ಸಾರಾಂಶ
ರಾಮನಗರ: ತಾಲೂಕಿನ ಅಣ್ಣಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ನೂತನ ಕಾರ್ಯದರ್ಶಿಯಾಗಿ ನಿತ್ಯಾನಂದ ಅವರನ್ನು ನೇಮಕ ಮಾಡಿರುವ ವಿಚಾರ ತಾರಕಕ್ಕೇರಿದೆ.
ಸಂಘದ ಕಚೇರಿ ಎದುರು ಭಾನುವಾರವಷ್ಟೆ ಹಾಲು ಸುರಿದು ಪ್ರತಿಭಟನೆ ನಡೆಸಿದ್ದ ಗ್ರಾಮಸ್ಥರು, ಸೋಮವಾರವೂ ತಮ್ಮ ಚಳವಳಿ ಮುಂದುವರೆಸಿದರು. ರಾಸುಗಳ ಸಮೇತ ರಾಮನಗರದ ಐಜೂರು ವೃತ್ತಕ್ಕೆ ಆಗಮಿಸಿದ ಗ್ರಾಮಸ್ಥರು, ಕ್ಯಾನ್ ಗಳಲ್ಲಿ ತಂದಿದ್ದ ಹಾಲನ್ನು ಸುರಿದು ಪ್ರತಿಭಟಿಸಿದರಲ್ಲದೆ, ಬಮೂಲ್ ನಿರ್ದೇಶಕ ಪಿ.ನಾಗರಾಜು ಭಾವಚಿತ್ರಕ್ಕೆ ಪೊರಕೆ ಮತ್ತು ಚಪ್ಪಲಿ ಏಟು ನೀಡಿ ಆಕ್ರೋಶ ಹೊರ ಹಾಕಿದರು.ಆನಂತರ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣಕ್ಕೆ ತೆರಳಿ ಧರಣಿ ನಡೆಸಿ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ನೇಮಿಸಿರುವ ಕಾರ್ಯದರ್ಶಿ ನಿತ್ಯಾನಂದನ ನೇಮಕ ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಗ್ರಾಮಸ್ಥರ ಪ್ರತಿಭಟನೆಗೆ ಜೆಡಿಎಸ್ ಮುಖಂಡರು ಸಾಥ್ ನೀಡಿದರು.
ಕಾರ್ಯದರ್ಶಿ ನೇಮಕದ ಹಿಂದೆ ಬಮೂಲ್ ನಿರ್ದೇಶಕ ಪಿ.ನಾಗರಾಜ್ ಕೈವಾಡವಿದೆ. ಸಂಘದ ಆಡಳಿತದಲ್ಲಿ ಮೂಗು ತೂರಿಸುತ್ತಿದ್ದಾರೆ. ಈ ಕೂಡಲೇ ಹೊಸ ಕಾರ್ಯದರ್ಶಿ ನೇಮಕವನ್ನು ಕೂಡಲೇ ರದ್ದುಪಡಿಸಬೇಕು. ಸಂಘದ ಪ್ರಭಾರ ಕಾರ್ಯದರ್ಶಿ ರಾಜಕುಮಾರ್ ಅವರನ್ನೇ ಮುಂದುವರಿಸಬೇಕು. ಸಂಘಕ್ಕೆ ಚುನಾವಣೆ ಘೋಷಿಸಬೇಕು. ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಆಡಳಿತ ಮಂಡಳಿಯೇ ಕಾರ್ಯದರ್ಶಿ ನೇಮಕ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಈ ಹಿಂದೆ ಸಂಘದಲ್ಲಿ ಲಕ್ಷಾಂತರ ರುಪಾಯಿ ಹಣ ದುರುಪಯೋಗ ಮಾಡಿಕೊಂಡಿದ್ದ ವ್ಯಕ್ತಿಯ ಸಂಬಂಧಿಯನ್ನೇ ಕಾರ್ಯದರ್ಶಿಯಾಗಿ ನೇಮಿಸಿದ್ದರು. ಈಗಿನ ನಿತ್ಯಾನಂದ ಅವರ ನೇಮಕದ ಹಿಂದೆ, ಅಂದಿನ ಅಕ್ರಮ ಮುಚ್ಚಿ ಹಾಕುವ ಸಂಚಿದೆ. ಇದರಿಂದಾಗಿ ಸಂಘದ ಆಡಳಿತ ಹಾದಿ ತಪ್ಪಲಿದೆ ಎಂದು ದೂರಿದರು.
