ಛಲ ಇದ್ದರೆ ಗುರಿ ಮುಟ್ಟಲು ಸಾಧ್ಯ: ಶಾಸಕ ಭೀಮಣ್ಣ ನಾಯ್ಕ

| Published : Feb 10 2024, 01:45 AM IST

ಛಲ ಇದ್ದರೆ ಗುರಿ ಮುಟ್ಟಲು ಸಾಧ್ಯ: ಶಾಸಕ ಭೀಮಣ್ಣ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೀಡೆಯ ಮಹತ್ವ ತಿಳಿದುಕೊಂಡು ಹೆಚ್ಚು ಒತ್ತು ಮತ್ತು ಸಹಕಾರ ನೀಡಬೇಕು. ಗ್ರಾಮೀಣ ಭಾಗದ ಅನೇಕ ಕ್ರೀಡೆಗಳು ನಶಿಸಿ ಹೋಗುತ್ತಿದೆ. ಅದನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಶಿರಸಿ:

ಕ್ರೀಡೆಯಲ್ಲಿಯೂ ಸೋಲು-ಗೆಲುವು ಸಹಜ. ಛಲವಿದ್ದರೆ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯ ಮಹತ್ವ ತಿಳಿದುಕೊಂಡು ಹೆಚ್ಚು ಒತ್ತು ಮತ್ತು ಸಹಕಾರ ನೀಡಬೇಕು. ಗ್ರಾಮೀಣ ಭಾಗದ ಅನೇಕ ಕ್ರೀಡೆಗಳು ನಶಿಸಿ ಹೋಗುತ್ತಿದೆ. ಅದನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದ ಅವರು, ಆರೋಗ್ಯದ ಸದೃಢತೆ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗುತ್ತದೆ ಎಂದರು.ಪ್ರತಿ ಹಳ್ಳಿಗಳಲ್ಲಿಯೂ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಆಗ ಹಳ್ಳಿಗಳು ಅಭಿವೃದ್ಧಿಯಾಗಲಿದೆ. ಗ್ರಾಮೀಣ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ತಾಲೂಕಿನ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಬೆಳಗಿಸಬೇಕು ಎಂದು ಹೇಳಿದರು.ಸಹಾಯಕ ಆಯುಕ್ತೆ ಅಪರ್ಣಾ ರಮೇಶ ಮಾತನಾಡಿ, ಕ್ರೀಡೆಯಿಂದ ಶಿಸ್ತುಬದ್ಧ ಜೀವನ ನಡೆಸಲು ಸಾಧ್ಯವಿದೆ. ಟ್ರೋಫಿ, ಮೆಡಲ್ ಬಗ್ಗೆ ಚಿಂತಿಸದೆ ಉತ್ಸಾಹದಿಂದ ಕ್ರೀಡೆಯಿಂದ ಪಾಲ್ಗೊಳ್ಳಬೇಕು ಎಂದರು.

ತಾಪಂ ಇಒ ಸತೀಶ ಹೆಗಡೆ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಬಸವರಾಜ ಜಾಡರ್, ಬಿಇಒ ನಾಗರಾಜ ನಾಯ್ಕ, ದೈಹಿಕ ಶಿಕ್ಷಣ ಜಿಲ್ಲಾಮಟ್ಟದ ಅಧಿಕಾರಿ ಪ್ರಕಾಶ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವಿ. ಗಣೇಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ತಾಲೂಕು ಕ್ರೀಡಾಧಿಕಾರಿ ಕಿರಣಕುಮಾರ ನಾಯ್ಕ ನಿರೂಪಿಸಿ, ಸ್ವಾಗತಿಸಿದರು. ದೈಹಿಕ ಶಿಕ್ಷಕ ಪುಟ್ಟಯ್ಯ ಪ್ರತಿಜ್ಞಾ ವಿಧಿ ಬೋಧಿಸಿ, ವಂದಿಸಿದರು.ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ್ ಮಿಷನ್ ವಸ್ತು ಪ್ರದರ್ಶನವನ್ನು ಇದೇ ವೇಳೆ ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದರು.