ಬರ ನಿರ್ವಹಣೆ ಕುರಿತ ಟಾಸ್ಕ್‌ ಫೋರ್ಸ್‌ ಪ್ರಗತಿ ಪರಿಶೀಲನಾ ಸಭೆ

| Published : Feb 08 2024, 01:32 AM IST

ಸಾರಾಂಶ

ಹೊಸದುರ್ಗದ ತಾಪಂ ಸಭಾಂಗಣದಲ್ಲಿ ಶಾಸಕ ಬಿಜಿ ಗೋವಿಂದಪ್ಪ ಅಧ್ಯಕ್ಷತೆಯಲ್ಲಿ ಬರ ಪರಿಹಾರ ಕಾರ್ಯಗಳ ಟಾಸ್ಕ್‌ ಫೋರ್ಸ್‌ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಪಿಡಿಓಗಳ ಬಗ್ಗೆ ಯಾರೂ ನಿಮಗೆ ದೂರು ಹೇಳಲ್ವ. ಗ್ರಾಪಂಗಳಲ್ಲಿನ ಆಡಳಿತದ ಬಗ್ಗೆ ನಿಮಗೆ ಜವಬ್ದಾರಿ ಇಲ್ವಾ. ನಾನೇ ಸಾಕಷ್ಠು ಬಾರಿ ನಿಮಗೆ ಸೂಚನೆ ನೀಡಿದರೂ ನೀವು ನಿಗಾ ವಹಿಸಿದಂತೆ ಕಾಣುತ್ತಿಲ್ಲ. ಪಿಡಿಓಗಳ ಕೆಲಸವನ್ನು ಸರಿಯಾಗಿ ಮಾನಿಟರಿಂಗ್‌ ಮಾಡಿ ಎಂದು ಶಾಸಕ ಬಿಜಿ ಗೋವಿಂದಪ್ಪ ತಾಪಂ ಇಓ ಸುನಿಲ್‌ಕುಮಾರ್‌ ತಾಕೀತು ಮಾಡಿದರು.

ಪಟ್ಟಣದ ತಾಪಂ ಕಚೇರಿಯ ಸಭಾಂಗಣದಲ್ಲಿ ನಡೆದ ಬರ ನಿರ್ವಹಣೆ ಕಾರ್ಯಗಳ ಕುರಿತು ಟಾಸ್ಕ್‌ ಫೋರ್ಸ್‌ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಡಿನ ಜನಕ್ಕೆ ಕಷ್ಟ ಬಂದಿದೆ ಇಂದತಹ ಸಂದರ್ಬದಲ್ಲಿಯೂ ನೀವು ಸುಖ ಬಯಸುತ್ತೀರಾ. ನೀವು ಹೇಳಿದ್ದನ್ನು ಕೇಳಿಕೊಂಡು ಹೊಗುವುದಕ್ಕೆ ನಾನೇನು ದನ ಕಾಯಲು ಬಂದಿಲ್ಲ. ಪಿಡಿಓಗಳು ಹೇಳಿಕೆ ಮಾತು ಕೇಳುವುದನ್ನು ಬಿಟ್ಟು ಅಧಿಕಾರದಲ್ಲಿರುವವರ ಜೊತೆ ವಿಶ್ವಾಸದಿಂದ ಕಾರ್ಯ ನಿರ್ವಹಿಸಿ. ನಾನು ನಿಮ್ಮ ಗ್ರಾಪಂ ಕಚೇರಿಗೆ ಬರಬೇಕೆಂದು ಏನೂ ಇಲ್ಲಾ. ತಾಲೂಕಿನ 33 ಗ್ರಾಪಂಗಳಲ್ಲಿ ಪ್ರತಿ ದಿನಾ ಏನು ನಡೆಯುತ್ತದೆ ಎಂದು ಮಾಹಿತಿ ನನಗೆ ತಿಳಿಯುತ್ತದೆ. ಸಮಸ್ಯೆಯನ್ನು ಪರಿಹರಿಸಬೇಕೇ ಹೊರತು ಸಮಸ್ಯೆಯಿಂದ ನುಣುಚಿಕೊಳ್ಳಬಾರದು ಎಂದರು.

ಕೆಲವು ಗ್ರಾಮಗಳಲ್ಲಿ ಪಿಡಿಓಗಳು ಪ್ರತಿದಿನ ಕಚೇರಿಗಳಿಗೆ ಹೊಗುತ್ತಿಲ್ಲ ಎಂಬ ದೂರು ಗ್ರಾಮಸ್ಥರಿಂದ ಕೇಳಿ ಬರುತ್ತಿವೆ. ಪಿಡಿಓಗಳು ವರ್ತನೆ ಸರಿಪಡಿಸಿ ಪ್ರತಿದಿನ ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸೂಚಿಸಿ ನೀವೇ ಗ್ರಾಮಗಳಲ್ಲಿ ಸಮಸ್ಯೆಯಾಗಬೇಡಿ. ನೀವು ಮಾಡುವ ಸಮಸ್ಯೆಯಿಂದ ಜನ ದಂಗೇಳುತ್ತಾರೆ ಇದರಿಂದ ನೀವು ಬೈಸಿಕೊಳ್ಳುತ್ತೀರಾ ನಮ್ಮನ್ನೂ ಬೈಯ್ಯಿಸುತ್ತೀರಾ ಎಂದು ಅಸಮಾದಾನ ವ್ಯಕ್ತ ಪಡಿಸಿದರು.

