ಸಾರಾಂಶ
ಕೇಂದ್ರ ಸರ್ಕಾರದ ನಿರ್ದೇಶನ ಹಿನ್ನೆಲೆಯಲ್ಲಿ ಆಸ್ತಿಕರ ಶೇ. 3 ಹಾಗೂ ವಾಣಿಜ್ಯ ಮಳಿಗೆಗಳಿಗೆ ಶೇ 5ರಷ್ಟು ಆಸ್ತಿ ತೆರಿಗೆ ಹೆಚ್ಚಿಸುವುದು ಅನಿವಾರ್ಯ ಎಂದು ಅಧಿಕಾರಿಗಳು ಸದಸ್ಯರಿಗೆ ಮನವರಿಕೆ ಮಾಡಿದರು.
ಹುಬ್ಬಳ್ಳಿ:
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಜನರಿಗೆ ಶಾಕ್ ನೀಡಿದೆ. ಇನ್ಮುಂದೆ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿವರ್ಷ ತೆರಿಗೆ ಹೆಚ್ಚಿಸಲು ಸಾಮಾನ್ಯಸಭೆ ಹಸಿರು ನಿಶಾನೆ ತೋರಿಸಿದೆ. ಜತೆಗೆ ಈ ವರ್ಷ 2022-23, 2023-24ರ ಸಾಲಿನ ಕರ ಪಾವತಿಸಿದವರಿಂದಲೂ ಅರಿಯರ್ಸ್ ಪಡೆಯಲು ಕೂಡ ಒಪ್ಪಿಗೆ ಸೂಚಿಸಿದೆ.ನಗರದ ಪಾಲಿಕೆ ಸಭಾಭವನದಲ್ಲಿ ಬುಧವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ವಿಸ್ತೃತ ಚರ್ಚೆ ಬಳಿಕ ತೆರಿಗೆ ಹೆಚ್ಚಳಕ್ಕೆ ಅನುಮೋದನೆ ನೀಡಿತು.
ಪಾಲಿಕೆ ವ್ಯಾಪ್ತಿಯಲ್ಲಿರುವ ರೈತರಿಗೆ ವಿನಾಯಿತಿ ನೀಡುವ ಕುರಿತು ಚರ್ಚಿಸಲಾಯಿತಾದರೂ ಅಂತಿಮ ನಿರ್ಣಯ ಪ್ರಕಟವಾಗಲಿಲ್ಲ. ಕೇಂದ್ರ ಸರ್ಕಾರದ ನಿರ್ದೇಶನ ಹಿನ್ನೆಲೆಯಲ್ಲಿ ಆಸ್ತಿಕರ ಶೇ. 3 ಹಾಗೂ ವಾಣಿಜ್ಯ ಮಳಿಗೆಗಳಿಗೆ ಶೇ 5ರಷ್ಟು ಆಸ್ತಿ ತೆರಿಗೆ ಹೆಚ್ಚಿಸುವುದು ಅನಿವಾರ್ಯ ಎಂದು ಅಧಿಕಾರಿಗಳು ಸದಸ್ಯರಿಗೆ ಮನವರಿಕೆ ಮಾಡಿದರು. ಜತೆಗೆ ಗ್ರಾಮೀಣ ಪ್ರದೇಶಕ್ಕೆ ಸ್ಲ್ಯಾಬ್‌ನ್ನು ಕಡಿಮೆ ಮಾಡಲು ನಿರ್ಧರಿಸಲಾಯಿತು. ಆದರೆ ಎಷ್ಟು ಕಡಿಮೆ ಎನ್ನುವುದು ಮಾತ್ರ ಸಭೆಯಲ್ಲಿ ನಿರ್ಧರಿಸಲಿಲ್ಲ.ಈ ನಡುವೆ ಸರ್ಕಾರ 2022-23 ಹಾಗೂ 2023-24ರಿಂದಲೇ ಆಸ್ತಿಕರ ಹೆಚ್ಚಿಸುವ ಕುರಿತು ಸುತ್ತೋಲೆ ಹೊರಡಿಸಿತ್ತು. ಅದು ಪಾಲಿಕೆಗೆ ಈಗಷ್ಟೇ ಬಂದಿದೆ. ಹೀಗಾಗಿ ಹಿಂದಿನ ಎರಡು ವರ್ಷದ ಆಸ್ತಿಕರವನ್ನು ಈ ಸಲ ಬಾಕಿ ಲೆಕ್ಕ ಹಾಕಿ ವಸೂಲಿ ಮಾಡಲು ಸಾಮಾನ್ಯಸಭೆ ನಿರ್ಧರಿಸಿದೆ. ಇದಕ್ಕೂ ಪೂರ್ವದಲ್ಲಿ ಟ್ರೇಡ್ ಲೈಸೆನ್ಸ್ ನೀಡುವ ವಿಚಾರ ಸಭೆಯಲ್ಲಿ ಕೋಲಾಹಲ ಎಬ್ಬಿಸಿತು. ಬಳಿಕ ಹಿಂದಿನ ಠರಾವು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುವ ಜತೆಗೆ ಸೂಕ್ತ ದಾಖಲಾತಿ ಪರಿಶೀಲನೆಯೊಂದಿಗೆ ಟ್ರೇಡ್ ಲೈಸೆನ್ಸ್ ನೀಡಬೇಕೆಂದು ಮೇಯರ್ ಸೂಚಿಸಿದರು.
ಹರಾಜು ಹಾಕಿ:ಪಾಲಿಕೆ ಒಡೆತನ 1545 ವಾಣಿಜ್ಯ ಮಳಿಗೆಗಳಿಗೆ ಮಾರುಕಟ್ಟೆ ದರದ ಆಧಾರದ ಮೇಲೆ ಬಾಡಿಗೆ ನಿಗದಿಪಡಿಸಲು ಅನುವು ಮಾಡಿಕೊಡುವ ಪ್ರಸ್ತಾವನೆಗೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಾಡಿಗೆ ನಿಗದಿಗೆ ಹರಾಜು ಪ್ರಕ್ರಿಯೆ ಮಾಡಲು ನಿರ್ಧರಿಸಲಾಯಿತು.
ಸ್ಪರ್ಧಾತ್ಮಕವಾಗಿ ಹರಾಜು ಮಾಡಬೇಕು. ಇದರಿಂದ ಕನಿಷ್ಠ ₹ 40ರಿಂದ ₹ 50 ಕೋಟಿ ಬರುತ್ತದೆ. ಹರಾಜಿನ ಮೂಲಕವೇ ಬಾಡಿಗೆ ನಿರ್ಧರ ಮಾಡಬೇಕು. ಹಾಗಾಗಿ ಲಿಲಾವು ಮಾಡಬೇಕೆಂದು ಸದಸ್ಯರು ಪಕ್ಷಬೇಧ ಮರೆತು ಒತ್ತಾಯಿಸಿದರು.