ತೆರಿಗೆ ವಸೂಲಾತಿ ಶೇ. 100ರಷ್ಟಾದರೆ ಅಭಿವೃದ್ಧಿಗೆ ಅನುಕೂಲ

| Published : Feb 14 2025, 12:31 AM IST

ಸಾರಾಂಶ

ಮೂಲ ಮಾಲೀಕರು ಮಾತ್ರ ಪುರಸಭೆಗೆ ಕೇವಲ ಖಾಲಿ ಜಾಗದ ತೆರಿಗೆ ಕಟ್ಟುತ್ತಿದ್ದಾರೆ

ಮುಂಡರಗಿ: ವಿವಿಧ ಸರ್ಕಾರಿ ಇಲಾಖೆಗಳ ವಾಣಿಜ್ಯ ಮಳಿಗೆ, ಕಚೇರಿಗಳ ಕಟ್ಟಡಕ್ಕೆ ತೆರಿಗೆ ನಿಗದಿಪಡಿಸಿ, ಶೇ. 100 ತೆರಿಗೆ ವಸೂಲಾತಿ ಮಾಡಿದರೆ ಪಟ್ಟಣದ ಎಲ್ಲ 23 ವಾರ್ಡ್‌ಗಳ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ಪುರಸಭೆ ಸದಸ್ಯ ಲಿಂಗರಾಜಗೌಡ ಪಾಟೀಲ ಹೇಳಿದರು.

ಅವರು ಗುರುವಾರ ಮುಂಡರಗಿ ಪುರಸಭೆ ಸಭಾಭವನದಲ್ಲಿ ಪುರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪಟ್ಟಣದಲ್ಲಿರುವ ಅನೇಕ ಸರ್ಕಾರಿ ಇಲಾಖೆಗಳ ವಾಣಿಜ್ಯ ಕಟ್ಟಡಗಳಿಂದ ಸರಿಯಾದ ರೀತಿಯಲ್ಲಿ ತೆರಿಗೆ ವಸೂಲಾತಿಯಾಗುತ್ತಿಲ್ಲ. ಟ್ರೇಡ್ ಲೈಸೆನ್ಸ್‌ ಸರಿಯಾದ ರೀತಿಯಲ್ಲಿ ನವೀಕರಣ ಆಗುತ್ತಿಲ್ಲ. ಇದರಿಂದಲೂ ಪುರಸಭೆಗೆ ಹಾನಿಯಾಗುತ್ತಿದೆ. ಇಂತಹ ತೆರಿಗೆಗಳನ್ನು ನಿರ್ಲಕ್ಷಿಸುವುದರಿಂದ ಪುರಸಭೆಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಲಿದೆ ಎಂದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹ್ಮದ ರಫೀಕ್ ಮುಲ್ಲಾ, ಸದಸ್ಯ ನಾಗರಾಜ ಹೊಂಬಳಗಟ್ಟಿ ಮಾತನಾಡಿ, ಪಟ್ಟಣದಲ್ಲಿರುವ ಅನೇಕ ಮಾಲೀಕರ ಖಾಲಿ ಜಾಗಗಳನ್ನು ವಿವಿಧ ಉದ್ಯೋಗಗಳನ್ನು ಮಾಡುವವರಿಗೆ ಬಾಡಿಗೆ ರೂಪದಲ್ಲಿ ನೀಡುತ್ತಿದ್ದು, ಮೂಲ ಮಾಲೀಕರು ಮಾತ್ರ ಪುರಸಭೆಗೆ ಕೇವಲ ಖಾಲಿ ಜಾಗದ ತೆರಿಗೆ ಕಟ್ಟುತ್ತಿದ್ದಾರೆ. ಇದರಿಂದ ಪುರಸಭೆಗೆ ಹಾನಿಯುಂಟಾಗುತ್ತಿದೆ. ಆದ್ದರಿಂದ ಅಂತಹ ಬಾಡಿಗೆ ಕೊಟ್ಟಿರುವ ಜಾಗದ ಮಾಲೀಕರಿಂದ ಕಟ್ಟಡದಷ್ಟೇ ತೆರಿಗೆ ವಸೂಲಿ ಮಾಡಿದರೆ ಪುರಸಭೆಗೆ ದೊಡ್ಡಮಟ್ಟದ ಆದಾಯ ಬರಲಿದೆ ಎಂದು ಸಲಹೆ ನೀಡಿದರು. ಇದಕ್ಕೆ ಉಳಿದ ಸದಸ್ಯ ಧ್ವನಿಗೂಡಿಸಿದರು.

