ಸಾರಾಂಶ
ಅಂಕೋಲಾ: ಸಂಕಷ್ಟದ ಪರಿಸ್ಥಿತಿಯ ನಡುವೆ ಬದುಕು ಸವೆಸುತ್ತಿರುವ ಟಾಕ್ಸಿ ಚಾಲಕರು ಹಾಗೂ ಮಾಲಕರ ಶ್ರೇಯೋಭಿವೃದ್ಧಿಯ ಧ್ಯೋತಕವಾಗಿ ಆಯೋಜಿಸಲಾದ ಕ್ರಿಕೆಟ್ ಪಂದ್ಯಾವಳಿಯು ಸಂಘದ ಕ್ರಿಯಾಶೀಲತೆಯನ್ನು ಸಾದರಪಡಿಸುತ್ತದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹೇಳಿದರು.
ಇಲ್ಲಿನ ಜೈಹಿಂದ್ ಮೈದಾನದಲ್ಲಿ ಸಿದ್ದಿವಿನಾಯಕ ಟಾಕ್ಸಿ ಚಾಲಕರು ಹಾಗೂ ಮಾಲಕರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಏರುತ್ತಿರುವ ಇಂಧನ ದರ, ವಿಮೆ, ಪರ್ಮಿಟ್ ನಡುವೆ ಟಾಕ್ಸಿ ಉದ್ಯಮವು ನೆಲಕಚ್ಚುವಂತಾಗಿದೆ. ಇದರ ನಡುವೆಯು ಟಾಕ್ಸಿ ಸಂಘದವರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವುದು ಮಾದರಿಯಾಗಿದೆ ಎಂದರು.
ಸಂಘದ ಕಾನೂನು ಸಲಹೆಗಾರ ನಾಗಾನಂದ ಬಂಟ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಶ್ರೇಯೋಭಿವೃದ್ಧಿ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಂಘವನ್ನು ಇನ್ನಷ್ಟು ಬಲ ಪಡಿಸಲಾಗುವುದು ಎಂದರು.ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಸಂಘದ ಕಾರ್ಯದರ್ಶಿ ಸತೀಶ ಕಾಮತ, ನಿಕಟಪೂರ್ವ ಅಧ್ಯಕ್ಷ ಪ್ರವೀಣ ನಾಯ್ಕ, ಅಂಕೋಲಾ ಬ್ಯಾಂಕಿನ ನಿರ್ದೇಶಕ ನಾಗೇಂದ್ರ ನಾಐಕ ಕಲಬಾಗ, ಹಿರಿಯ ಚಾಲಕರಾದ ದಿನಕರ ಅಂಕೋಲೆಕರ, ಕಿಶೋರ ನಾಯ್ಕ, ಮಂಜುನಾಥ ನಾಯ್ಕ, ಟೆಂಪೊ ಯುನಿಯನ್ ಅಧ್ಯಕ್ಷ ಬಾಳಾ ನಾಯ್ಕ, ಆಟೋ ಯೂನಿಯನ್ ಉಪಾಧ್ಯಕ್ಷ ಗಂಗಾಧರ ಗಾಂವಕರ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಗಜು ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಅಕ್ಷಯ ಅಂಕೋಲೆಕರ ಸ್ವಾಗತಿಸಿದರು. ಆರ್ಯ ಶೆಟ್ಟಿ ಪ್ರಾರ್ಥಿಸಿದರು.