ಪ್ರತಿಭಟನಾ ಮೆರವಣಿಗೆ:ಐಜೂರು ವೃತ್ತದಲ್ಲಿ ವಾಹನ ತಡೆದು ಪ್ರತಿಭಟಿಸಿದ ಬಳಿಕ ಐಜೂರು ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಅವರನ್ನು ಭೇಟಿ ಮಾಡಿ, ಕಾರ್ಯದರ್ಶಿ ನೇಮಕ ರದ್ದುಗೊಳಿಸಿ ಸಂಘಕ್ಕೆ ಚುನಾವಣೆ ಘೋಷಿಸುವಂತೆ ಮನವಿ ಸಲ್ಲಿಸಿದರು.
ಗ್ರಾಮಸ್ಥರು ಮನವಿ ಸಲ್ಲಿಸಿದ ಬೆನ್ನಲ್ಲೇ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರು, ಬಿಗುವಿನ ವಾತಾವರಣವಿರುವ ಗ್ರಾಮದಲ್ಲಿ ಎರಡೂ ಗುಂಪುಗಳ ನಡುವೆ ಶಾಂತಿಸಭೆ ನಡೆಸುವಂತೆ ರಾಮನಗರ ತಹಸೀಲ್ದಾರ್ ಮತ್ತು ಸಹಕಾರ ಸಂಘಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪ್ರತಿಭಟನೆಯಲ್ಲಿ ಗ್ರಾಮದ ಶಿವರಾಜು, ನಾಗರಾಜು, ರಮೇಶ್, ಜಯರಾಮಯ್ಯ, ನಾಗೇಶ್, ಪುಟ್ಟಬೈರಯ್ಯ, ಅರ್ಜುನ್, ಲಕ್ಷ್ಮಮ್ಮ, ಚಂದ್ರ ಜೆಡಿಎಸ್ ಮುಖಂಡರಾದ ರಾಜಶೇಖರ್, ಸಬ್ಬಕೆರೆ ಶಿವಲಿಂಗಯ್ಯ, ರೈಡ್ ನಾಗರಾಜು, ರವಿ, ಜಯಕುಮಾರ್, ಕೆಂಪರಾಜು, ಕಿರಣ್ ಮತ್ತಿತರರು ಭಾಗವಹಿಸಿದ್ದರು.ಬಾಕ್ಸ್. ..............
ಜಿಲ್ಲಾಕೇಂದ್ರದಲ್ಲೂ ಪ್ರತಿಭಟನೆಅಣ್ಣಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಘದ ಎದುರು ಕೆಲವರು ಹಾಲು ಸುರಿದು ಪ್ರತಿಭಟನೆ ನಡೆಸಿದ್ದರು. ಈ ವೇಳೆ, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಬಂದಿದ್ದ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಇದಾದ ನಂತರ ಸೋಮವಾರ ಗ್ರಾಮಸ್ಥರು ಜಿಲ್ಲಾಕೇಂದ್ರಕ್ಕೆ ಬಂದು ಪ್ರತಿಭಟನೆ ನಡೆಸಿದ್ದಾರೆ.
1ಕೆಆರ್ ಎಂಎನ್ 8,9.ಜೆಪಿಜಿರಾಮನಗರದ ಐಜೂರು ವೃತ್ತದಲ್ಲಿ ಗ್ರಾಮಸ್ಥರು ಹಾಲು ಸುರಿದು ಪ್ರತಿಭಟನೆ ನಡೆಸಿದರು.