ಸದಸ್ಯ ನಾಗರಾಜ ಹೊಂಬಳಗಟ್ಟಿ ಮಾತನಾಡಿ, ಹೊಸ ಬಸ್ ನಿಲ್ದಾಣದ ಎದುರಿನಲ್ಲಿರುವ ಎಲ್ಲ ಮಳಿಗೆಗಳಿಗೆ ಇದುವರೆಗೂ ಇಲಾಖೆ ತೆರಿಗೆ ಕಟ್ಟುತ್ತಿಲ್ಲ. ಕೂಡಲೇ ತೆರಿಗೆ ನಿಗದಿಪಡಿಸಬೇಕು ಎಂದು ಸಲಹೆ ನೀಡಿದರು. ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಪುರಸಭೆ ಪಕ್ಕದಲ್ಲಿರುವ ಉದ್ಯಾನದಲ್ಲಿ ಗಿಡ-ಮರಗಳನ್ನು ಬೆಳೆಸಿ, ಅಲ್ಲಿ ಮಕ್ಕಳಿಗೆ ಆಟವಾಡಲು ಹಾಗೂ ನಿತ್ಯ ಹಿರಿಯ ನಾಗರಿಕರು ವಾಯುವಿಹಾರ ಮಾಡಲು ಅವಕಾಶ ಮಾಡಿ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಲಿಂಗರಾಜಗೌಡ ಪಾಟೀಲ ಮಾತನಾಡಿ, ಪಟ್ಟಣದ ಪ್ರತಿ ವಾರ್ಡಿನಲ್ಲಿ ಜಿಮ್, ಕುಳಿತುಕೊಳ್ಳಲು ಆಸನಗಳು, ಮಕ್ಕಳಿಗೆ ಆಟಿಕೆ ಸಾಮಗ್ರಿಗಳು, ನೀರು, ಬೆಳಕು ಸೇರಿದಂತೆ ಎಲ್ಲ ಸೌಲಭ್ಯಗಳುಳ್ಳ ಉದ್ಯಾನ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿರಿಸುವುದು, ಸ್ಮಶಾನ ಅಭಿವೃದ್ಧಿ ಹಾಗೂ ಎಲ್ಲ ರೀತಿಯ ವ್ಯವಸ್ಥೆ ಮಾಡಲು ಹಣ ಮೀಸಲಿಡುವುದು, ನೂತನವಾದ ಶವ ವಾಹನ ಕೊಳ್ಳುವುದು, ಹಿರಿಯ ನಾಗರಿಕರು ಪುರಸಭೆ ಕಚೇರಿಗೆ ತೆರಿಗೆ ಕಟ್ಟಲು ಬಂದಾಗ ಅವರಿಗೆ ಕುಳಿತುಕೊಳ್ಳಲು ಪ್ರತ್ಯೇಕ ಆಸನದ ವ್ಯವಸ್ಥೆ ಹಾಗೂ ಕಚೇರಿಯಲ್ಲಿಯೇ ತೆರಿಗೆ ಕಟ್ಟುವ ಅವಕಾಶ ಮಾಡಲು ಹಣ ಕಾಯ್ದಿರಿಸಬೇಕು ಎಂದು ಸಲಹೆ ನೀಡಿದರು.

ಸದಸ್ಯ ನಾಗರಾಜ ಹೊಂಬಳಗಟ್ಟಿ ಮಾತನಾಡಿ, ಪಟ್ಟಣದ ಬಡವರು, ಕಾರ್ಮಿಕರ ಕುಟುಂಬದವರು ಯಾರಾದರೂ ಮರಣ ಹೊಂದಿದರೆ ಅವರ ಶವ ಸಂಸ್ಕಾರಕ್ಕೆ ಆ ಕುಟುಂಬದ ಸದಸ್ಯರಿಗೆ ₹2 ಸಾವಿರ ನೀಡಬೇಕು. ಅದಕ್ಕಾಗಿ ಬರುವ ಬಜೆಟ್‌ನಲ್ಲಿ ಹಣ ಕಾಯ್ದಿರಿಸಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಮಾತನಾಡಿ, ಎಲ್ಲರ ಸಲಹೆ-ಸೂಚನೆಗಳನ್ನು ಪಡೆದು ಬಜೆಟ್ ಮಂಡಿಸುವುದಾಗಿ ಹೇಳಿದರು. ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಸಂತೋಷ ಹಿರೇಮನಿ, ಶಿವಾನಂದ ಬಾರಕೇರ, ರೆಹೆಮಾನಸಾಬ್ ಮಲ್ಲನಕೇರಿ, ದೇವಕ್ಕ ದಂಡಿನ, ಪ್ರಕಾಶ ಹಲವಾಗಲಿ ಉಪಸ್ಥಿತರಿದ್ದರು.