ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಆ.22 ರಿಂದ ತೆರಿಗೆ ವಸೂಲಾತಿ ಅಭಿಯಾನ ಪ್ರಾರಂಭಗೊಂಡಿದ್ದು, ಸೆ.5ರವರೆಗೆ ಕರ ವಸೂಲಾತಿಗಾಗಿ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ತಿಳಿಸಿದ್ದಾರೆ.ಗ್ರಾಮ ಪಂಚಾಯಿತಿಗಳು ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಸಶಕ್ತ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಆರ್ಥಿಕವಾಗಿ ಸಬಲೀಕರಣ ಹೊಂದುವ ಅವಶ್ಯಕತೆ ಇರುತ್ತದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 200 (7) ರಲ್ಲಿ ನಿರ್ಧಿಷ್ಟ ಪಡಿಸಿರುವಂತೆ ಗ್ರಾಮ ಪಂಚಾಯಿತಿಗೆ ಸಲ್ಲಿಕೆ ಆಗಬೇಕಾಗಿರುವ ತೆರಿಗೆಯಲ್ಲಿ ಶೇ.100ರಷ್ಟು ವಸೂಲಿ ಮಾಡುವುದು ಗ್ರಾಮ ಪಂಚಾತಿಯ ಪ್ರಾಥಮಿಕ ಹೊಣೆಗಾರಿಕೆಯಾಗಿರುತ್ತದೆ. ಈ ದಿಸೆಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಕ್ರೂಢೀಕರಿಸಿಕೊಳ್ಳಲು ಕರವಸೂಲಾತಿ ಅಭಿಯಾನದ ಪ್ರಕ್ರಿಯೆಯನ್ನು ಒಂದು ವಿಶೇಷ ಅಂದೋಲನವನ್ನಾಗಿ ನಡೆಸಬೇಕಾಗಿರುತ್ತದೆ. ಎಲ್ಲಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಒಳಗೊಂಡಂತೆ ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ತಂಡವನ್ನು ರಚಿಸಿ, ಸೆ.5ರವರೆಗೆ ಕಡ್ಡಾಯವಾಗಿ ತೆರಿಗೆ ವಸೂಲಾತಿ ಅಭಿಯಾನ ಹಮ್ಮಿಕೊಳ್ಳಬೇಕು ಎಂದವರು ನಿರ್ದೇಶನ ನೀಡಿದ್ದಾರೆ.
ಜಿಲ್ಲೆಯ ಆಯಾ ತಾಲೂಕಿನ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು, ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕುಂಠಿತವಾಗಿರುವ ಕಂದಾಯ ವಸೂಲಾತಿ ಪ್ರಗತಿ ಹೆಚ್ಚಿಸಬೇಕು. ತಪ್ಪಿದ್ದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದು ಎಂದು ಜಿಪಂ ಸಿಇಒ ಸೋಮಶೇಖರ್ ತಿಳಿಸಿದ್ದಾರೆ.ಜಿಲ್ಲೆಯ ಎಲ್ಲ ತಾಲೂಕುಗಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೆ ಕರ ವಸೂಲಾತಿ ಆಂದೋಲನ ಪ್ರಾರಂಭವಾಗಿದ್ದು, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು, ಪಿಡಿಒಗಳು, ಕಾರ್ಯದರ್ಶಿಗಳು, ನೀರಗಂಟಿಗಳು ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ಕರ ವಸೂಲಾತಿಯನ್ನು ಆರಂಭಿಸಿದ್ದು, ಮನೆಗಳು, ಅಂಗಡಿ ಮುಂಗಟ್ಟು, ಮಳಿಗೆಗಳಿಗೆ ತೆರಳಿ ಕರ ವಸೂಲಾತಿ ಕೈಗೊಳ್ಳುತ್ತಿದ್ದಾರೆ. ಅಧಿಕಾರಿಗಳು ನಿಗದಿತ ಗುರಿಯನ್ನು ಸಾಧಿಸಿ, ಅಭಿವೃದ್ಧಿಯ ಉದ್ದೇಶದಿಂದ ಗ್ರಾಮ ಪಂಚಾಯತಿಗಳನ್ನು ಆರ್ಥಿಕವಾಗಿ ಸಬಲಗೊಳಿಸಲು ಮುಂದಾಗಬೇಕು ಎಂದು ಸೋಮಶೇಖರ್ ತಿಳಿಸಿದ್ದಾರೆ.