ಸಾರಾಂಶ
ಕಲಘಟಗಿ:
ಪಟ್ಟಣದ ಹೊರವಲಯದ ಹುಬ್ಬಳ್ಳಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಬಳಿಯ ತಡಸ ಕ್ರಾಸ್ ಹತ್ತಿರ ಟಾಟ್ ಏಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಕಾರ್ಮಿಕ ಮಹಿಳೆ ಸ್ಥಳದಲ್ಲಿ ಮೃತಪಟ್ಟು ಹಲವರಿಗೆ ಗಂಭೀರ ಗಾಯವಾದ ಘಟನೆ ಬುಧವಾರ ಜರುಗಿದೆ.ತಾಲೂಕಿನ ಜಿನ್ನೂರು ಗ್ರಾಮದ ಬಸಮ್ಮ ವಾಲಿಕಾರ ಮೃತ ಕಾರ್ಮಿಕ ಮಹಿಳೆ. ಬುಧವಾರ ಬೆಳಗ್ಗೆ ಟಾಟಾ ಏಸ್‌ನಲ್ಲಿ ಮಹಿಳೆಯರನ್ನು ಕರೆದುಕೊಂಡು ತಾರಿಹಾಳ ಗಾರ್ಮೆಂಟ್ಸ್‌ಗೆ ತೆರಳುವಾಗ ತಡಸ ಕ್ರಾಸ್ ಬಳಿ ಹುಬ್ಬಳ್ಳಿಗೆ ತೆರಳುತ್ತಿದ್ದ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಟಾಟಾ ಏಸ್‌ನಿಂದ ಕೆಳಗೆ ಬಿದ್ದ ಬಸಮ್ಮ ಸ್ಥಳದಲ್ಲಿಯೇ ಮೃತಪಟ್ಟರೆ ಹಲವರಿಗೆ ಗಂಭೀರ ಗಾಯಗಳಾಗಿದ್ದು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ತಾಲೂಕಿನ ತಬಕದಹೊನ್ನಳ್ಳಿ, ಮಲಕನಕೊಪ್ಪ, ಮುಕ್ಕಲ, ಜಿನ್ನೂರ, ಮಡಕಿಹೊನ್ನಳ್ಳಿ ಇನ್ನುಳಿದ ಗ್ರಾಮಗಳ ಮಹಿಳೆಯರು ಗಾರ್ಮೆಂಟ್ಸ್‌ಗೆ ತೆರಳುತ್ತಿದ್ದು ಎಂದು ಹೇಳಲಾಗಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾಡ್ ಭೇಟಿ:ಅಪಘಾತದಲ್ಲಿ ಗಾಯಗೊಂಡು ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಗಾಯಾಳುಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ವೈದ್ಯರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಇದೇ ವೇಳೆ ತಿಳಿಸಿದ್ದಾರೆ.