ಸಾರಾಂಶ
ಬೆಟ್ಟದಪುರ ಸಮೀಪದ ಚಿಕ್ಕ ನೇರಳೆ, ಹಸುವಿನ ಕಾವಲು, ಚಪ್ಪರದಹಳ್ಳಿ, ಹಳೆಯೂರು, ಸುರಗಹಳ್ಳಿ, ಕೊಣಸೂರು, ಭುವನಹಳ್ಳಿ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳು ಮಳೆಯಿಂದ ಭಾರಿ ಅನಾಹುತ
ಕನ್ನಡಪ್ರಭ ವಾರ್ತೆ ಬೆಟ್ಟದಪುರ
ಪಿರಿಯಾಪಟ್ಟಣ ತಾಲೂಕಿನಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ಹಲವಾರು ಅನಾಹುತಗಳು ಸಂಭವಿಸಿದೆ.ಬೆಟ್ಟದಪುರ ಸಮೀಪದ ಚಿಕ್ಕ ನೇರಳೆ, ಹಸುವಿನ ಕಾವಲು, ಚಪ್ಪರದಹಳ್ಳಿ, ಹಳೆಯೂರು, ಸುರಗಹಳ್ಳಿ, ಕೊಣಸೂರು, ಭುವನಹಳ್ಳಿ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳು ಮಳೆಯಿಂದ ಭಾರಿ ಅನಾಹುತ ಸಂಭವಿಸಿದೆ.
ಮಳೆ ರೈತರಿಗೆ ಸಾರ್ವಜನಿಕರಿಗೆ ಸಂಕಷ್ಟವನ್ನೇ ತಂದೊಡಿದ್ದು, ಬೆಟ್ಟದಪುರ ಮತ್ತು ಕುಶಾಲನಗರ ರಾಜ್ಯ ಹೆದ್ದಾರಿಯಲ್ಲಿ ತರಿಕಲ್ಲು ಗ್ರಾಮದ ಕೆರೆಕೋಡಿ ಬಿದ್ದ ಕಾರಣ ಸಮೀಪವಿರುವ ರಾಮನಾಯಕ್ ಎಂಬವರ ಮನೆಗೆ ನೀರು ನುಗ್ಗಿ ಜಮೀನಲ್ಲಿ ಮೇಯುತಿದ್ದ ಮೂರು ಹಸುಗಳನ್ನು ಕೊಚ್ಚಿಕೊಂಡು ಹೋಗಿವೆ.ಅಲ್ಲದೆ ರಸ್ತೆಗಳು ಕೊಚ್ಚಿಕೊಂಡು ಹೋದ ಕಾರಣ ಅಂಬಲಾರೆ, ಹಾರನಹಳ್ಳಿ ಕೆರೆಯ ನೀರು ರಸ್ತೆ ಮೇಲೆ ಬಂದ ಕಾರಣ ರಸ್ತೆ ಸಂಪೂರ್ಣ ಹಾಳಾಗಿದೆ, ಅಲ್ಲದೆ ಗ್ರಾಮಗಳ ಸಂಪರ್ಕವೂ ಸಹ ಕಳೆದುಕೊಂಡಿದೆ.
ಸಮೀಪದ ಹಳಿಯೂರು ಗ್ರಾಮದ ಕೆರೆಗೆ ಕಟ್ಟಿದ್ದ ಚೆಕ್ ಡ್ಯಾಮ್ ಹೊಡೆದು ರಸ್ತೆ ತೋಟಗಳು ಹಾಗೂ ಜಮೀನುಗಳನ್ನು ಕೊಚ್ಚಿಕೊಂಡು ಹೋಗಿದೆ. ಅಲ್ಲೂ ಸಹ ರಸ್ತೆ ಕೊಚ್ಚಿ ಹೋಗಿದ್ದು, ಹಲವಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಘಟನಾ ನಡೆದ ಸ್ಥಳಕ್ಕೆ ತಾಲೂಕು ತಹಸೀಲ್ದಾರ್ ಸುರೇಂದ್ರ ಮೂರ್ತಿ, ಇಒ ಸುನಿಲ್ ಕುಮಾರ್, ಚಿಕ್ಕ ನೇರಳೆ ಪಿಡಿಒ ಮಂಜುನಾಥ್, ಕಂದಾಯ ನಿರೀಕ್ಷಕ ಆನಂದ್ ಗ್ರಾಮಗಳಿಗೆ ಭೇಟಿ ನೀಡಿ ಅನಾಹುತ ಮತ್ತು ಪ್ರವಾಪೀಡಿತ ಸ್ಥಳಗಳಿಗೆ ಭೇಟಿ ನೀಡಿ ವರದಿ ತಯಾರಿಸಿ, ರೈತರಿಗೆ ಮತ್ತು ಸಾರ್ವಜನಿಕರಿಗೆ ಪರಿಹಾರ ಒದಗಿಸಲಾಗುವುದೆಂದು ತಹಸೀಲ್ದಾರ್ ಸುರೇಂದ್ರ ಮೂರ್ತಿ ತಿಳಿಸಿದರು.ಕೊಚ್ಚಿ ಹೋದ ಜಾನುವಾರುಗಳಿಗಾಗಿ ಹುಡುಕಾಟ ನಡೆಸಲಾಗಿದೆ.---------------