕ ಕೃಷಿ ನಿರ್ದೇಶಕ ವಿಶ್ವನಾಥ್ ಮಾತನಾಡಿ, ಶೀತದಿಂದಾಗಿ ಬೇರುಗಳ ಬೆಳವಣಿಗೆ ಕುಂಠಿತವಾಗಿ ಗಿಡಗಳ ಬೆಳೆವಣಿಗೆಯಲ್ಲೂ ಏರುಪೇರಾಗಿ ಇಳುವರಿ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಆದ್ದರಿಂದ ರೈತರು ಯೂರಿಯಾ ಕೊಡುವ ಬದಲಾಗಿ ನ್ಯಾನೊ ಯೂರಿಯಾ ಹಾಕಿದರೆ ಇಳುವರಿ ಉತ್ತಮವಾಗುತ್ತದೆ. ನ್ಯಾನೊ ಯೂರಿಯಾ ಬಳಸಿದರೆ ಮಣ್ಣು ಫಲವತ್ತತೆಗೆ ಕೂಡ ಸಹಕಾರಿ ಆಗುತ್ತದೆ. ಇಳುವರಿಯೂ ಹೆಚ್ಚಾಗುತ್ತದೆ. ನ್ಯಾನೊ ಯೂರಿಯಾ ಬಗ್ಗೆ ರೈತರು ತಪ್ಪು ಕಲ್ಪನೆ ಹೊಂದುವುದು ಬೇಡ ಎಂದು ಮನವಿ ಮಾಡಿದರು.
ಅವಳಿ ತಾಲೂಕಿನಲ್ಲಿ ಮೆಕ್ಕೆಜೋಳ ಬೆಳೆದಿರುವ ಸವಳಂಗ, ನ್ಯಾಮತಿ, ಹೊನ್ನಾಳಿ ಹಾಗೂ ಇನ್ನಿತರ ಗ್ರಾಮೀಣ ಪ್ರದೇಶಗಳಿಗೆ ಕೃಷಿ ಕೇಂದ್ರಗಳ ಮುಖಾಂತರ 158 ಟನ್ ಯೂರಿಯಾ ರಸಗೊಬ್ಬರ ವಿತರಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.- - -
-26ಎಚ್.ಎಲ್.ಐ2.ಜೆಪಿಜಿ:ಹೊನ್ನಾಳಿ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಯೂರಿಯಾ ರಸಗೊಬ್ಬರ ಖರೀದಿಸಲು ನೂರಾರು ರೈತರು ಮುಗಿಬಿದ್ದಿರುವುದು.