ಸಾರಾಂಶ
ಬುಧವಾರ ಮಾಧ್ವಮಠಗಳಲ್ಲಿ ತಪ್ತಮುದ್ರಧಾರಣೆ ನಡೆಯಿತು. ಸಾವಿರಾರು ಭಕ್ತರು ಪರ್ಯಾಯ ಮಠಾಧೀಶರಿಂದ ಮುದ್ರೆಗಳನ್ನು ಹಾಕಿಸಿಕೊಂಡರು.
ಕನ್ನಡಪ್ರಭ ವಾರ್ತೆ ಉಡುಪಿ
ಆಷಾಢ ಮಾಸದ ಪ್ರಥಮ ಏಕಾದಶಿಯಂದು ಸಂಪ್ರದಾಯದಂತೆ, ಬುಧವಾರ ಮಾಧ್ವಮಠಗಳಲ್ಲಿ ತಪ್ತಮುದ್ರಾಧಾರಣೆ ನಡೆಯಿತು. ಉಡುಪಿಯ ಕೃಷ್ಣಮಠದಲ್ಲಿ ಪರ್ಯಾಯ ಪೀಠಾಧೀಶ, ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಕ್ತರಿಗೆ ತಪ್ತ ಮುದ್ರೆಗಳನ್ನು ಹಾಕಿದರು.ಬೆಳಗ್ಗೆ 8 ಗಂಟೆಗೆ ಕೃಷ್ಣಮಠದಲ್ಲಿ ನಡೆದ ಗಣಹೋಮದಲ್ಲಿ ಕಾಯಿಸಲಾದ ಲೋಹದ ಶಂಖ ಮತ್ತು ಚಕ್ರಗಳ ಮುದ್ರೆಗಳನ್ನು ಶ್ರೀಗಳು ಮೊದಲು ತಾವು ಧರಿಸಿಕೊಂಡು, ನಂತರ ಭಕ್ತರಿಗೆ ಧಾರಣೆ ಮಾಡಿದರು. ಆಬಾಲವೃದ್ಧರಾದಿಯಾಗಿ ಸಾವಿರಾರು ಮಂದಿ ಭಕ್ತರು, ಪರ್ಯಾಯ ಮಠಾಧೀಶರಿಂದ ಮುದ್ರೆಗಳನ್ನು ಹಾಕಿಸಿಕೊಂಡರು.
ಈ ಮದ್ರೆಗಳನ್ನು ಹಾಕಿಸಿಕೊಳ್ಳುವುದರಿಂದ ಪಾಪಗಳು ಸುಟ್ಟುಹೋಗುತ್ತವೆ ಎನ್ನುವ ನಂಬಿಕೆ ಇದೆ. ಆದರೆ ಈ ಮುದ್ರೆಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಮಳೆಗಾಲದಲ್ಲಿ ಉಂಟಾಗಬಹುದಾಗ ಅನೇಕ ಕಾಯಿಲೆಗಳು ಈ ಮುದ್ರೆಯಿಂದ ದೂರವಾಗುತ್ತವೆ ಎನ್ನುವ ವೈಜ್ಞಾನಿಕ ಹಿನ್ನೆಲೆಯೂ ಈ ಸಂಪ್ರದಾಯಕ್ಕಿದೆ.ಅದಮಾರು ಮಠದ ಹಿರಿಯ ಶ್ರೀಪಾದರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೇಪಾದರು ಬೆಂಗಳೂರಿನ ಗೋವರ್ಧನ ಕ್ಷೇತ್ರದ ಪುತ್ತಿಗೆ ಶಾಖಾ ಮಠದಲ್ಲಿ ನೆರೆದ ಭಕ್ತರಿಗೆ ತಪ್ತಮುದ್ರಾಧಾರಣೆ ನಡೆಸಿದರು. ಸಂಜೆ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದರು ಮುದ್ರಾಧಾರಣೆ ನಡೆಸಿದರು.