ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 3939 ಪ್ರಕರಣಗಳ ಇತ್ಯರ್ಥಕ್ಕೆ ಗುರಿ

| Published : Oct 31 2024, 12:53 AM IST

ಸಾರಾಂಶ

ಚಿತ್ರದುರ್ಗ: ಡಿಸೆಂಬರ್ 14 ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ 44,917 ಪ್ರಕರಣಗಳ ಪೈಕಿ 3939 ಪ್ರಕರಣಗಳ ಇತ್ಯರ್ಥಕ್ಕೆ ಗುರಿ ನಿಗದಿಪಡಿಸಿಕೊಳ್ಳಲಾಗಿದೆ. ಈಗಾಗಲೇ 38 ಪಕ್ರರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ ತಿಳಿಸಿದರು.

ಚಿತ್ರದುರ್ಗ: ಡಿಸೆಂಬರ್ 14 ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ 44,917 ಪ್ರಕರಣಗಳ ಪೈಕಿ 3939 ಪ್ರಕರಣಗಳ ಇತ್ಯರ್ಥಕ್ಕೆ ಗುರಿ ನಿಗದಿಪಡಿಸಿಕೊಳ್ಳಲಾಗಿದೆ. ಈಗಾಗಲೇ 38 ಪಕ್ರರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ ತಿಳಿಸಿದರು.ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಗಾರರು ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭ ಹಾಗೂ ಶೀಘ್ರವಾಗಿ ಯಾವುದೇ ಶುಲ್ಕ, ಖರ್ಚು ವೆಚ್ಚವಿಲ್ಲದೇ ತೀರ್ಮಾನ ಮಾಡಿಕೊಳ್ಳಬಹುದು. ಕಳೆದ ಸೆಪ್ಟಂಬರ್ 14 ರಂದು ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲೆಯಲ್ಲಿ ಬಾಕಿ ಇದ್ದ 45,558 ಪ್ರಕರಣಗಳ ಪೈಕಿ 4146 ವ್ಯಾಜ್ಯ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ. ಈ ಮೂಲಕ ಶೇ.10 ಪ್ರಕರಣಗಳನ್ನು ಇತ್ಯರ್ಥ ಮಾಡುವ ಮೂಲಕ ನ್ಯಾಯಲಯದ ಮೇಲಿನ ಹೊರೆಯನ್ನು ತಗ್ಗಿಸಲಾಗಿದೆ ಎಂದರು.

ಲೋಕ ಅದಾಲತ್ ಬಳಿಕವೂ ಹೊಸ ಪ್ರಕರಣಗಳು ದಾಖಲಾಗಿದ್ದು, ಚಾಲ್ತಿ ಪ್ರಕರಣಗಳ ಸಂಖ್ಯೆ 44917ಕ್ಕೆ ಏರಿಕೆಯಾಗಿದೆ. ರಾಜಿ ಆಗಬಹುದಾದ 321, ಚೆಕ್ ಅಮಾನ್ಯದ 4775 ಬ್ಯಾಂಕ್ ವಸೂಲಾತಿ 1558, ಖಾಸಗಿ ಸಾಲ ವಸೂಲಾತಿ 688, ಅಪಘಾತದ 2561, ಆಸ್ತಿ ಪಾಲುಗಾರಿಕೆಯ 3809 ಹಾಗೂ ಜನನ ಮತ್ತು ಮರಣ ನೋಂದಣಿಗೆ ಸಂಬಂಧಿಸಿದ 1559 ಚಾಲ್ತಿ ಪ್ರಕರಣಗಳು ಜಿಲ್ಲೆಯಾದ್ಯಂತ ವಿವಿಧ ಹಂತದ ನ್ಯಾಯಾಲಯಗಳಲ್ಲಿವೆ ಎಂದು ಮಾಹಿತಿ ನೀಡಿದರು.

ಇದಲ್ಲದೇ ಅದಾಲತ್‌ನಲ್ಲಿ ಉದ್ಯೋಗ, ಕಾರ್ಮಿಕ, ವೇತನ, ವಿದ್ಯುತ್, ನೀರು ಇತರೆ ಸೇವಾ ಶುಲ್ಕದ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅವಕಾಶವಿದೆ. ಇದರರೊಂದಿಗೆ ನ್ಯಾಯಾಲಯದ ವ್ಯಾಜ್ಯದಲ್ಲಿರುವ ನಾನ್ ಕಾಂಪೌಡಬಲ್ ಹಾಗೂ ಗಂಭೀರ ತರದ ಅಪರಾಧಿಕ ಪ್ರಕರಣಗಳನ್ನು ಹೊರತು ಪಡಿಸಿ, ಇತರೆ ಪ್ರಕರಣಗಳನ್ನು ಬರುವ ಡಿಸೆಂಬರ್ 14 ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಮಾಡಿಕೊಳ್ಳಬಹುದು. ಕಕ್ಷಿದಾರರು ನೇರವಾಗಿ ಅಥವಾ ವಕೀಲರ ಮೂಲಕ ಲೋಕ ಅದಾಲತ್‌ನಲ್ಲಿ ಭಾಗವಹಿಸಬಹುದು ಎಂದರು. ಹಿಂದೂ ವಿವಾಹ ಕಾಯ್ದೆಯ ಕಲಂ 9 ಅಡಿ ಪತಿ ಅಥವಾ ಪತ್ನಿ ಜೊತೆಯಲ್ಲಿ ವಾಸಿಸಲು ದಾಖಲಿಸಿರುವ ಪ್ರಕರಣಗಳನ್ನು ಈ ಬಾರಿಯ ಲೋಕ ಅದಾಲತ್‌ನಲ್ಲಿ ಆದ್ಯತೆಯ ಮೇಲೆ ಬಗೆಹರಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಚಿಂತನೆ ನಡೆಸಲಾಗಿದೆ. ಜಿಲ್ಲಾದ್ಯಂತ ಇಂತಹ 181 ಪ್ರಕರಣಗಳು ನ್ಯಾಯಾಲಯಗಳ ಮುಂದಿವೆ. ಇದರಲ್ಲಿ ಚಿತ್ರದುರ್ಗ ನಗರಕ್ಕೆ ಸಂಬಂಧಿಸಿದ 71 ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು. ಇದರ ಅಂಗವಾಗಿ ಸಂಬಂಧ ಪಟ್ಟ ಪ್ರಕರಣಗಳ ವಕೀಲರು ಹಾಗೂ ಕಕ್ಷಿದಾರರೊಂದಿಗೆ ಸಮಾಲೋಚನೆ ಸಭೆ ನಡೆಸುವುದಾಗಿ ತಿಳಿಸಿದರು. ಸಾರ್ವಜನಿಕರು ಲೋಕ ಅದಾಲತ್ ಕುರಿತು ಹೆಚ್ಚಿನ ಪ್ರಶ್ನೆ ಮತ್ತು ಮಾಹಿತಿಗಾಗಿ ಬೇಕಾದಲ್ಲಿ ಇ-ಮೇಲ್ dlsachitradurga2@gmail.com ಹಾಗೂ ಸದಸ್ಯ ಕಾರ್ಯದರ್ಶಿಯವರ ಕಚೇರಿ ಮೊಬೈಲ್ ಸಂಖ್ಯೆ 9141193935 ಹಾಗೂ ದೂರವಾಣಿ ಸಂಖ್ಯೆ 08194-222322 ಕ್ಕೆ ಸಹ ಸಂಪರ್ಕಿಸಬಹುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಉಪಸ್ಥಿತರಿದ್ದರು.