ಇಂದಿನಿಂದ ಆಯಾ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಿಡಿಓಗಳು ಮತ್ತು ಇಂಜಿನಿಯರ್‌ಗಳು ಗ್ರಾಮಗಳಲ್ಲಿ ತೆರಳಿ ಹಾಲಿ ಇರುವ ಬೋರ್‌ವೆಲ್‌ಗಳ ನೀರಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಿ ವಾಸ್ತವ ಸ್ಥಿತಿಯ ಬಗ್ಗೆ ವರದಿ ನೀಡಿ ಎಂದು ಸೂಚಿಸಿ, ಜೆಜೆಎಂ ಯೋಜನೆಯಲ್ಲಿ ಮಾಡುತ್ತಿರುವ ಕೆಲಸ ಗುಣಮಟ್ಟದಲ್ಲಿ ದೂರುಗಳು ಕೇಳಿ ಬರುತ್ತಿವೆ. ಇಂಜಿನಿಯರ್‌ ಕೆಲಸದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಹಳ್ಳಿಗಳಲ್ಲಿ ಜೆಜೆಎಂನಲ್ಲಿ ನಡೆಸುವ ಕಾಮಾಗಾರಿಗಳ ನೀಲಿನಕ್ಷೆ ತಯಾರಿಸಬೇಕು. ಅಲ್ಲದೆ ಎಲ್ಲಾ ಮನೆಗಳಲ್ಲಿಯೂ ನೀರು ಸರಿಯಾಗಿ ಬರುವಂತಾಗಬೇಕು ಅಲ್ಲಿಯವರೆಗೂ ಯೋಜನೆಯನ್ನು ಹ್ಯಾಂಡ್‌ ಓವರ್‌ ಪಡೆಯಬಾರದು ಎಂದು ಇಂಜಿನಿಯರ್‌ಗಳಿಗೆ ತಾಕೀತು ಮಾಡಿದರು.

ಸಂವಿದಾನ ಜಾಗೃತಿ ರಥ:

ಅಂಬೇಡ್ಕರ್‌ ರವರ ಸಂವಿದಾನದ ಜಾಗೃತಿ ರಥಯಾತ್ರೆ ತಾಲೂಕಿಗೆ ಫೆ.13ಕ್ಕೆ ಹೊಸದುರ್ಗಕ್ಕೆ ಬರಲಿದ್ದು ಫೆ.18ರವರೆಗೆ ತಾಲೂಕಿನಲ್ಲಿ ಎಲ್ಲಾ ಗ್ರಾಪಂಗಳಿಗೂ ಭೇಟಿ ನೀಡಲಿದೆ. ಫೆ.18ರಂದು ಲಕ್ಕಿಹಳ್ಳಿಯಲ್ಲಿ ಕೊನೆಗೊಳ್ಳಲಿದ್ದು ಅಲ್ಲಿನ ಕಾರ್ಯಕ್ರಮಕ್ಕೆ ನಾನು ಬೇಟಿ ನೀಡುತ್ತೇನೆ ಉಳಿದ ಗ್ರಾಮಗಳಲ್ಲಿ ಆಯಾ ಗ್ರಾಪಂಗಳ ಪಿಡಿಓಗಳು ಯುವಕರನ್ನು ಹೆಚ್ಚಾಗಿ ಸೇರಿಸಿ ರಥಯಾತ್ರೆ ಯಶಸ್ಸಿಗೆ ಮುಂದಾಗಬೇಕು. ಈ ಕಾರ್ಯಕ್ರಮದ ಯಶಸ್ಸಿನಲ್ಲಿ ಲೋಪಗಳಾದರೆ ಆಯಾ ಪಿಡಿಓಗಳನ್ನೆ ಹೊಣೆಗಾರರನ್ನಾಗಿ ಮಾಡುತ್ತೇನೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ತಹಸೀಲ್ದಾರ್‌ ತಿರುಪತಿ ಪಾಟೀಲ್‌, ಪುರಸಭೆಯ ಮುಖ್ಯಾಧಿಕಾರಿ ತಿಮ್ಮರಾಜು ಸೇರಿ ಪಂಚಾಯತ್‌ ರಾಜ್‌, ಗ್ರಾಮೀನ ಕುಡಿಯುವ ನೀರು ಇಲಾಖೆಗಳ ಎಇಇಗಳು, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೆಶಕರುಗಳು, ಎಲ್ಲಾ ಉಪ ತಹಸೀಲ್ದಾರ್‌ಗಳು, ಕಂದಾಯ ಲೆಕ್ಕಾಧಿಕಾರಿಗಳು ಹಾಗೂ ಪಿಡಿಓಗಳು ಹಾಜರಿದ್ದರು.