ಹೊಸಪೇಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರ ಸಂಘದ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ವಿಜಯನಗರ ಜಿಲ್ಲೆಯ ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರು ಪ್ರತಿಭಟನೆ ನಡೆಸಿದರು.

ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಿಂದ ವಾಲ್ಮೀಕಿ ವೃತ್ತ, ಮದಕರಿ ನಾಯಕ ವೃತ್ತ, ಮುಖ್ಯ ಮಸೀದಿ, ಗಾಂಧಿ ಚೌಕ್, ಮೂರಂಗಡಿ ವೃತ್ತ, ಪುಣ್ಯಮೂರ್ತಿ ವೃತ್ತ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ರಸ್ತೆ, ಕನಕದಾಸ ವೃತ್ತ ಮೂಲಕ ಪುನೀತ್ ರಾಜ್‌ ಕುಮಾ‌ರ್ ವೃತ್ತಕ್ಕೆ ಆಗಮಿಸಿ, ಪುನೀತ್ ರಾಜ್‌ ಕುಮಾರ್ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಿಐಟಿಯು ನೇತೃತ್ವದ ರಾಜ್ಯ ಟ್ಯಾಕ್ಸಿಹಾಗೂ ಮ್ಯಾಕ್ಸಿ ಕ್ಯಾಪ್‌ ಚಾಲಕರ ಸಂಘದ ರಾಜ್ಯ ಸಂಚಾಲಕ ಕೆ.ಎಂ. ಸಂತೋಷಕುಮಾರ್ ಮಾತನಾಡಿ, ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಜೊತೆ ಇನ್ನಿತರೆ ಸಾರಿಗೆ ವಾಹನಗಳಿಗೆ ಜಿಪಿಎಸ್ ಪ್ಯಾನಿಕ್ ಬಟನ್ ವ್ಯವಸ್ಥೆ ರದ್ದು ಮಾಡಬೇಕು, ರಿಚಾರ್ಜ್ ತಾಂತ್ರಿಕ ದೋಷ ಸರಿಪಡಿಸಬೇಕು. ಕೇಂದ್ರ ಸರ್ಕಾರ ಯುದ್ಧದ ಹೆಸರಿನಲ್ಲಿ ಕಚ್ಚಾ ತೈಲದ ಬೆಲೆ ಏರಿಸಿದೆ. ತೈಲ ಉತ್ಪನ್ನಗಳಾದ ಡಿಸೇಲ್, ​ಪೆಟ್ರೋಲ್, ಎಲ್‌ಪಿಜಿ ಗ್ಯಾಸ್‌ ಬೆಲೆ ಇಳಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಚನ್ನಬಸವನಗೌಡ, ವೆಂಕಟೇಶ್‌ ಕುಲಕರ್ಣಿ, ಸುರೇಶ್‌, ರಾಮು, ಮಹಾಂತೇಶ್‌, ಸಿಐಟಿಯುನ ಜಿಲ್ಲಾ ಸಂಚಾಲಕಿ ಕೆ.ಎಂ. ಸ್ವಪ್ನ, ಸಿಐಟಿಯು ಮುಖಂಡರಾದ ಬಸವರಾಜ, ಎನ್. ಯಲ್ಲಾಲಿಂಗ, ವಿರೇಶ್, ಸುಧಾಕರ, ಭಾಷಾ ಸೇರಿದಂತೆ ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಹೊಸಪೇಟೆ ನಗರದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರ ಸಂಘದ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ವಿಜಯನಗರ ಜಿಲ್ಲೆಯ ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರು ಪ್ರತಿಭಟನೆ ನಡೆಸಿದರು.