ಸಾರಾಂಶ
ಕನ್ನಡಪ್ರಭ ವಾರ್ತೆ ಸಿರಿಗೆರೆ
ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿರುವ ಭದ್ರಾ ಮೇಲ್ದಂಡೆ ಯೋಜನೆಯ ಯಶಸ್ವಿಗೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಭರವಸೆಯ ಬೆಳಕಾಗಿದ್ದಾರೆ. ಜಿಲ್ಲೆಯಲ್ಲಿ ಸಮೃದ್ಧ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಿದ ಆಧುನಿಕ ಭಗೀರಥ ಅವರಾಗಿದ್ದಾರೆ ಎಂದು ಜಿಲ್ಲೆಯ ರೈತ ಸಂಘಗಳ ಒಕ್ಕೂಟಗಳ ಸದಸ್ಯರು ತಮ್ಮ ಒಮ್ಮತಾಭಿಪ್ರಾಯಗಳನ್ನು ಮಂಡಿಸಿದ್ದಾರೆ.ಭದ್ರಾ ಮೇಲ್ಡಂಡೆ ಯೋಜನೆಯ ಕಾಮಗಾರಿ ತೀವ್ರಗೊಳಿಸಲು ಹಾಗೂ ಯೋಜನೆಯಲ್ಲಿ ಕೈಬಿಟ್ಟಿರುವ ಕೆರೆಗಳಿಗೆ ನೀರು ತುಂಬಿಸಲು ಜಿಲ್ಲೆಯ ರೈತ ಒಕ್ಕೂಟಗಳು ಆಯೋಜಿಸಿದ್ದ ರೈತರ ನಡೆ ಸಿರಿಗೆರೆ ಮಠದ ಕಡೆ ಕಾರ್ಯಕ್ರಮದಲ್ಲಿ ಭಾಗಿಯಾದ ಬಹುತೇಕ ರೈತ ಮುಖಂಡರು ತಮ್ಮ ಅಳಲು ಹಂಚಿಕೊಂಡರು.
ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 200 ಮಠಾಧೀಶರಿದ್ದು, ಅವರು ಭದ್ರಾ ಮೇಲ್ಡಂಡೆ ವಿಚಾರವಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು. ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ತಾಲೂಕಿನ ಜನರು ನೀರಾವರಿ ಯೋಜನೆಗಳು ಇಲ್ಲದೆ ನೊಂದಿದ್ದೇವೆ. ನಮ್ಮ ತಾಲೂಕುಗಳಲ್ಲಿ 1500 ಅಡಿ ಕೊಳವೆ ಬಾವಿಯಲ್ಲೂ ನೀರು ಸಿಗುತ್ತಿಲ್ಲ. ಈ ತಾಲೂಕುಗಳ ಯುವಕರು ಯಾರಿಗೂ ಹೇಳದೆ ಪಟ್ಟಣಗಳನ್ನು ಸೇರಿಕೊಂಡಿದ್ದಾರೆ. ರೈತರು ದುರಂತದಲ್ಲಿ ಬೇಯುತ್ತಿದ್ದೇವೆ ಎಂದು ನಿಜಲಿಂಗಪ್ಪ ಹೇಳಿದರು.ಭದ್ರಾ ಮೇಲ್ದಂಡೆ ಕಾಮಗಾರಿ ಆರಂಭವಾಗಿ 16 ವರ್ಷಗಳು ಕಳೆದಿವೆ. 21 ಸಾವಿರ ಕೋಟಿ ಯೋಜನೆಯಲ್ಲಿ ಇದುವರೆಗೆ ಕೇವಲ 10,580 ಕೋಟಿ ಖರ್ಚು ಮಾಡಲಾಗಿದೆ. ಗುತ್ತಿಗೆದಾರರಿಗೆ ೨೩೨೯ ಕೋಟಿ ರೂ. ಬಾಕಿ ಪಾವತಿ ಮಾಡಬೇಕಿದೆ. ಗುತ್ತಿಗೆದಾರರು ಗುಳೆ ಹೋಗುತ್ತಿದ್ದಾರೆ. ಕೇಂದ್ರ ಸರ್ಕಾಋವು 2022 ರಲ್ಲಿ 52,000 ಕೋಟಿ ರು. ಹಣಕಾಸು ನೆರವು ಘೋಷಣೆ ಮಾಡಿ ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿತ್ತು. ಕ್ರಮೇಣ ಈ ಯೋಜನೆ ಕೈಬಿಟ್ಟಿತು. ಇದೊಂದು ದುರಂತದ ವಿಷಯ ಎಂದು ತಿಮ್ಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀಗಳು ಕೈಗೆತ್ತಿಕೊಂಡ ಭರಮಸಾಗರ ಏತ ನೀರಾವರಿಯ 42 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಕೇವಲ 2 ವರ್ಷಗಳಲ್ಲಿ ಆಗಿದೆ. ಭದ್ರಾ ಮೇಲ್ದಂಡೆ ವಿಚಾರವಾಗಿ ರಾಜ್ಯವು ಕೇಂದ್ರದತ್ತ, ಕೇಂದ್ರವು ರಾಜ್ಯದತ್ತ ಬೆರಳು ಮಾಡುತ್ತಾ ಕುಳಿತಿವೆ. ಆದ್ದರಿಂದ ರೈತ ಸಮುದಾಯ ತರಳಬಾಳು ಶ್ರೀಗಳ ಮೊರೆ ಹೊಕ್ಕಿದ್ದೇವೆ. ಅಧಿಕಾರಿಗಳ ನಿಧಾನ ಪ್ರವೃತ್ತಿ, ಕಾಮಗಾರಿ ನಿಧಾನ, ಪರಿಹಾರ ಹಣದ ವ್ಯತ್ಯಾಸ ಕುರಿತು ಶ್ರೀಗಳಲ್ಲಿ ಅರಿಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಕುನುಗಲಿ ಷಣ್ಮುಖಪ್ಪ ಹೇಳಿದರು.ಹಿರಿಯ ಪತ್ರಕರ್ತ, ಭದ್ರಾ ಮೇಲ್ದಂಡೆ ಯೋಜನೆಯ ಹೋರಾಟಗಾರ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಶ್ರೀಗಳು ಭರಮಸಾಗರ ಭಾಗದ 42, ಜಗಳೂರು ಭಾಗದ 53 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಮಂಜೂರು ಮಾಡಿಸಿ ಅನುಷ್ಠಾನಗೊಳಿಸಿದ್ದಾರೆ. ಕೇಂದ್ರ ಸರ್ಕಾರ ಬಹಿರಂಗವಾಗಿಯೇ ಘೋಷಣೆ ಮಾಡಡಿದ್ದ 52000 ಕೋಟಿ ರು.ಗಳ ಯೋಜನೆಯಿಂದ ಹಿಂದೆ ಸರಿದಿದೆ. ಶ್ರೀಗಳು ಸರ್ಕಾರದ ಮೇಲೆ ಒತ್ತಡ ತಂದು ಈ ಕೆಲಸ ಆಗುವಂತೆ ಮಾಡಬೇಕು ಎಂದರು.
ಈ ವೇಳೆ ಹೊಳಲ್ಕೆರೆಯ ಸನಾವುಲ್ಲಾ, ಭರಮಸಾಗರದ ಶಾಂತಾ ಅಶೋಕ್, ನಾಗರಾಜ್, ಶ್ರೀರಾಂಪುರದ ನಾಗರಾಜ್ ಮುಂತಾದವರು ಮಾತನಾಡಿದರು.