ಬಸವಣ್ಣನನ್ನು ಜೀವಂತವಾಗಿರಿಸಿದ ತರಳಬಾಳು ಮಠ

| Published : Feb 08 2025, 12:34 AM IST

ಸಾರಾಂಶ

ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಡಾ.ಮಹಾಂತೇಶ್‌ ಬಿರಾದಾರ ಹೇಳಿಕೆ

ಕನ್ನಡಪ್ರಭ ವಾರ್ತೆ ಸಿರಿಗೆರೆ

12ನೇ ಶತಮಾನದ ಬಸವಣ್ಣನವರನ್ನು ಜೀವಂತವನ್ನಾಗಿ ಇಡಲು ತರಳಬಾಳು ಮಠದ ಶಿವಕುಮಾರ ಸ್ವಾಮೀಜಿ ಮತ್ತು ಶಿವಮೂರ್ತಿ ಸ್ವಾಮೀಜಿ ಕೊಡುಗೆ ಅಪಾರವಾಗಿದೆ ಎಂದು ವಿಜಯಪುರ ಫ.ಗು.ಹಳಕಟ್ಟಿ ಸಂಶೋಧನಾ ಸಂಸ್ಥೆಯ ಕಾರ್ಯದರ್ಶಿ ಡಾ. ಮಹಾಂತೇಶ್‌ ಬಿರಾದಾರ ಹೇಳಿದರು.

ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಬಸವಣ್ಣನನ್ನು ಎತ್ತುಗಳು ಎಂದು ಭಾವಿಸಿದ್ದ ಜನರಿಗೆ ಬಸವಣ್ಣ ಓರ್ವ ವ್ಯಕ್ತಿಯಾಗಿದ್ದ ಎಂದು ತೋರಿಸಿದ ಶ್ರೀಗಳು ಈ ಮಠದವರು ಎಂದರು.

ಈಗ ಬಸವಣ್ಣನನ್ನು ಇಲ್ಲವಾಗಿಸುವ ಕೆಲಸ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಅದರ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಬಸವಣ್ಣನನ್ನು ಇಲ್ಲವಾಗಿಸಲು ಖೊಟ್ಟಿ ವಚನಗಳ ರಚನೆ ಆಗುತ್ತಿದೆ ಇದರ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದರು.

ವಿದ್ವಾಂಸ ಎಂ.ಎಂ.ಕಲಬುರ್ಗಿ ಕೊಲೆ ಆರೋಪಿಗಳಿಗೆ ಹುಬ್ಬಳ್ಳಿಯ ಮಠದಲ್ಲಿ ಪ್ರವೇಶ ದೊರೆತದ್ದು, ಅಲ್ಲಿನ ಗದ್ದುಗೆಗೆ ಅವಕಾಶ ನೀಡಿದ್ದು, ಹುಬ್ಬಳ್ಳಿಯಲ್ಲಿ ಬ್ಯಾನರು ಕಟ್ಟಿ ಸ್ವಾಗತಿಸಿದ್ದು ನಮ್ಮ ಸಮಾಜ ಎತ್ತ ಸಾಗುತ್ತಿದೆ ಎನ್ನುವ ಪ್ರತೀಕವಾಗಿದೆ. ಇಂತಹ ಘಟನೆಯನ್ನು ಸಹೃದಯಿಗಳು, ಮಠಾಧೀಶರು ಪ್ರತಿಭಟಿಸದೇ ಇರುವುದು ನೋವಿನ ಸಂಗತಿ ಎಂದರು.

ಉತ್ತರ ಭಾರತದಲ್ಲಿ ಕುಂಭ ಮೇಳ ನಡೆಯುತ್ತಿದೆ. ಅದರ ಬಗ್ಗೆ ರಾಷ್ಟ್ರದ ಎಲ್ಲಾ ಭಾಷೆಯ ಮಾಧ್ಯಗಳು ಇಡೀ ದಿನ ಪ್ರಸಾರ ಮಾಡುತ್ತಿವೆ. ಆದರೆ ವೈಚಾರಿಕ ತತ್ವಗಳನ್ನು ಸಾರುವ, ಮಾನವಧರ್ಮದ ಸಾರವನ್ನು ಹೇಳುವ ತರಳಬಾಳು ಹುಣ್ಣಿಮೆ ಕಾರ್ಯಕ್ರಮಗಳನ್ನು ನಮ್ಮ ಮಾಧ್ಯಮದ ಕಣ್ಣುಗಳಿಗೆ ಬೀಳುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರು ಬೇಲಿಮಠದ ಸ್ವಾಮೀಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಚಿತ್ರದುರ್ಗ ಇತಿಹಾಸ ತಜ್ಞ ಬಿ.ರಾಜಶೇಖರಪ್ಪ, ಮೈಸೂರಿನ ಸಂಶೋದಕ ರಾಜಶೇಖ ಜಮದಂಡಿ, ನಾಸಿಕ್‌ ವಿಜ್ಞಾನಿ ಶಿವಾನಂದ ಕಣವಿ, ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಷಡಕ್ಷರಿ, ಹಸ್ತಪ್ರತಿ ತಜ್ಞ ಅಶೋಕ್‌ ದೊಮ್ಮಲೂರು ಭಾಗಿಯಾಗಿದ್ದರು.